‘ದಿ ಡೆವಿಲ್’ ಗೆಲ್ಲಬೇಕು: ದರ್ಶನ್ ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್
ಪ್ರಕಾಶ್ ವೀರ್ ನಿರ್ದೇಶನದ ‘ದಿ ಡೆವಿಲ್’ ಸಿನಿಮಾಗೆ ದರ್ಶನ್ ಅವರ ಅನುಪಸ್ಥಿತಿಯಲ್ಲೇ ಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಸುಮಲತಾ ಅಂಬರೀಷ್ ಅವರು ಮಾತನಾಡಿದ್ದಾರೆ. ಈ ಸಿನಿಮಾ ಖಂಡಿತಾ ಯಶಸ್ವಿ ಆಗಬೇಕು ಎಂದಿದ್ದಾರೆ. ‘ದೇವರಿದ್ದಾನೆ, ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ಸುಮಲತಾ ಅಂಬರೀಷ್.

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ (Devil Movie) ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗಿದೆ. ಡಿಸೆಂಬರ್ 11ರಂದು ಈ ಸಿನಿಮಾ ತೆರೆ ಕಾಣಲಿದೆ. ಸದ್ಯಕ್ಕೆ ದರ್ಶನ್ (Darshan) ಅವರು ಕೊಲೆ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಹಲವು ಕಡೆಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಈ ಸಮಯದಲ್ಲಿ ದರ್ಶನ್ ಲಭ್ಯವಿದ್ದಿದ್ದರೆ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿತ್ತು. ಆದರೆ ಅವರು ಇಲ್ಲದ ಕಾರಣ ಪ್ರಚಾರಕ್ಕೆ ಕೊಂಚ ಹಿನ್ನಡೆ ಆಗಿರಬಹುದಾ ಎಂಬ ಪ್ರಶ್ನೆಗೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಉತ್ತರಿಸಿದ್ದಾರೆ.
ಅಂಬರೀಷ್ ಕುಟುಂಬ ಮತ್ತು ದರ್ಶನ್ ನಡುವೆ ಬಹಳ ಆತ್ಮೀಯತೆ ಇತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಆರೋಪಿಯಾದ ಬಳಿಕ ಹಲವರಿಂದ ಅಂತರ ಕಾಯ್ದುಕೊಂಡರು. ಚಿತ್ರರಂಗದಲ್ಲಿ ಈ ಮೊದಲು ಆಪ್ತರು ಎನಿಸಿಕೊಂಡಿದ್ದವರು ಕೂಡ ಈಗ ದರ್ಶನ್ ಜೊತೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇಂದು (ನ.24) ಅಂಬರೀಷ್ ಅವರ ಪುಣ್ಯಸ್ಮರಣೆ. ಈ ವೇಳೆ ಮಾಧ್ಯಮಗಳ ಜೊತೆ ಸುಮಲತಾ ಅಂಬರೀಶ್ ಮಾತನಾಡಿದರು.
‘ಆಗಿ ಹೋಗಿರುವ ವಿಷಯದ ಬಗ್ಗೆ ಮಾತನಾಡಿದರೆ ಈಗ ಏನೂ ಪ್ರಯೋಜನ ಇಲ್ಲ. ಮುಂದೆ ಒಳ್ಳೆಯದಾಗಲಿ ಅಂತ ಹಾರೈಸೋಣ. ಡೆವಿಲ್ ಸಿನಿಮಾ ತಂಡದವರು ಪ್ರಚಾರ ಸರಿಯಾಗಿಯೇ ಮಾಡುತ್ತಿದ್ದಾರೆ ಎನಿಸುತ್ತದೆ. ಯಾವತ್ತೂ ನಾನು ಸಿನಿಮಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಂಡಿರಲ್ಲ. ನಾನು ದರ್ಶನ್ ಅವರ ಹಿತೈಶಿ. ಆ ಸಿನಿಮಾ ಖಂಡಿತವಾಗಿಯೂ ಯಶಸ್ವಿ ಆಗಬೇಕು ಎಂಬುದು ನನ್ನ ಹಾರೈಕೆ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ.
‘ದರ್ಶನ್ ಅವರಿಗೆ ಒಳ್ಳೆಯದೇ ಆಗಬೇಕು ಅಂತ ನಾವೆಲ್ಲರೂ ಹಾರೈಸುತ್ತೇನೆ. ಈಗ ಅವರು ಒಂದು ಸವಾಲಿನ ಪರಿಸ್ಥಿತಿಯಲ್ಲಿ ಇದ್ದಾರೆ. ಸತ್ಯವನ್ನು ಯಾರೂ ಕೂಡ ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ದೇವರಿದ್ದಾನೆ, ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅವರ ಅಭಿಮಾನಿಗಳು ಡೆವಿಲ್ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ನಾವು ಕೂಡ ಕಾಯುತ್ತಿದ್ದೇವೆ’ ಎಂದಿದ್ದಾರೆ ಸುಮಲತಾ ಅಂಬರೀಷ್.
ಇದನ್ನೂ ಓದಿ: ಜೈಲಿನ ವಿಡಿಯೋ ವೈರಲ್ ಬಗ್ಗೆ ದರ್ಶನ್ ಆಪ್ತ ಧನ್ವೀರ್ಗೆ ಪೊಲೀಸರ ಡ್ರಿಲ್
ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ದರ್ಶನ್ ಅವರಿಗೆ ಜೋಡಿ ಆಗಿ ನಟಿ ರಚನಾ ರೈ ಅವರು ಅಭಿನಯಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಹಿಟ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




