ಸಿನಿಮಾಗೆ ಮಾತ್ರವಲ್ಲ, ನನ್ನ ಜೀವನಕ್ಕೂ ಡಾಲಿ ಕೊಡುಗೆ ಜಾಸ್ತಿ ಇದೆ: ನಾಗಭೂಷಣ

ನಟ ನಾಗಭೂಷಣ ಅವರು ಹಾಸ್ಯದ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈಗ ಅವರು ಕಾಮಿಡಿ ಕಥಾಹಂದರ ಇರುವ ‘ವಿದ್ಯಾಪತಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ತಮ್ಮ ಸಿನಿಮಾ ಜರ್ನಿಯ ಬಗ್ಗೆ ಅವರು ‘ಟಿವಿ9’ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸಿನಿಮಾಗೆ ಮಾತ್ರವಲ್ಲ, ನನ್ನ ಜೀವನಕ್ಕೂ ಡಾಲಿ ಕೊಡುಗೆ ಜಾಸ್ತಿ ಇದೆ: ನಾಗಭೂಷಣ
Daali Dhananjaya, Nagabhushana

Updated on: Apr 08, 2025 | 9:33 PM

‘ವಿದ್ಯಾಪತಿ’ (Vidyapati) ಸಿನಿಮಾದಲ್ಲಿ ಕಥಾನಾಯಕಿಯ ಹೆಸರು ವಿದ್ಯಾ. ಆಕೆ ಸೂಪರ್ ಸ್ಟಾರ್ ಆಗಿರುತ್ತಾಳೆ. ಆಕೆಯ ಗಂಡನೇ ವಿದ್ಯಾಪತಿ. ಸ್ಟಾರ್ ನಟಿಯ ಗಂಡನ ಪಾತ್ರದಲ್ಲಿ ನಾಗಭೂಷಣ (Nagabhushana) ಅವರು ಅಭಿನಯಿಸಿದ್ದಾರೆ. ಕಥೆಯ ಎಳೆ ಏನು ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿದೆ. ಹೆಂಡತಿಯ ಹೆಸರು ಹೇಳಿಕೊಂಡು ಗಂಡ ಶೋಕಿ ಮಾಡುತ್ತಾನೆ. ಆಮೇಲೆ ವಿಲನ್ ಎಂಟ್ರಿ ಆಗುತ್ತದೆ. ಖಳನಾಯಕನನ್ನು ಮಟ್ಟಹಾಕಲು ವಿದ್ಯಾಪತಿ ಕರಾಟೆ ಕಲಿಯುತ್ತಾನೆ. ಈ ಎಲ್ಲ ಪ್ರಸಂಗಗಳನ್ನು ಈ ಸಿನಿಮಾದಲ್ಲಿ ತಮಾಷೆಯಾಗಿ ತೋರಿಸಲಾಗಿದೆ. ಡಾಲಿ ಧನಂಜಯ (Daali Dhananjaya) ಅವರು ‘ವಿದ್ಯಾಪತಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗೆಳೆಯನ ಬಗ್ಗೆ ನಾಗಭೂಷಣ ಅವರು ಮಾತನಾಡಿದ್ದಾರೆ.

ಈ ಸಿನಿಮಾದಲ್ಲಿ ಡಾಲಿ ಧನಂಜಯ ಅವರು ಒಂದು ಪಾತ್ರ ಕೂಡ ಮಾಡಿದ್ದಾರೆ. ಟ್ರೇಲರ್​ನಲ್ಲಿ ಆ ಪಾತ್ರ ಹೈಲೈಟ್ ಆಗಿದೆ. ‘ಹೀಗೆ ಬಂದು ಹಾಗೆ ಹೋಗುವ ಅತಿಥಿ ಪಾತ್ರ ಅದಲ್ಲ. ಆ ಪಾತ್ರಕ್ಕೂ ಒಂದು ತೂಕ ಇದೆ. ಎಷ್ಟು ತೋರಿಸಬೇಕೋ ಅಷ್ಟನ್ನು ಟ್ರೇಲರ್​​ನಲ್ಲಿ ತೋರಿಸಿದ್ದೇವೆ. ಮಾರ್ಷಲ್ ಆರ್ಟ್ಸ್​ ಫೈಟರ್ ಆಗಿ ಅವರು ಕಾಣಿಸಿಕೊಳ್ಳುತ್ತಾರೆ. ಆ ಪಾತ್ರ ತುಂಬಾ ಚೆನ್ನಾಗಿ ಇದ್ದಿದ್ದರಿಂದ ಡಾಲಿ ಅವರು ನಟಿಸಿದ್ದಾರೆ. ಆ ಪಾತ್ರದಿಂದ ಕಥೆಗೆ ಮೇಜರ್ ಟ್ವಿಸ್ಟ್ ಸಿಗುತ್ತದೆ’ ಎಂದು ನಾಗಭೂಷಣ ಅವರು ಹೇಳಿದ್ದಾರೆ.

‘ಸಿನಿಮಾದಲ್ಲಿ ಮಾತ್ರವಲ್ಲದೇ ನನ್ನ ನಿಜ ಜೀವನದಲ್ಲೂ ಡಾಲಿಯ ಕೊಡುಗೆ ಬಹಳ ಇದೆ. ನಾವಿಬ್ಬರು ‘ಬಡವ ರಾಸ್ಕಲ್’ ಸಿನಿಮಾ ಮಾಡಿದೆವು. ಬಳಿಕ ಅವನು ಟಗರು ಪಲ್ಯ ಸಿನಿಮಾ ನಿರ್ಮಾಣ ಮಾಡಿದ. ವಿದ್ಯಾಪತಿ ಸಿನಿಮಾಗೂ ಬಂಡವಾಳ ಹೂಡಿದ್ದಾನೆ. ಇದಕ್ಕಿಂತ ದೊಡ್ಡ ಕೊಡುಗೆ ಏನು ಇರಲು ಸಾಧ್ಯ? ಡಾಲಿ ರೀತಿಯ ಒಬ್ಬ ಗೆಳಯ ಇದ್ದರೆ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು. ಈ ಮಾತನ್ನು ನಾನು ಅನೇಕ ಬಾರಿ ಹೇಳುತ್ತೇನೆ’ ಎಂದಿದ್ದಾರೆ ನಾಗಭೂಷಣ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಈ ಮೊದಲು ನಾಗಭೂಷಣ ಅವರು ‘ಟಗರು ಪಲ್ಯ’ ಸಿನಿಮಾದಲ್ಲಿ ಹಳ್ಳಿ ಹುಡುಗನ ಪಾತ್ರ ಮಾಡಿದ್ದರು. ಈಗ ‘ವಿದ್ಯಾಪತಿ’ ಸಿನಿಮಾದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪಾತ್ರ ಭಿನ್ನವಾಗಿದೆ. ಅದಕ್ಕಾಗಿ ಗೆಟಪ್ ಬದಲಾಯಿಸಿದ್ದೇನೆ. ಕೂದಲಿಗೆ ಬಣ್ಣ ಹಾಕಿಸಿದೆ. ರಿಯಲ್ ಲೈಫ್​ನಲ್ಲಿ ನಾನು ಚಿನ್ನ ಧರಿಸುವವನಲ್ಲ. ಆದರೆ ಈ ಪಾತ್ರಕ್ಕಾಗಿ ಕೈತುಂಬ ಉಂಗುರು, ಚೈನ್ ಹಾಕಿಸಿದರು. ನೋಡಿದ ಕೂಡಲೇ ಜನರಿಗೆ ಬದಲಾವಣೆ ಕಾಣುತ್ತದೆ. ನನಗೆ ಇದು ಚಾಲೆಂಜಿಂಗ್ ಆಗಿತ್ತು. ನಾವಲ್ಲದ ರೀತಿಯ ಪಾತ್ರ ಮಾಡುವುದು ಸವಾಲಿನ ಕೆಲಸ’ ಎಂದು ನಾಗಭೂಷಣ ಅವರು ಹೇಳಿದ್ದಾರೆ.

ಈವರೆಗೂ ಕಾಮಿಡಿ ಸಿನಿಮಾಗಳ ಮೂಲಕವೇ ನಾಗಭೂಷಣ ಅವರು ಹೆಸರು ಮಾಡಿದ್ದಾರೆ. ಹಾಸ್ಯದ ಸಿನಿಮಾಗಳ ಮೇಲೆ ಅವರಿಗೆ ನಂಬಿಕೆ ಇದೆ. ‘ನಾವು ಏನೇ ಹೇಳಿದರೂ ಅದನ್ನು ಹಾಸ್ಯದ ಜೊತೆ ಹೇಳಿದರೆ ಜನರು ಕೇಳುತ್ತಾರೆ. ದೊಡ್ಡ ಫಿಲಾಸಫಿ ಹೇಳುತ್ತೇನೆ ಎಂದು ಜನರಿಗೆ ಬೋರು ಹೊಡೆಸಿದರೆ ಯಾರೂ ನೋಡಲ್ಲ. ಚಾರ್ಲಿ ಚಾಪ್ಲಿನ್ ದೊಡ್ಡ ದೊಡ್ಡ ಫಿಲಾಸಫಿ ಹೇಳಿದ್ದಾರೆ. ಆದರೆ ಅವರು ಬೋರು ಹೊಡೆಸಿಲ್ಲ. ನಮ್ಮ ವಿದ್ಯಾಪತಿ ಸಿನಿಮಾದಲ್ಲಿ ಕೂಡ ಒಂದು ಒಳ್ಳೆಯ ಮೆಸೇಜ್ ಇದೆ. ಹೆಚ್ಚು ಹಾಸ್ಯದ ಸಿನಿಮಾಗಳು ಬರಬೇಕು’ ಎಂದಿದ್ದಾರೆ ನಾಗಭೂಷಣ.

ಇದನ್ನೂ ಓದಿ: ‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ

‘ಪಾತ್ರಕ್ಕಾಗಿ ಸ್ವಲ್ಪ ಕರಾಟೆ ಕಲಿತೆ. ಈ ಸಿನಿಮಾದಲ್ಲಿ ಗರುಡ ರಾಮ್ ಅವರು ವಿಲನ್. ಅವರಿಗೆ ನಾನು ಹೊಡೆಯುತ್ತೇನೆ ಎಂದರೆ ಜನರಿಗೆ ಸ್ವಲ್ಪವಾದರೂ ನಂಬಿಕೆ ಬರುವಂತೆ ಇರಬೇಕು. ಅದಕ್ಕಾಗಿ ಕರಾಟೆ ಕಲಿತೆ. ಈಗ ಮಕ್ಕಳನ್ನು ಎಲ್ಲರೂ ಕರಾಟೆ ಕ್ಲಾಸ್​ಗೆ ಸೇರಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಈ ಸನ್ನಿವೇಶಗಳು ಇಷ್ಟ ಆಗುತ್ತದೆ’ ಎಂದು ನಾಗಭೂಷಣ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.