ಮಲ್ಲಿ ಕಾಣೆಯಾಗಿ ಆರು ವರ್ಷ: ದರ್ಶನ್ ಮೇಲೆ ಗುಮಾನಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ಗೆ ದಿನೇ-ದಿನೇ ಸಂಕಷ್ಟಗಳು ಹೆಚ್ಚಾಗುತ್ತಿವೆ. ಕೆಲ ವರ್ಷಗಳ ಹಿಂದೆ ಅಚಾನಕ್ ಆಗಿ ನಾಪತ್ತೆ ಆದ ದರ್ಶನ್ ಆಪ್ತ ಮಲ್ಲಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮಲ್ಲಿ ಎಲ್ಲಿ? ಎಂಬ ಪ್ರಶ್ನೆ ಎದ್ದಿದೆ.
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ದರ್ಶನ್ಗೆ ಸಂಕಷ್ಟಗಳು ದಿನೇ-ದಿನೇ ಹೆಚ್ಚಾಗುತ್ತಲೇ ಇವೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಜೊತೆಗೆ ಹಳೆಯ ಕೆಲವು ಪ್ರಕರಣಗಳು ಸಹ ದರ್ಶನ್ ಅನ್ನು ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ಆರು ವರ್ಷದ ಹಿಂದಿನ ಪ್ರಕರಣವೊಂದು ಇದೀಗ ಮುನ್ನೆಲೆಗೆ ಬಂದಿದ್ದು, ದರ್ಶನ್ ಮೇಲೆ ಗುಮಾನಿ ಹೆಚ್ಚಾಗಿದೆ. ಅದುವೇ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಅಚಾನಕ್ಕಾಗಿ ಕಾಣೆಯಾದ ಪ್ರಕರಣ.
ಗದಗ ಮೂಲದ ಮಲ್ಲಿ, ದರ್ಶನ್ಗೆ ಬಹಳ ಆಪ್ತವಾಗಿದ್ದರು. ಹಲವು ವರ್ಷಗಳ ಕಾಲ ದರ್ಶನ್ ಜೊತೆಗೇ ಇದ್ದ ಮಲ್ಲಿ, ಅವರ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು. ದರ್ಶನ್ಗೆ ಸಂಬಂಧಿಸಿದ ಹಣಕಾಸು ವ್ಯವಹಾರ, ದರ್ಶನ್ರ ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ವ್ಯವಹಾರವನ್ನು ಸಹ ಮಲ್ಲಿಯೇ ನೋಡಿಕೊಳ್ಳುತ್ತಿದ್ದರು. ಆದರೆ 2018ರ ಬಳಿಕ ಮಲ್ಲಿ ಅಚಾನಕ್ಕಾಗಿ ಕಾಣೆಯಾದರು. ಅಂದಿನಿಂದ ಈ ವರೆಗೆ ಮಲ್ಲಿ ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.
2011 ರಿಂದ 2018 ರವರೆಗೆ ದರ್ಶನ್ ಜೊತೆಗಿದ್ದ ಮಲ್ಲಿ, ದರ್ಶನ್ಗೆ ಸುಮಾರು 10 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪಗಳಿವೆ. ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ ‘ಪ್ರೇಮ ಬರಹ’ ಸಿನಿಮಾದ ಬಿಡುಗಡೆ ಬಳಿಕ ಮಲ್ಲಿ ತಮಗೆ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಈ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಮೇಲೆ ದರ್ಶನ್ ಕೋಪಗೊಂಡಿದ್ದರು. ಅರ್ಜುನ್ ಸರ್ಜಾರಿಂದ ಪಡೆದ ಒಂದು ಕೋಟಿ ಮಾತ್ರವೇ ಅಲ್ಲದೆ ಸುಮಾರು 10 ಕೋಟಿ ರೂಪಾಯಿ ವಂಚನೆಯನ್ನು ದರ್ಶನ್ಗೆ ಮಲ್ಲಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಇದನ್ನೂ ಓದಿ:ಕೊಲೆ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುತ್ತಿರುವ ದರ್ಶನ್ ವಿರುದ್ಧ ಸಿಕ್ಕಿದೆ ಪ್ರಮುಖ ಸಾಕ್ಷಿಗಳು
2018 ರಲ್ಲಿ ಮಲ್ಲಿ ಕಾಣೆಯಾಗುವ ಮುನ್ನ ಅವರ ಒಂದು ಪತ್ರ ಬರೆದಿದ್ದರು ಎನ್ನಲಾಗುತ್ತಿದೆ. ಆದರೆ ಆ ಪತ್ರ ಎಲ್ಲಿದೆ ಎಂಬುದು ತಿಳಿದಿಲ್ಲ. ಅರ್ಜುನ್ ಸರ್ಜಾ ಇತ್ತೀಚೆಗಷ್ಟೆ ಮಲ್ಲಿ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು, ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಲ್ಲಿ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸುವಂತೆ ಸೂಚಿಸಿತ್ತು. ಆದರೆ ಅದರ ಬಳಿಕ ಏನಾಯ್ತು ಎಂಬುದು ತಿಳಿದು ಬಂದಿಲ್ಲ. ಇದೀಗ ರೇಣುಕಾ ಸ್ವಾಮಿ ಪ್ರಕರಣ ಹೊರಬಂದ ಬಳಿಕ ಮಲ್ಲಿ ಕುರಿತು ಸಹ ಪ್ರಶ್ನೆಗಳು ಎದ್ದಿವೆ. ಮಲ್ಲಿ ಎಲ್ಲಿದ್ದಾನೆ? ಬದುಕಿದ್ದಾನೆಯೇ? ಅಥವಾ ರೇಣುಕಾ ಸ್ವಾಮಿ ರೀತಿಯ ಆತನದ್ದೂ ಕೊಲೆ ಆಗಿವೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Fri, 14 June 24