‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಬಂದಿದ್ದ ಸುದೀಪ್; ಇಲ್ಲಿದೆ ಅಪರೂಪದ ವಿಡಿಯೋ
ಕಿಚ್ಚ ಸುದೀಪ್ ಅವರ 2006ರ ಅಪರೂಪದ ಸಂದರ್ಶನ ಒಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಅವರು ತಮ್ಮ ಚಲನಚಿತ್ರ ‘ಮೈ ಆಟೋಗ್ರಾಫ್’ ಮತ್ತು ನಿರ್ದೇಶನದ ಬಗ್ಗೆ ಮಾತನಾಡಿದ್ದರು. ನಟನೆ ಮತ್ತು ನಿರ್ದೇಶನದ ಅನುಭವಗಳನ್ನು ಹಂಚಿಕೊಂಡು, ಚಲನಚಿತ್ರ ರಂಗದಲ್ಲಿನ ತಮ್ಮ ಆಸೆ ಮತ್ತು ಗುರಿಗಳನ್ನು ಬಹಿರಂಗಪಡಿಸಿದ್ದರು.

ಕಿಚ್ಚ ಸುದೀಪ್ (Sudeep) ಅವರು ಅನೇಕ ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ. ಹಲವು ರಿಯಾಲಿಟಿ ಶೋಗೆ ಅವರು ಅತಿಥಿ ಆಗಿ ಬಂದಿದ್ದು ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಬಿಗ್ ಬಾಸ್ ಶೋನ ನಡೆಸಿಕೊಡುತ್ತಾರೆ. ಇಂದು (ಸೆಪ್ಟೆಂಬರ್ 2) ಅವರ ಜನ್ಮದಿನ. ಈ ವೇಳೆ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು.
ಅದು 2006ರ ಸಮಯ. ಸುದೀಪ್ ಅವರು ನಟನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆಗಲೇ ಅವರು ‘ಮೈ ಆಟೋಗ್ರಾಫ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಇತ್ತು. ಈ ವೇಳೆ ಅವರು ಸಿನಿಮಾ ಬಗ್ಗೆ ಮಾತನಾಡಿದ್ದರು. ಚಂದನದ ಪ್ರಖ್ಯಾತ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಭಾಗವಾಗಿ ಅವರು ಈ ಸಂದರ್ಶನ ನೀಡಿದ್ದರು ಅನ್ನೋದು ವಿಶೇಷ.
‘ನಿರ್ದೇಶನಕ್ಕೆ ನಟನೆಯ ಜೊತೆಗೆ ಹೋಗಿದ್ದೇನೆ. ಇಷ್ಟೇ ಜೀವನ ಸಾಕು, ರಿಸ್ಕ್ ಬೇಡ ಎಂದು ಹೇಳುವವರು ಒಂದು ಕಡೆ. ಇಷ್ಟಕ್ಕೆ ಖುಷಿಪಡಲ್ಲ ಎಂಬುದು ಮತ್ತೊಂದು ಕಡೆ. ನಾನು ಎರಡನೇ ಸಾಲಿಗೆ ಸೇರುತ್ತೇನೆ. ಬೇರೆ ಏನಾದರೂ ಮಾಡಬೇಕು ಎಂಬುದು ನನ್ನ ಆಸೆ. ಅದಕ್ಕೆ ಪ್ರೊಡಕ್ಷನ್ ಮಾಡಿದೆ. ನಿರ್ದೇಶಕನಾಗಬೇಕು ಎಂಬುದು ನನ್ನ ಮೊದಲ ಆಸೆ ಆಗಿತ್ತು. ಸಂದರ್ಭ ನನ್ನನ್ನು ನಟನನ್ನಾಗಿ ಮಾಡಿತು’ ಎಂದಿದ್ದರು ಸುದೀಪ್.
ಇದನ್ನೂ ಓದಿ: ನಿಮ್ಮ ಲೈಫ್ ನಿಧಾನ ಎನಿಸುತ್ತಿದೆಯೇ? ಸುದೀಪ್ ಹೇಳಿದ ಈ ಜೀವನ ಪಾಠ ಕೇಳಿ
‘ಪ್ರೀತಿಸದೆ, ಅನುಭವಿಸದೇ ಈ ಸಿನಿಮಾ (ಮೈ ಆಟೋಗ್ರಾಫ್) ಮಾಡೋಕೆ ಆಗಲ್ಲ ಎಂಬುದು ನನಗೆ ಗೊತ್ತಾಯ್ತು. ಈ ಸಿನಿಮಾ ನೋಡಿ ನಾನು ರಿಮೇಕ್ ಮಾಡಬೇಕು ಎಂದೆನಿಸಿತು. ತೆಲುಗಿನಲ್ಲಿ ಫ್ಲಾಪ್ ಆಗಿದೆ ಎಂದು ನನಗೆ ಹೇಳಿದರು. ಆದರೂ ನಾನು ಮಾಡಿದೆ. ಒಂದೊಳ್ಳೆಯ ಕಥೆ ಇದು. ಸಿನಿಮಾ ನೋಡಿ ಸ್ಯಾಟಿಸ್ಫೈ ಆಯಿತು’ ಎಂದಿದ್ದರು ಸುದೀಪ್.
ಸುದೀಪ್ ಹಳೆಯ ಸಂದರ್ಶನ
‘ನಾನು ಫೀಲ್ ಮಾಡಿದ್ದನ್ನು ಸಿನಿಮಾ ಮಾಡಿದ್ದೇನೆ. ಸಮಯ ತೆಗೆದುಕೊಂಡು, ಅನುಭವಿಸಿ ಸಿನಿಮಾ ಮಾಡಿದಾಗಲೇ ಒಳ್ಳೆಯ ಸಿನಿಮಾ ಬರುತ್ತದೆ’ ಎಂದು ಸುದೀಪ್ ಹೇಳಿದ್ದಾರೆ. ‘ಕಥೆ ಮಾಡಿದ ಬಳಿಕ ಪಾತ್ರಗಳನ್ನು ಆಯ್ಕೆ ಮಾಡಿ. ನಮ್ಮಲ್ಲಿ ಇನ್ನೂ ಸ್ಟಾರ್ಕಾಸ್ಟ್ ನಡೆಯುತ್ತಿದೆ. ಹಾಗಾಗಬಾರದು. ಸುದೀಪ್ ಡೇಟ್ಸ್ ಇದೆ ಸಿನಿಮಾ ಮಾಡೋಣ ಎನ್ನುವರೇ ಹೆಚ್ಚು’ ಎಂದಿದ್ದರು ಸುದೀಪ್. ಸುದೀಪ್ ಜನ್ಮದಿನದ ಪ್ರಯುಕ್ತ ಹೊಸ ಚಿತ್ರಗಳು ಅನೌನ್ಸ್ ಆಗುತ್ತಿವೆ. ಹೊಸ ಪೋಸ್ಟರ್ಗಳು ಕೂಡ ಬಿಡುಗಡೆ ಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







