ನೇರವಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ ‘ಸಾವಿತ್ರಿ’ ಸಿನಿಮಾ

ವಿಜಯ್ ರಾಘವೇಂದ್ರ, ಪ್ರಕಾಶ್ ಬೆಳವಾಡಿ, ತಾರಾ ನಟನೆಯ ಕನ್ನಡ ಸಿನಿಮಾ ಒಂದು ನೇರವಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ.

ನೇರವಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ 'ಸಾವಿತ್ರಿ' ಸಿನಿಮಾ
ಸಾವಿತ್ರಿ
Follow us
ಮಂಜುನಾಥ ಸಿ.
|

Updated on: Jul 06, 2023 | 8:09 PM

ಸಿನಿಮಾಗಳನ್ನು ಪೈರಸಿ (Pracy) ಮಾಡಿ ಯೂಟ್ಯೂಬ್​ನಲ್ಲಿಯೋ (YouTube) ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿಬಿಟ್ಟಾರು ಎಂಬ ಭಯದಲ್ಲಿ ನಿರ್ಮಾಪಕರು (Producer) ಇರುವಾಗ ಇಲ್ಲೊಬ್ಬ ಕನ್ನಡ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾವನ್ನು ನೇರವಾಗಿ ಯೂಟ್ಯೂಬ್​ನಲ್ಲಿಯೇ ಬಿಡುಗಡೆ ಮಾಡುತ್ತಿದ್ದಾರೆ. ನೋಡುಗರು ಉಚಿತವಾಗಿ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ವಿಜಯ್ ರಾಘವೇಂದ್ರ, ತಾರಾ, ಪ್ರಕಾಶ್ ಬೆಳವಾಡಿ ಇನ್ನಿತರರು ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಾವಿತ್ರಿ ನೇರವಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ. ಜುಲೈ 7 ರಂದು ಸಂಜೆ 5:12ಕ್ಕೆ ಸಾವಿತ್ರಿ ಸಿನಿಮಾವನ್ನು ಎಸ್​ಆರ್​ಎಸ್ ವಿಷನ್ ಮೀಡಿಯಾ ಯೂಟ್ಯೂಬ್​ನಲ್ಲಿ ಚಾನೆಲ್​ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಆಸಕ್ತರು ಉಚಿತವಾಗಿ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಲಾಜಿಕ್-ಮ್ಯಾಜಿಕ್​ ಹಾಗೂ ಸೈಕಾಲಜಿಗಳ ಸುತ್ತ ಈ ಸಿನಿಮಾ ಸುತ್ತುತ್ತದೆ. ಹಾರರ್ ಎಫೆಕ್ಟ್​ಗಳು ಸಹ ಈ ಸಿನಿಮಾದಲ್ಲಿದ್ದು ದೆವ್ವ, ಮಾಟ-ಮಂತ್ರಗಳ ದೃಶ್ಯಗಳೂ ಸಹ ಇವೆ. ಮಗುವು ಬೆಳೆದ ವಾತಾವರಣ ಹೇಗೆ ಆ ಮಗುವಿನ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕತೆಯನ್ನು ಸಿನಿಮಾ ಒಳಗೊಂಡಿದೆ. ತೀರ ಕಡಿಮೆ ಬಜೆಟ್​ನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿರುವುದು ಟ್ರೈಲರ್​ನಿಂದಲೇ ತಿಳಿದು ಬರುತ್ತಿದೆ.

ಇದನ್ನೂ ಓದಿ:ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ‘K46’ ಸಿನಿಮಾ ಪ್ರೋಮೋ; ಒಟ್ಟೂ ಕಂಡ ವೀಕ್ಷಣೆ ಎಷ್ಟು?

ಸಿನಿಮಾವನ್ನು ದಿನೇಶ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಹೃದಯ ಶಿವ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಪ್ರಶಾಂತ್ ಕುಮಾರ್ ಹೀಲಲಿಗೆ. ಸಿನಿಮಾವು ಚಿತ್ರಮಂದಿರ ಅಥವಾ ಒಟಿಟಿಯ ಬದಲಿಗೆ ನೇರವಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಆಂಗ್ಲ ಪತ್ರಿಕೆಯೊಂದಕ್ಕೆ ಕಾರಣ ತಿಳಿಸಿರುವ ಪ್ರಶಾಂತ್ ಕುಮಾರ್ ಹೀಲಲಿಗೆ, ”ನನ್ನ ಮೊದಲ ನಿರ್ಮಾಣದ ಸಿನಿಮಾ ಇದು. ಇದನ್ನು ಚಿತ್ರಮಂದಿರ ಅಥವಾ ಒಟಿಟಿಯಲ್ಲಿ ಬಿಡುಗಡೆ ಮಾಡಲು ನನ್ನ ಶಕ್ತ್ಯಾನುಸಾರ ಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ ಹಾಗಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತಿದ್ದೇನೆ” ಎಂದಿದ್ದಾರೆ.

ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲೆಂದು ಸಿನಿಮಾದ ಸೆನ್ಸಾರ್ ಸಹ ಮಾಡಿಸಿದ್ದರಂತೆ ನಿರ್ಮಾಪಕ ಆದರೆ ಆ ನಂತರ ಅವರು ಅನಾರೋಗ್ಯಕ್ಕೆ ತುತ್ತಾದ್ದರಿಂದ ಆಗ ಅಂದುಕೊಂಡಂತೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಉದ್ಯಮದವರನ್ನು ಭೇಟಿಯಾಗಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ನಾನೇ ಡಿಜಿಟಲ್ ಹಕ್ಕನ್ನು ಸಾಧಾರಣ ಮೊತ್ತಕ್ಕೆ ಮಾರಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾದ ಸ್ಯಾಟಲೈಟ್ ಹಕ್ಕು ಈಗಲೂ ನನ್ನ ಬಳಿಯೇ ಇದೆ” ಎಂದಿದ್ದಾರೆ ನಿರ್ಮಾಪಕ.

ಇನ್ನು ಸಿನಿಮಾದ ನಿರ್ದೇಶಕ ದಿನೇಶ್ ಅವರಿಗೆ ತೀರ ಇತ್ತೀಚೆನ ವರೆಗು ತಮ್ಮ ಸಿನಿಮಾ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿರುವ ವಿಷಯವೇ ಗೊತ್ತಿರಲಿಲ್ಲ. ನಾನು ನಿರ್ಮಾಪಕರಿಗೆ ಕರೆ ಮಾಡಿ ಇನ್ನು ಸ್ವಲ್ಪ ದಿನ ಕಾದು ಒಟಿಟಿಯಲ್ಲಿ ಆದರೂ ಬಿಡುಗಡೆ ಮಾಡೋಣ ಎಂದೆ ಆದರೆ ನಿರ್ಮಾಪಕರು ಅದಾಗಲೇ ಸಿನಿಮಾವನ್ನು ಯೂಟ್ಯೂಬ್ ಚಾನೆಲ್​ಗೆ ಕೊಟ್ಟಾಗಿತ್ತು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ