ಟಾಲಿವುಡ್​ನಲ್ಲಿ ಕನ್ನಡ ನಿರ್ದೇಶಕರ ಹವಾ; ಸ್ಟಾರ್ ನಟರ ಸಿನಿಮಾಗೆ ಆ್ಯಕ್ಷನ್​-ಕಟ್

| Updated By: ರಾಜೇಶ್ ದುಗ್ಗುಮನೆ

Updated on: Mar 28, 2023 | 6:30 AM

ಕನ್ನಡದ ಅನೇಕ ನಿರ್ದೇಶಕರು ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಅಲ್ಲಿನ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಟಾಲಿವುಡ್​ನಲ್ಲಿ ಕನ್ನಡ ನಿರ್ದೇಶಕರ ಹವಾ; ಸ್ಟಾರ್ ನಟರ ಸಿನಿಮಾಗೆ ಆ್ಯಕ್ಷನ್​-ಕಟ್
Follow us on

ಕನ್ನಡ ಚಿತ್ರರಂಗದ ವ್ಯಾಪ್ತಿ ದಿನಕಳೆದಂತೆ ಹೆಚ್ಚುತ್ತಿದೆ. ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ಕಾಂತಾರ’ (Kantara), ‘ಕೆಜಿಎಫ್ 2’ ಮೊದಲಾದ ಚಿತ್ರಗಳು ಸಖತ್ ಸದ್ದು ಮಾಡುತ್ತಿವೆ. ಹೀಗಿರುವಾಗಲೇ ಕನ್ನಡದ ಅನೇಕ ನಿರ್ದೇಶಕರು ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಅಲ್ಲಿನ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಪ್ರಶಾಂತ್​ ನೀಲ್, ಎ. ಹರ್ಷ ಹಾಗೂ ನರ್ತನ್ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಿಂಚಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಪ್ರಶಾಂತ್ ನೀಲ್

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಮೂಲಕ ಪ್ರಶಾಂತ್ ನೀಲ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರು ಸದ್ಯ ಪ್ರಭಾಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ‘ಸಲಾರ್’ ಚಿತ್ರವನ್ನು ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಈ ಚಿತ್ರದಿಂದ ಪ್ರಶಾಂತ್ ನೀಲ್ ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿದೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ಬಳಿಕ ಅವರು ಜೂನಿಯರ್ ಎನ್​ಟಿಆರ್ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ನಂತರ ಮತ್ತೊಮ್ಮೆ ಅವರು ಪ್ರಭಾಸ್ ಜೊತೆ ಕೆಲಸ ಮಾಡಲಿದ್ದಾರೆ ಎನ್ನುವ ಮಾತುಕೂಡ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಎ. ಹರ್ಷ

ಎ. ಹರ್ಷ ಅವರು ಟಾಲಿವುಡ್​ಗೆ ಹಾರಿದ್ದಾರೆ. ಗೋಪಿಚಂದ್ ನಟನೆಯ 31ನೇ ಚಿತ್ರಕ್ಕೆ ಹರ್ಷ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪೂಜೆ ಈ ತಿಂಗಳ ಆರಂಭದಲ್ಲಿ ನಡೆಯಿತು. ಹರ್ಷ ಅವರು ಇಲ್ಲಿಯವರೆಗೆ ನಿರ್ದೇಶನ ಮಾಡಿದ ಅಷ್ಟೂ ಚಿತ್ರಗಳು ಕನ್ನಡದ್ದೇ. ಈಗ ಅವರು ಇದೇ ಮೊದಲ ಬಾರಿಗೆ ತೆಲುಗಿಗೆ ಹಾರಿದ್ದಾರೆ. ‘ವೇದ’ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಯಿತು. ಹೀಗಾಗಿ ತೆಲುಗಿನಲ್ಲಿ ಒಂದಷ್ಟು ಮಂದಿಗೆ ಹರ್ಷ ಅವರ ಪರಿಚಯ ಇದೆ. ಈ ಚಿತ್ರವನ್ನು ‘ಶ್ರೀ ಸತ್ಯ ಸಾಯಿ ಆರ್ಟ್ಸ್​​’ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ. ತಿಂಗಳಾಂತ್ಯಕ್ಕೆ ಚಿತ್ರದ ಶೂಟಿಂಗ್ ಆರಂಭ ಆಗಲಿದೆ.

ಇದನ್ನೂ ಓದಿ: SSMB28: ಪ್ರಭಾಸ್, ರಾಮ್ ಚರಣ್ ಜೊತೆ ಮಹೇಶ್ ಬಾಬು ಕ್ಲ್ಯಾಶ್​; ಮತ್ತೆ ಸ್ಟಾರ್​ ವಾರ್?

ನರ್ತನ್

ನರ್ತನ್ ನಿರ್ದೇಶನದ ಮೊದಲ ಸಿನಿಮಾ ‘ಮಫ್ತಿ’ ಸಾಕಷ್ಟು ಸದ್ದು ಮಾಡಿತು. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್​’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದಾದ ಬಳಿಕ ರಾಮ್ ಚರಣ್ ಜೊತೆ ನರ್ತನ್ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ