
ಹಲವು ಸಿನಿಮಾಗಳು ಮರು ಬಿಡುಗಡೆಯಾಗಿ ಗಮನ ಸೆಳೆಯುತ್ತಿವೆ. ಅಂತಹ ಸಿನಿಮಾಗಳ ಸಾಲಿಗೆ ‘ಸೈನೈಡ್’ (Cyanide) ಕೂಡ ಸೇರ್ಪಡೆ ಆಗಲಿದೆ. ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆಯ ನಂತರ ನಡೆದ ಘಟನೆಗಳನ್ನು ಆಧರಿಸಿ ‘ಸೈನೈಡ್’ ಸಿನಿಮಾ (Cyanide Kannada Movie) ಮೂಡಿಬಂದಿತ್ತು. ಕೆಂಚಪ್ಪ ಗೌಡ ಮತ್ತು ಎಸ್. ಇಂದುಮತಿ ಅವರು ‘ಅಕ್ಷಯ್ ಕ್ರಿಯೇಷನ್ಸ್’ ಮೂಲಕ ನಿರ್ಮಾಣ ಮಾಡಿದ್ದ ಈ ಸಿನಿಮಾವನ್ನು ಎಎಂಆರ್ ರಮೇಶ್ ಅವರು ನಿರ್ದೇಶಿಸಿದ್ದರು. ತಾರಾ (Tara Anuradha), ರವಿಕಾಳೆ, ರಂಗಾಯಣ ರಘು, ಮಾಳವಿಕಾ, ಉಷಾ ಭಂಡಾರಿ, ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೇ 23ಕ್ಕೆ ‘ಸೈನೈಡ್’ ಸಿನಿಮಾ ಮರು ಬಿಡುಗಡೆ ಆಗಲಿದೆ.
‘ಸೈನೈಡ್’ ಸಿನಿಮಾ 2006ರಲ್ಲಿ ಬಿಡುಗಡೆ ಆಗಿತ್ತು. ಈಗ 20 ವರ್ಷಗಳ ನಂತರ ಕೂಡ ಈ ಸಿನಿಮಾದ ವಿಷಯ ಪ್ರಸ್ತುತವಾಗಿದೆ. ಹಾಗಾಗಿ ಮರು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಶಾಸಕ ಹ್ಯಾರಿಸ್ ಅವರು ಮುಖ್ಯ ಅತಿಥಿಗಳಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ಸಿನಿಮಾದಲ್ಲಿನ ನಟನೆಗೆ ನಟಿ ತಾರಾ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಅವರು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿರ್ದೇಶಕ ಎಎಂಆರ್ ರಮೇಶ್ ಮಾತನಾಡಿ, ‘ಇದು ಸೂಕ್ಷ್ಮವಾದ ವಿಷಯ ಹೊಂದಿರುವ ಸಿನಿಮಾ ಆದ್ದರಿಂದ 2006ರಲ್ಲಿ ಬಿಡುಗಡೆ ಮಾಡುವಾಗ ಆತಂಕ ಇತ್ತು. ಆದರೆ ರಿಲೀಸ್ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಈಗ ಮತ್ತೆ ಹೊಸ ತಂತ್ರಜ್ಞಾನ ಅಳವಡಿಸಿ, 10 ನಿಮಿಷ ಅವಧಿಯನ್ನು ಹೆಚ್ಚಿಸಿ ಮರು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಸೈನೈಡ್’ ಸಿನಿಮಾಗೆ ಪ್ರೀಕ್ವೆಲ್ ಕೂಡ ಬರಲಿದೆ. ಅದರ ಕಾರ್ಯ ಪ್ರಗತಿಯಲ್ಲಿದೆ ಎಂದು ಎಎಂಆರ್ ರಮೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಟೆರರಿಸ್ಟ್ ಪಾತ್ರ ಮಾಡಿದ್ದನ್ನು ಉಷಾ ಭಂಡಾರಿ ನೆನಪಿಕೊಂಡರು. ನಿರ್ಮಾಪಕರಾದ ಕೆಂಚಪ್ಪ ಗೌಡ ಮತ್ತು ಎಸ್. ಇಂದುಮತಿ ಕೂಡ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ನಟಿ ತಾರಾ ಕೂಡ ಆ ದಿನಗಳನ್ನು ನೆನಪಿಸಿಕೊಂಡರು. ‘ನಾನು ಈ ಸಿನಿಮಾದಲ್ಲಿ ಮೃದುಲಾ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ಮಾಡಿದ್ದೆ. 20 ವರ್ಷಗಳ ಹಿಂದೆ ಶೂಟಿಂಗ್ ಮಾಡುವಾಗ ಮೃದುಲಾ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟಿದ್ದೆ. ಆದರೆ ಆಗಲಿಲ್ಲ. ಅವರ ಪತಿ ರಂಗನಾಥ್ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲಾ ಬಗ್ಗೆ ತಿಳಿದುಕೊಂಡು ಅಭಿನಯಿಸಿದ್ದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಿನಿಮಾದ ತುಣುಕು ನೋಡಿದರು’ ಎಂದು ತಾರಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.