ಬಿಡಿಎ ಸೈಟ್ ಒತ್ತುವರಿ ಆರೋಪ; ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡಗೆ ನೋಟಿಸ್
ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ನ 3ನೇ ಸೆಕ್ಟರ್ನಲ್ಲಿರುವ ಬಿಡಿಎನ 6 ನಿವೇಶನವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
![ಬಿಡಿಎ ಸೈಟ್ ಒತ್ತುವರಿ ಆರೋಪ; ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡಗೆ ನೋಟಿಸ್](https://images.tv9kannada.com/wp-content/uploads/2023/02/Umapathy.jpg?w=1280)
ಕನ್ನಡದ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ (Umapathy SrinivasGowda) ಅವರು ಈಗ ಸುದ್ದಿಯಲ್ಲಿದ್ದಾರೆ. ಹಾಗಂತ ಇದು ಸಿನಿಮಾ ವಿಚಾರಕ್ಕಲ್ಲ. ಬದಲಿಗೆ ವೈಯಕ್ತಿಕ ವಿಚಾರಕ್ಕೆ. ಅವರ ವಿರುದ್ಧ ಬಿಡಿಎ ಸೈಟ್ ಒತ್ತುವರಿ ಆರೋಪ ಕೇಳಿ ಬಂದಿದೆ. ಹೀಗಾಗಿ, ಬಿಡಿಎ ಕಡೆಯಿಂದ ಉಮಾಪತಿ ಶ್ರೀನಿವಾಸ ಗೌಡಗೆ ನೋಟಿಸ್ ಜಾರಿ ಮಾಡಲಾಗಿದೆ. 8 ದಿನಗಳ ಒಳಗೆ ಈ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ನ 3ನೇ ಸೆಕ್ಟರ್ನಲ್ಲಿರುವ ಬಿಡಿಎನ 6 ನಿವೇಶನವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಜಾಗ 1,545 ಚದರ ಮೀಟರ್ ವಿಸ್ತೀರ್ಣ ಇದೆ. ‘ಈ ಒತ್ತುವರಿಯನ್ನು ಏಕೆ ತೆರವು ಮಾಡಬಾರದು’ ಎಂದು ನೋಟೀಸ್ ನೀಡಲಾಗಿದೆ.
‘ಬಿಡಿಎ ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿದ್ದು, ಇದನ್ನು ತೆರವು ಮಾಡಲು ಅನುಮತಿ ಕೊಡಬೇಕು’ ಎಂದು ಬಿಡಿಎ ಆಯುಕ್ತರಿಗೆ ಇಂಜಿನಿಯರ್ ಕಡತ ರವಾನಿಸಿದ್ದರು. ಒತ್ತುವರಿ ತೆರವು ಮಾಡುವ ಮುನ್ನ ಉಮಾಪತಿಗೆ ನೋಟೀಸ್ ನೀಡಲಾಗಿದೆ. ‘ಬಿಡಿಎ ನಿವೇಶನಗಳು ನಿಮಗೆ ಸಂಬಂಧಿಸಿದ್ದು ಎಂಬುದಕ್ಕೆ ದಾಖಲೆ ನೀಡುವಂತೆ ಉಮಾಪತಿಗೆ ಸೂಚಿಸಲಾಗಿದೆ. ಫೆ.15ರ ಒಳಗೆ ದಾಖಲೆ ಸಲ್ಲಿಕೆ ಮಾಡದೆ ಹೋದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.
ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ಯೆಗೆ ಸಂಚು ಪ್ರಕರಣ; ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ನಿರ್ಮಿಸಿ ಉಮಾಪತಿ ಶ್ರೀನಿವಾಸ್ ಫೇಮಸ್ ಆಗಿದ್ದಾರೆ. ಅವರು ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕಳೆದ ವರ್ಷ ರಿಲೀಸ್ ಆದ ‘ಮದಗಜ’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ‘ಅಯೋಗ್ಯ’ ಖ್ಯಾತಿಯ ಮಹೇಶ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಒಟ್ಟಾಗಿ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Thu, 9 February 23