‘ವಾಮನ’ ಸಿನಿಮಾ ನೋಡಲು ಬರಲಿರುವ ದರ್ಶನ್, ಎಲ್ಲಿ? ಯಾವಾಗ?
Darshan Thoogudeepa: ನಟ ದರ್ಶನ್, ಇತ್ತೀಚೆಗಷ್ಟೆ ‘ಡೆವಿಲ್’ ಸಿನಿಮಾ ಚಿತ್ರೀಕರಣ ರಾಜಸ್ಥಾನದಲ್ಲಿ ಮುಗಿಸಿ ವಾಪಸ್ಸಾಗಿದ್ದಾರೆ. ಸತತ ಚಿತ್ರೀಕರಣದಿಂದ ಬಳಲಿ, ಬೆನ್ನು ನೋವು ಹೆಚ್ಚಾಗಿರುವ ಕಾರಣ ನೀಡಿ ಕೋರ್ಟ್ ವಿಚಾರಣೆಗೂ ಹಾಜರಾಗಿರಲಿಲ್ಲ. ಆದರೆ ದರ್ಶನ್ ‘ವಾಮನ’ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಭಾಗಿ ಆಗಲಿದ್ದಾರೆ. ಎಲ್ಲಿ? ಯಾವಾಗ? ಇಲ್ಲಿ ತಿಳಿಯಿರಿ...

‘ಡೆವಿಲ್’ (Devil) ಸಿನಿಮಾದ ಚಿತ್ರೀಕರಣದ ಮೂರನೇ ಶೆಡ್ಯೂಲ್ ಮುಗಿಸಿ ಇತ್ತೀಚೆಗಷ್ಟೆ ರಾಜಸ್ಥಾನದಿಂದ ವಾಪಸ್ಸಾಗಿರುವ ನಟ ದರ್ಶನ್ (Darshan Thoogudeepa) ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಅವರ ಆತ್ಮೀಯ ಗೆಳೆಯ, ಸಹೋದರ ಸಮಾನರೂ ಆಗಿರುವ ಧನ್ವೀರ್ ನಟನೆಯ ‘ವಾಮನ’ (Vaamana) ಸಿನಿಮಾ ಇದೇ ವಾರ ತೆರೆಗೆ ಬರಲಿದ್ದು, ವಿಶ್ರಾಂತಿಯ ನಡುವೆ ಸಹೋದರನ ಸಿನಿಮಾಕ್ಕೆ ಬೆಂಬಲ ನೀಡಲು ಬರುತ್ತಿದ್ದಾರೆ ನಟ ದರ್ಶನ್. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದ ದರ್ಶನ್, ಇದೀಗ ‘ವಾಮನ’ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.
ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾ ನಾಳೆ (ಏಪ್ರಿಲ್ 10) ರಾಜ್ಯದಾದ್ಯಂತ ಬಿಡುಗಡೆ ಆಗಲಿದ್ದು, ಇಂದು (ಏಪ್ರಿಲ್ 09) ಸಿನಿಮಾದ ವಿಶೇಷ ಶೋ ಆಯೋಜನೆ ಮಾಡಲಾಗಿದೆ. ಈ ಶೋಗೆ ನಟ ದರ್ಶನ್ ಆಗಮಿಸಲಿದ್ದು ಎಲ್ಲರೊಡನೆ ಕುಳಿತು ಸಿನಿಮಾ ನೋಡಲಿದ್ದಾರೆ. ಇಂದು ಸಂಜೆ ಬೆಂಗಳೂರಿನ ಜಿಟಿ ಮಾಲ್ನಲ್ಲಿ ‘ವಾಮನ’ ಸಿನಿಮಾ ವೀಕ್ಷಿಸಲಿದ್ದಾರೆ ನಟ ದರ್ಶನ್.
ಕೆಲ ದಿನಗಳ ಹಿಂದಷ್ಟೆ ‘ವಾಮನ’ ಸಿನಿಮಾದ ಟ್ರೈಲರ್ ಅನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದರು. ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ದರ್ಶನ್, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ ಆದರೆ ಅವರು ಟ್ರೈಲರ್ ಬಿಡುಗಡೆ ಮಾಡಿದ ವಿಡಿಯೋ ಪ್ರದರ್ಶಿಸಲಾಯ್ತು. ಕಾರ್ಯಕ್ರಮದ ಬಳಿಕ ದರ್ಶನ್ ಅಭಿಮಾನಿಗಳು ಪ್ರಸನ್ನ ಚಿತ್ರಮಂದಿರದ ಕುರ್ಚಿ, ಕಿಟಕಿ, ಗಾಜುಗಳನ್ನು ಒಡೆದು ದಾಂಧಲೆ ಎಬ್ಬಿಸಿದರು. ಈಗ ಜಿಟಿ ಮಾಲ್ಗೆ ದರ್ಶನ್ ಬರಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಯೂ ಸಹ ದರ್ಶನ್ ಅಭಿಮಾನಿಗಳು ದಾಂಧಲೆ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ:ವಿಜಯಲಕ್ಷ್ಮೀ ದರ್ಶನ್ ಜೀವನದಲ್ಲಿ ಈಗ ಖುಷಿಯೋ ಖುಷಿ; ಎಷ್ಟು ಕ್ಯೂಟ್ ನೋಡಿ
ದರ್ಶನ್ ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ಬಳಿಕ ಹಾಜರಾಗುತ್ತಿರುವ ಎರಡನೇ ಸಿನಿಮಾ ಪ್ರೀಮಿಯರ್ ಶೋ ಇದಾಗಿದೆ. ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್’ ಸಿನಿಮಾದ ಪ್ರೀಮಿಯರ್ಗೂ ಸಹ ದರ್ಶನ್ ಹೋಗಿ ಸಿನಿಮಾ ವೀಕ್ಷಿಸಿದ್ದರು. ಇದೀಗ ‘ವಾಮನ’ ಸಿನಿಮಾ ಪ್ರೀಮಿಯರ್ ಶೋನಲ್ಲಿ ಭಾಗಿ ಆಗಲಿದ್ದಾರೆ. ‘ವಾಮನ’ ಸಿನಿಮಾದಲ್ಲಿ ನಟ ಧನ್ವೀರ್ ನಾಯಕ, ರೀಷ್ಮಾ ನಾಣಯ್ಯ ನಾಯಕಿ, ಸಂಪತ್ ರಾಜ್, ಅಚ್ಯುತ್ ಕುಮಾರ್, ತಾರಾ ಅವರುಗಳು ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾ ಆಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಕತೆ ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ