ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ (Zaid Khan) ‘ಬನಾರಸ್’ ಸಿನಿಮಾ ಮೂಲಕ ಈಗಾಗಲೇ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಭಿನ್ನ ಕತೆ ಹೊಂದಿದ್ದ ‘ಬನಾರಸ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿತ್ತು. ಝೈದ್ ಖಾನ್ರ ನಟನೆ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಆ ಸಿನಿಮಾದ ಬಳಿಕ ಬೇರೆ ಯಾವುದೇ ಸಿನಿಮಾ ಝೈದ್ ಖಾನ್ ಘೋಷಿಸಿರಲಿಲ್ಲ. ಇದೀಗ ಝೈದ್ ಖಾನ್ಗೆ ಹೊಸ ಸಿನಿಮಾದ ಆಫರ್ ಬಂದಿದೆ. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಆದ ‘ಉಪಾಧ್ಯಕ್ಷ’ ನಿರ್ದೇಶಕ, ಝೈದ್ ಖಾನ್ರ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ‘ಉಪಾಧ್ಯಕ್ಷ’ದ ನಿರ್ದೇಶಕ ಅನಿಲ್ ಕುಮಾರ್ ಝೈದ್ ಖಾನ್ರ ಸಿನಿಮಾಕ್ಕಾಗಿ ಈಗಾಗಲೇ ಕತೆ, ಚಿತ್ರಕತೆಯನ್ನು ಅಂತಿಮಗೊಳಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ “ಕೆಂಪೇಗೌಡ” ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನಿಲ್ ಕುಮಾರ್, ಸುಮಂತ್-ರಾಧಿಕಾ ಪಂಡಿತ್ ಅಭಿನಯದ “ದಿಲ್ ವಾಲ” ಚಿತ್ರದ ಮೂಲಕ ನಿರ್ದೇಶಕರಾದವರು. ಮಾಲಾಶ್ರೀ ಅವರು ನಾಯಕಿಯಾಗಿ ನಟಿಸಿರುವ “ಶಕ್ತಿ ” ಹಾಗೂ ಶರಣ್ ನಟನೆಯ “ರ‍್ಯಾಂಬೊ 2” ಚಿತ್ರದ ನಿರ್ದೇಶಕರು ಸಹ ಅನಿಲ್ ಕುಮಾರ್ ಅವರೆ. ಇತ್ತೀಚಿಗೆ ತೆರೆಕಂಡ ಚಿಕ್ಕಣ್ಣ ಅಭಿನಯದ “ಉಪಾಧ್ಯಕ್ಷ” ಸಹ ದೊಡ್ಡಮಟ್ಟದ ಯಶಸ್ಸು ಕಂಡಿದೆ. “ಉಪಾಧ್ಯಕ್ಷ” ನಂತರ ಅನಿಲ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅನಿಲ್ ಕುಮಾರ್ ಹಾಗೂ ಝೈದ್ ಖಾನ್ ಕಾಂಬಿನೇಶನ್ ನಲ್ಲಿ ನೂತನ ಚಿತ್ರವೊಂದು ಮೂಡಿಬರಲಿದೆ.
ಇದನ್ನೂ ಓದಿ:‘ಉಪಾಧ್ಯಕ್ಷ’ ಯಶಸ್ಸು: ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಸಿನಿಮಾ ತಂಡ
“ಬನಾರಸ್” ಚಿತ್ರದ ನಂತರ ಸಾಕಷ್ಟು ಕಥೆ ಕೇಳಿರುವ ಝೈದ್ ಖಾನ್ ಅವರು ಈ ಚಿತ್ರದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಕ್ಲಾಸ್ & ಮಾಸ್ ಇಬ್ಬರು ಆಡಿಯನ್ಸ್ ಇಷ್ಟಪಡುವ ಕಥೆಯಿದು. ಹೆಸರಾಂತ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನುರಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರದಲ್ಲಿರಲಿದೆ. ತಾಂತ್ರಿಕವರ್ಗ ಹಾಗೂ ತಾರಾಬಳಗದ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.
ಝೈದ್ ಖಾನ್, ಸಕ್ರಿಯ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಸಿನಿಮಾದ ಇತರೆ ಪಾತ್ರಗಳ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ