ಉರಿಗೌಡ-ನಂಜೇಗೌಡ ಸಿನಿಮಾ: ಮುನಿರತ್ನಗೆ ನಿರ್ಮಲಾನಂದ ಶ್ರೀಗಳ ಬುಲಾವ್
ವಿರೋಧದ ನಡುವೆಯೂ ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕ ಮುನಿರತ್ನ ಅವರಿಗೆ ನಿರ್ಮಲಾನಂದ ಸ್ವಾಮೀಜಿ ಬುಲಾವ್ ನೀಡಿದ್ದು, ನಾಳೆ ಮುನಿರತ್ನ ಅವರು ನಿರ್ಮಲಾನಂದ ಸ್ವಾಮೀಜಿಗಳ ಭೇಟಿ ಮಾಡಿ ಸಿನಿಮಾ ಬಗ್ಗೆ ಚರ್ಚಿಸಲಿದ್ದಾರೆ.
ಉರಿಗೌಡ-ನಂಜೇಗೌಡ (Urigowda-Nanjegowda) ವಿಚಾರ ರಾಜಕೀಯ ಗದ್ದಲಕ್ಕೆ ಕಾರಣವಾದ ಬೆನ್ನಲ್ಲೆ ನಿರ್ಮಾಪಕ, ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (Munirathna) ಉರಿಗೌಡ-ನಂಜೇಗೌಡ ಪಾತ್ರಗಳನ್ನು ಪ್ರಧಾನವಾಗಿರಿಸಿ ಅದೇ ಹೆಸರಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಸಿನಿಮಾದ ಮುಹೂರ್ತ ದಿನಾಂಕವನ್ನು ಘೋಷಿಸಿದ್ದಾರೆ. ಆದರೆ ಇದೇ ವಿಷವಾಗಿ ಚರ್ಚಿಸಲು ನಿರ್ಮಲಾನಂದ ನಾಥಶ್ರೀಗಳು ಮುನಿರತ್ನಗೆ ಆಹ್ವಾನ ನೀಡಿದ್ದು, ಶ್ರೀಗಳ ಭೇಟಿ ಬಳಿಕ ಸಿನಿಮಾ ನಿರ್ಮಾಣದ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಮುನಿರತ್ನ ಹೇಳಿದ್ದಾರೆ.
ನಾನೊಬ್ಬ ನಿರ್ಮಾಪಕನಾಗಿ ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣ ಮಾಡೋಣ ಅಂತಿದ್ದೀನಿ ಆದರೆ ನಾಳೆ (ಮಾರ್ಚ್ 20) ನಿರ್ಮಲಾನಂದನಾಥ ಸ್ವಾಮೀಜಿಯವರು ನಾಳೆ ಬರಲು ಹೇಳಿದ್ದಾರೆ. ಅವರೊಟ್ಟಿಗೆ ಚರ್ಚೆ ಮಾಡುವವರೆಗೆ ಸಿನಿಮಾದ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.
ಇತಿಹಾಸದ ಬಗ್ಗೆ ಮಾತಾಡೋರು ಅದಕ್ಕೆ ಜಾತಿ ಬಣ್ಣ ಕೊಡಬಾರದು. ಈಗಾಗಲೇ ಅಶೋಕ್ ಹಾಗೂ ಅಶ್ವಥ್ ನಾರಾಯಣ ಅವರು ಉರಿಗೌಡ-ನಂಜೇಗೌಡರ ಇತಿಹಾಸ ಬಗ್ಗೆ ಮಾತಾಡಿದಾರೆ, ನಾನು ಒಬ್ಬ ನಿರ್ಮಾಪಕನಾಗಿ ಅವರ ಚಿತ್ರ ಮಾಡುವ ನಿರ್ಧಾರ ಮಾಡಿದ್ದೀನಿ. ಸಿನಿಮಾಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ಮಾಡಲು ನನ್ನನ್ನು ಕರೆಸಿದ್ದಾರೆ ನಾಳೆ ಬೆಳಗ್ಗೆ ಶ್ರೀಗಳ ಭೇಟಿ ಮಾಡ್ತಿದೀನಿ, ಅವರ ಸಲಹೆ ಮೇರೆಗೆ ಮುಂದುವರೆಯುತ್ತೀನಿ ಎಂದಿದ್ದಾರೆ.
ಟಿಪ್ಪು ಅನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎಂಬ ವಾದವನ್ನು ಬಿಜೆಪಿ ತೇಲಿ ಬಿಟ್ಟಿದೆ. ಚುನಾವಣೆ ಸಮಯದಲ್ಲಿ ಒಕ್ಕಲಿಗ ಸಮುದಾಯವನ್ನು ಒಡೆಯಲು ಇತಿಹಾಸದಲ್ಲಿ ಇಲ್ಲದ ಉರಿಗೌಡ-ನಂಜೇಗೌಡ ಪಾತ್ರಗಳನ್ನು ಬಿಜೆಪಿ ಹುಟ್ಟುಹಾಕಿದೆ ಎಂದು ಕೆಲವು ಇತಿಹಾಸಕಾರರು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ವಿರೋಧಿಸಿದ್ದಾರೆ.
ವಿವಾದ ಚಾಲ್ತಿಯಲ್ಲಿರುವಾಗಲೇ ಮುನಿರತ್ನ ಉರಿಗೌಡ-ನಂಜೇಗೌಡ ಹಾಗೂ ನಂಜೇಗೌಡ-ಉರಿಗೌಡ ಸಿನಿಮಾ ಟೈಟಲ್ಗಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅರ್ಜಿ ಹಾಕಿದ್ದರು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸರಣಿ ಟ್ವೀಟ್ಗಳ ಮೂಲಕ ಮುನಿರತ್ನ ಅವರ ನಿರ್ಧಾರವನ್ನು ಟೀಕಿಸಿದ್ದರು. ಅದರ ಬೆನ್ನಲ್ಲೆ ಒಕ್ಕಲಿಗ ಯುವಬ್ರಿಗೆಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೆಡ್ ಅವರುಗಳು ಮುನಿರತ್ನ ವಿರುದ್ಧ ಅಸಾಮಾಧಾನ ಹೊರಹಾಕಿದ್ದು, ‘ವೃಷಭಾದ್ರಿ ಪ್ರೊಡಕ್ಷನ್ಸ್ ಅವರು ಉರೀಗೌಡ, ನಂಜೇಗೌಡ ಚಲನಚಿತ್ರ ನಿರ್ಮಿಸಲು ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ, ಇತಿಹಾಸದ ದಾಖಲೆಗಳಲ್ಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಲ್ಲಿ ಇಲ್ಲ ಹಾಗಾಗಿ ಅವರಿಗೆ ಈ ಸಿನಿಮಾ ನಿರ್ಮಾಣಕ್ಕೆ ಅನುಮತಿ ನೀಡಬಾರದು’ ಎಂದು ಮನವಿ ಸಲ್ಲಿಸಿದ್ದರು.
ಆದರೆ ವಿರೋಧಗಳಿಗೆ ಸೊಪ್ಪು ಹಾಕದ ಮುನಿರತ್ನ ನಿನ್ನೆ (ಮಾರ್ಚ್ 18) ಉರಿಗೌಡ-ನಂಜೇಗೌಡ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಿನಿಮಾದ ಮುಹೂರ್ತವು ಮೇ 18 ರಂದು ಕಂಠೀರವ ಸ್ಟುಡಿಯೋನಲ್ಲಿ ನಡೆಯಲಿದೆ. ಈ ಸಿನಿಮಾಕ್ಕೆ ಸಚಿವ ಅಶ್ವಥ್ ನಾರಾಯಣ ಚಿತ್ರಕತೆ ಒದಗಿಸಲಿದ್ದಾರೆ. ಆರ್.ಎಸ್.ಗೌಡ ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಿಸಿದ್ದರು.
ಇದೀಗ ಈ ವಿಷಯಕ್ಕೆ ನಿರ್ಮಲಾನಂದ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿದ್ದು, ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಮುನಿರತ್ನ ಅವರೊಟ್ಟಿಗೆ ಮಾತನಾಡಿ, ಸಿನಿಮಾ ನಿರ್ಮಾಣದಿಂದ ಹಿಂದೆ ಸರಿಯುವಂತೆ ಮಾಡುತ್ತಾರೆಯೇ ಕಾದು ನೋಡಬೇಕಿದೆ.