‘ದಿ ಡೆವಿಲ್’ ಚಿತ್ರಕ್ಕೆ ರಚನಾ ರೈ ನಾಯಕಿ ಆಗಲು ದರ್ಶನ್ ಹೇಳಿದ ಒಂದೇ ಮಾತು ಕಾರಣ
ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಜೊತೆ ಹೊಸ ನಟಿ ರಚನಾ ರೈ ಅವರು ಅಭಿನಯಿಸಿದ್ದಾರೆ. ಅವರಿಗೆ ಈ ಅವಕಾಶ ಸಿಕ್ಕಿದ್ದು ಆಡಿಷನ್ನಿಂದ. ಅವರು ಆಯ್ಕೆ ಆಗಲು ದರ್ಶನ್ ಹೇಳಿದ ಒಂದು ಮಾತು ಕಾರಣ. ಆ ಕುರಿತು ‘ಟಿವಿ9’ ಜೊತೆ ರಚನಾ ರೈ ಅವರು ಮಾತನಾಡಿದ್ದಾರೆ. ಶೂಟಿಂಗ್ ಅನುಭಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಚನಾ ರೈ (Rachan Rai) ಅವರು ‘ದಿ ಡೆವಿಲ್’ ಸಿನಿಮಾಗೆ ಹೀರೋಯಿನ್. ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ಟಿವಿ9 ಜೊತೆ ಮಾತಿಗೆ ಸಿಕ್ಕಿದ್ದಾರೆ. ನಟ ದರ್ಶನ್ (Darshan) ಜೊತೆ ಅಭಿನಯಿಸಿದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ? ತಮ್ಮ ಪಾತ್ರ ಯಾವ ರೀತಿ ಇದೆ? ತಾವು ಕಂಡಂತೆ ದರ್ಶನ್ ವ್ಯಕ್ತಿತ್ವ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ರಚನಾ ರೈ ಅವರು ಉತ್ತರಿಸಿದ್ದಾರೆ. ರಚನಾ ಅವರು ‘ದಿ ಡೆವಿಲ್’ (The Devil) ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆ ಆದರು. ಹಾಡುಗಳು ಸೂಪರ್ ಹಿಟ್ ಆಗಿವೆ.
‘ದಿ ಡೆವಿಲ್’ ಸಿನಿಮಾದ ಬಿಡುಗಡೆಗೂ ಮುನ್ನವೇ ಹಾಡುಗಳು ಗಮನ ಸೆಳೆದಿವೆ. ರಚನಾ ರೈ ಅವರು ಮಂಗಳೂರಿನ ಪುತ್ತೂರಿನಲ್ಲಿ ಹುಟ್ಟಿ ಬೆಳೆದವರು. ತುಂಬ ಸಿಂಪಲ್ ಹುಡುಗಿ. ಕಲೆ ಬಗ್ಗೆ ಅವರಿಗೆ ಮೊದಲಿನಿಂದಲೂ ಆಸಕ್ತಿ. ಭರತನಾಟ್ಯ ಕಲಿತವರು. ನಾಟಕದ ಬಗ್ಗೆ ಆಸಕ್ತಿ ಇತ್ತು. ಮಾಡೆಲಿಂಗ್ ಮಾಡುತ್ತಾ, ಆಡಿಷನ್ ನೀಡಿ ಅವರು ‘ದಿ ಡೆವಿಲ್’ ಸಿನಿಮಾಗೆ ಆಯ್ಕೆ ಆದರು. ‘ನಾನು ಇಲ್ಲಿ ಇರುವುದಕ್ಕೆ ಪ್ರಕಾಶ್ ಸರ್ ಕಾರಣ. ನಮ್ಮ ಕನ್ನಡದ ಹುಡುಗಿಗೆ, ಕರ್ನಾಟಕದ ಹುಡುಗಿಗೆ ಅವಕಾಶ ಕೊಡಿ ಅಂತ ದರ್ಶನ್ ಸರ್ ಹೇಳಿದ ಆ ಮಾತೇ ಕಾರಣ’ ಎಂದಿದ್ದಾರೆ ರಚನಾ ರೈ.
‘ನಾನೇ ನಾಯಕಿ ಅಂತ ಗೊತ್ತಾದಾಗ ನಂಬೋಕೆ ಆಗಲಿಲ್ಲ. ಶೂಟಿಂಗ್ ಶುರುವಾದಾಗಲೇ ನಂಬಿಕೆ ಬಂತು. ನಿರ್ದೇಶಕ ಪ್ರಕಾಶ್ ಅವರ ಸಿನಿಮಾದಲ್ಲಿ ನಟಿಯ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಆಡಿಷನ್ನಲ್ಲಿ ಸಿನಿಮಾದ ಕಷ್ಟದ ಭಾಗವನ್ನು ಕೊಟ್ಟು ನಟಿಸಲು ಹೇಳಿದರು. ಅದನ್ನು ನಾನು ಮಾಡಿ ತೋರಿಸಿದೆ. ಸಾವಿರಾರು ಜನರು ಆಡಿಷನ್ ಕೊಟ್ಟಿದ್ದರು’ ಎಂದು ರಚನಾ ರೈ ಅವರು ಹೇಳಿದ್ದಾರೆ.
‘ಈ ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೆ ಅದರದ್ದೇ ಆದ ಮಹತ್ವ ಇದೆ. ನನ್ನ ಪಾತ್ರ ಬಹಳ ಮುಖ್ಯವಾಗಿದೆ. ನನ್ನ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಸಿಕ್ಕಿದೆ. ಇಂಥ ದೊಡ್ಡ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ. ಪ್ರಕಾಶ್ ಸರ್ ಅವರು ಪರ್ಫೆಕ್ಟ್ ನಿರ್ದೇಶಕ. ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು ನಾನು. ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ಕಲಾವಿದರಿಗೆ ದೊಡ್ಡ ವಿಚಾರ. ಒಂದೇ ಸಿನಿಮಾದಲ್ಲಿ ನನಗೆ ಹಲವು ವಿಷಯವನ್ನು ಅವರು ಹೇಳಿಕೊಟ್ಟರು. ಗುರುಗಳು ಎಂದರೆ ಅವರ ರೀತಿ ಇರಬೇಕು’ ಎಂದಿದ್ದಾರೆ ರಚನಾ.
ಇದನ್ನೂ ಓದಿ: ದರ್ಶನ್ ಅಂಥಹಾ ವ್ಯಕ್ತಿಯ ನೋಡಿಯೇ ಇಲ್ಲ ಎಂದ ರಚನಾ: ಚಿತ್ರಗಳಲ್ಲಿ ನೋಡಿ ನಟಿಯ ಅಂದ
‘ಮೊದಲ ಬಾರಿ ದರ್ಶನ್ ಅವರನ್ನು ನೋಡಿದಾಗ ನನಗೆ ಭಯ ಆಯಿತು. ಆದರೆ ಶೂಟಿಂಗ್ ಆರಂಭ ಆದ ಬಳಿಕ ಸಪೋರ್ಟ್ ಮಾಡಿದರು. ಹಾಗಾಗಿ ಆರಾಮಾಗಿ ಕೆಲಸ ಮಾಡಿದೆ. ತುಂಬ ಮುಖ್ಯವಾದ ದೃಶ್ಯವನ್ನು ಮೊದಲ ದಿನವೇ ಶೂಟ್ ಮಾಡಿದೆವು. ನಾನು ಹೊಸಬಳು. ಕೆಲವು ಟೆಕ್ನಿಕಲ್ ಪದಗಳು ನನಗೆ ತಿಳಿಯುತ್ತಿರಲಿಲ್ಲ. ಸಮಾಧಾನದಿಂದ ಅವರು ಹೇಳಿಕೊಟ್ಟರು. ಅವರನ್ನು ನೋಡಿ ಸಾಕಷ್ಟು ಕಲಿತೆ’ ಎಂದು ರಚನಾ ರೈ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



