‘ಕಾಂತಾರ ಚಾಪ್ಟರ್ 1’ ಸೆಟ್ನಲ್ಲಿ ಕಲಾವಿದ ಸಾವು, ತನಿಖೆಗೆ ಒತ್ತಾಯಿಸಿದ ಸಿನಿ ಕಾರ್ಮಿಕರ ಸಂಘ
Kantara Chapter 1: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಒಂದರ ಹಿಂದೊಂದು ಸಂಕಷ್ಟಕ್ಕೆ ಗುರಿಯಾಗುತ್ತಲೇ ಇದೆ. ಇತ್ತೀಚೆಗಷ್ಟೆ ಸಿನಿಮಾದಲ್ಲಿ ನಟಿಸುತ್ತಿದ್ದ ಜೂನಿಯರ್ ಕಲಾವಿದನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ರಿಷಬ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಲ್ ಇಂಡಿಯಾ ಸಿನಿ ಕಾರ್ಮಿಕ ಸಂಘ ಒತ್ತಾಯಿಸಿದೆ.

ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಈ ಹಿಂದೆ ಸಹ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನ ಪಲ್ಟಿಯಾಗಿ ಕೆಲವರಿಗೆ ಗಾಯಕಗಳಾಗಿತ್ತು. ಗಾಳಿಗೆ ಸೆಟ್ ಹಾರಿ ಹೋಗಿತ್ತು. ಸಿನಿಮಾಕ್ಕೆ ಕೆಲಸ ಮಾಡಲು ಬಂದ ಕೆಲ ಕಲಾವಿದರು ನಿರ್ಮಾಣ ಸಂಸ್ಥೆ ವಿರುದ್ಧ ಪ್ರತಿಭಟನೆ ಮಾಡಿದ್ದು ಸುದ್ದಿಯಾಗಿತ್ತು. ಅರಣ್ಯಕ್ಕೆ ಬೆಂಕಿ ಇಟ್ಟಿದ್ದಾರೆಂದು ಅರಣ್ಯ ಇಲಾಖೆ ನೊಟೀಸ್ ಕಳಿಸಿತ್ತು. ಇದೆಲ್ಲದರ ಬಳಿಕ ಈಗ ಸಿನಿಮಾ ಸೆಟ್ನಲ್ಲಿ ಕಲಾವಿದ ಸಾವನ್ನಪ್ಪಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ನಟಿಸುತ್ತಿದ್ದ ಕೇರಳ ಮೂಲದ ಕಲಾವಿದ ಕಪಿಲ್, ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಇದೀಗ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಸಾವಿನ ಬಗ್ಗೆ ನಿಖರ ತನಿಖೆ ನಡೆಸುವಂತೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ. ಅಲ್ಲದೆ ಮೃತ ಕಲಾವಿದನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸಹ ಆಗ್ರಹಿಸಿದೆ.
ಸಿನಿಮಾ ಸೆಟ್ಗಳಲ್ಲಿ ಕಲಾವಿದರು, ತಂತ್ರಜ್ಞರ ಸಾವುಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್, ‘ಇಂಡಿಯನ್ 2’, ‘ಸರ್ದಾರ್ 2’ ಸಿನಿಮಾ ಸೆಟ್ಗಳಲ್ಲಿ ಆಗಿರುವ ದುರ್ಘಟನೆ, ಕಾಂತಾರ ಚಾಪ್ಟರ್ 1 ಸಿನಿಮಾನಲ್ಲಿ ಆದ ದುರ್ಘಟನೆಗಳನ್ನು ಆತಂಕಕಾರಿ ಎಂದಿರುವ ಸಿನಿ ಕಾರ್ಮಿಕರ ಸಂಘ, ಇಂಥಹಾ ಘಟನೆಗಳು ನಡೆದಾಗ ನಿರ್ಮಾಣ ಸಂಸ್ಥೆಗಳು ಪ್ರಕರಣವನ್ನು ಮುಚ್ಚಿಹಾಕುವ, ಸಹ ಕಲಾವಿದರ ಮೇಲೆ ಪ್ರಭಾವ ಬೀರಿ ಜವಾಬ್ದಾರಿಯಿಂದ ವಿಮುಖರಾಗುವ ಕಾರ್ಯ ಮಾಡುತ್ತವೆ’ ಎಂದಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ಬಳಿಕ ಬಾಲಿವುಡ್ ನಟನ ಮನೆಗೂ ಬಂತು ಈ ಐಷಾರಾಮಿ ಕಾರು
ಹಾಗಾಗಿ ಈ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಮಾಡಬೇಕು ಎಂದಿರುವ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದೆ. ಅಲ್ಲದೆ, ಪ್ರಕರಣದಲ್ಲಿ ರಿಷಬ್ ಶೆಟ್ಟಿ ಮತ್ತು ಸಿನಿಮಾದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದೆ. ಇದರ ಜೊತೆಗೆ ಮೃತ ಕಪಿಲ್ ಕುಟುಂಬಕ್ಕೆ ‘ಕಾಂತಾರ ಚಾಪ್ಟರ್ 1’ ಚಿತ್ರತಂಡದ ಪರವಾಗಿ ಒಂದು ಕೋಟಿ ರೂಪಾಯಿ ಪರಿಹಾರ ಮೊತ್ತ ಕೊಡಬೇಕು ಎಂದು ಒತ್ತಾಯಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




