‘UI’ ಸಿನಿಮಾಕ್ಕೆ ಬುಡಾಪೆಸ್ಟ್‌ನಲ್ಲಿ ಸಂಗೀತ ರೆಕಾರ್ಡ್ ಮಾಡಿದ ಉಪ್ಪಿ-ಅಜನೀಶ್
ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾಕ್ಕೆ ಹಂಗೆರಿಯಲ್ಲಿ ಲೈವ್ ಸಂಗೀತ ರೆಕಾರ್ಡ್ ಮಾಡಲಾಗಿದೆ. ಉಪೇಂದ್ರ ಹಾಗೂ ಅಜನೀಶ್ ಖುದ್ದಾಗಿ ತೆರಳಿ ತಮ್ಮ ಸಿನಿಮಾಕ್ಕೆ ಸಂಗೀತ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಉಪೇಂದ್ರ (Upendra) ನಟಿಸಿ ನಿರ್ದೇಶನ ಮಾಡಿರುವ ಹೊಸ ಸಿನಿಮಾ ‘UI’ ಈಗಾಗಲೇ ಹಲವು ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಟ್ರೋಲ್ ಹಾಡು ಈಗಾಗಲೇ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಎಲ್ಲ ಹಾಡನ್ನೂ ಅದ್ಭುತವಾಗಿ ತೆರೆಗೆ ತರಬೇಕೆಂಬ ಪ್ರಯತ್ನದಲ್ಲಿ ಚಿತ್ರತಂಡ ನಿರತವಾಗಿದ್ದು, ಇದೇ ಕಾರಣಕ್ಕೆ ಹಾಡಿನ ರೆಕಾರ್ಡ್ಗಾಗಿ ಮೊದಲ ಯೂರೂಪಿಯನ್ ದೇಶವಾದ ಹಂಗೆರಿಗೆ ತೆರಳಿದೆ. ಹಂಗೆರಿಯ ಪ್ರಮುಖ ನಗರ ಬುಡಾಪೆಸ್ಟ್‌ನಲ್ಲಿ ಹಾಡಿನ ರೆಕಾರ್ಡ್ ಮಾಡಲಾಗುತ್ತಿದೆ. 90-ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್ ಮಾಡಲಾಗುತ್ತಿದೆ.
‘UI’ಗೆ ಹಿನ್ನೆಲೆ ಸಂಗೀತವನ್ನು ಬಿ ಅಜನೀಶ್ ಲೋಕನಾಥ್ ನೀಡುತ್ತಿದ್ದಾರೆ. ಯುರೋಪ್‌ನ ಬುಡಾಪೆಸ್ಟ್ ಆರ್ಕೆಸ್ಟ್ರಾ ತಮ್ಮ ಉತ್ಕೃಷ್ಟ ಗುಣಮಟ್ಟದ ಸಂಗೀತಕ್ಕಾಗಿ ವಿಶ್ವದೆಲ್ಲೆಡೆ ಹೆಸರುವಾಸಿ. ಇದೀಗ ಅವರ ಸಹಯೋಗದೊಂದಿಗೆ ‘ಯುಐ’ ಸಿನಿಮಾಕ್ಕೆ ಹಾಡು ಮಾಡಲಾಗುತ್ತಿದೆ. ನೂರಾರು ಮಂದಿ ಒಂದೇ ಬಾರಿಗೆ ಸಂಗೀತವನ್ನು ನುಡಿಸಿ ಅದನ್ನು ಲೈವ್ ಆಗಿ ರೆಕಾರ್ಡ್ ಮಾಡಲಾಗುತ್ತದೆ. ಬುಡಾಪೆಸ್ಟ್ ನ ಸಂಗೀತಗಾರರಿಗೆ ಜನಪದ ವಾದ್ಯಗಳ ಪರಿಚಯ ಹೆಚ್ಚಾಗಿದೆ, ಅವರ ಸಂಗೀತದ ನುಡಿಸುವಿಕೆ ಇತರೆ ಸಂಗೀತಗಾರರಿಗಿಂತಲೂ ಭಿನ್ನ ಹಾಗೂ ಉತ್ಕೃಷ್ಟವಾಗಿರುತ್ತದೆ ಎನ್ನಲಾಗುತ್ತಿದೆ. ಹಾಗಾಗಿ ಅಜನೀಶ್ ಲೋಕನಾಥ್ ಬುಡಾಪೆಸ್ಟ್‌ನಲ್ಲಿ ತಮ್ಮ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ:Troll Song: ‘ಜೋಡೆತ್ತು ಒಟ್ಟಾಗಿ ನಿಂತ್ರೆ ಗೆಲುವು ಅಕ್ಕಂದೇ’; ‘ಯುಐ’ ಹಾಡಿನಲ್ಲಿ ಟ್ರೋಲ್ ಆಗುವ ಸಾಹಿತ್ಯ
ಕನ್ನಡದ ‘ವಿಕ್ರಾಂತ್ ರೋಣ’, ‘ಕೆಜಿಎಫ್ 2’ ಸಿನಿಮಾಗಳ ಸಂಗೀತವನ್ನು ಬುಡಾಪೆಸ್ಟ್‌ನಲ್ಲಿ ರೆಕಾರ್ಡ್ ಮಾಡಲಾಗಿತ್ತು. ತೆಲುಗಿನ ‘ಸರಿಲೇರು ನೀಕೆವ್ವರು’, ‘ಸಲಾರ್’ ಸಿನಿಮಾಗಳು ಸಂಗೀತವನ್ನು ಸಹ ಈ ಹಿಂದೆ ಬುಡಾಪೆಸ್ಟ್‌ನಲ್ಲಿ ರೆಕಾರ್ಡ್ ಮಾಡಿದ್ದರು. ಆದರೆ ‘ಯುಐ’ ಸಿನಿಮಾಕ್ಕಾಗಿ ಪೂರ್ಣ 90-ಪೀಸ್ ಆರ್ಕೆಸ್ಟ್ರಾ ಬಳಸಿಕೊಂಡು ಸಂಗೀತ ರೆಕಾರ್ಡ್ ಮಾಡಲಾಗುತ್ತಿದೆ. ಅತ್ಯುತ್ತಮ ಸಂಗೀತದ ಅನುಭವವನ್ನು ನೀಡಲೆಂದು ‘ಯುಐ’ ಸಿನಿಮಾ ಶ್ರಮಿಸುತ್ತಿದ್ದು, ಗುಣಮಟ್ಟದ ಹಾಡು ಹಾಗೂ ಹಿನ್ನೆಲೆ ಸಂಗೀತವನ್ನು ‘ಯುಐ’ಗಾಗಿ ನೀಡಲಾಗುತ್ತಿದೆ.
‘UI’ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. 9 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 2015 ರಲ್ಲಿ ಉಪೇಂದ್ರ ನಿರ್ದೇಶನ ಮಾಡಿದ್ದ ‘ಉಪ್ಪಿ 2’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ‘ಯುಐ’ ಸಿನಿಮಾಕ್ಕೆ ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡಿವೆ. ಕೆಪಿ ಶ್ರೀಕಾಂತ್ ಹಾಗೂ ಲಹರಿ ವೇಲು ಅವರುಗಳು ‘ಯುಐ’ ಸಿನಿಮಾದ ಔಟ್ಪುಟ್ ಉತ್ಕೃಷ್ಟ ಗುಣಮಟ್ಟದ್ದಾಗಿರಬೇಕೆಂಬ ನಿರ್ಣಯ ತೆಗೆದುಕೊಂಡಿದ್ದಾರೆ.
ಉಪೇಂದ್ರ ನಿರ್ದೇಶನದ ‘ಎ’ ಸಿನಿಮಾ ಇತ್ತೀಚೆಗಷ್ಟೆ ಮರು ಬಿಡುಗಡೆ ಆಗಿ ಮತ್ತೊಮ್ಮೆ ಸೂಪರ್ ಹಿಟ್ ಎನಿಸಿಕೊಂಡಿದೆ. ಉಪೇಂದ್ರ ನಿರ್ದೇಶನಕ್ಕೆ ಈಗಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ‘ಎ’ ಸಿನಿಮಾದ ಯಶಸ್ಸು ಹೊಸ ಸಾಕ್ಷಿ. ‘ಯುಐ’ ಹೊರತಾಗಿ ಉಪೇಂದ್ರ, ‘ಬುದ್ಧಿವಂತ 2’, ‘ಕಬ್ಜ 2’, ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ