AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜೊತೆ ಚಿತ್ರ ಹಂಚಿಕೊಂಡಿರುವ ಪವಿತ್ರಾ ಗೌಡ ಯಾರು? ಹಿನ್ನೆಲೆ ಏನು?

Who is Pavitra Gowda: ದರ್ಶನ್ ಜೊತೆಗಿನ ಆಪ್ತ ಚಿತ್ರಗಳನ್ನು ಹಂಚಿಕೊಂಡಿರುವ ಪವಿತ್ರಾ ಗೌಡ ಯಾರು? ಇವರ ಹಿನ್ನೆಲೆ ಏನು?

ದರ್ಶನ್ ಜೊತೆ ಚಿತ್ರ ಹಂಚಿಕೊಂಡಿರುವ ಪವಿತ್ರಾ ಗೌಡ ಯಾರು? ಹಿನ್ನೆಲೆ ಏನು?
ಮಂಜುನಾಥ ಸಿ.
|

Updated on: Jan 25, 2024 | 1:01 PM

Share

‘ಕಾಟೇರ’ ಸಿನಿಮಾದ ಯಶಸ್ಸನ್ನು ಪೂರ್ತಿಯಾಗಿ ಸಂಭ್ರಮಿಸಲು ಆಗದಂತೆ ಒಂದರ ಹಿಂದೊಂದು ವಿವಾದಗಳು ನಟ ದರ್ಶನ್ (Darshan Thoogudeepa) ಅವರನ್ನು ಸುತ್ತಿಕೊಳ್ಳುತ್ತಲೇ ಇವೆ. ಇಂದು (ಜನವರಿ 25) ದರ್ಶನ್​ ಪತ್ನಿ ವಿಜಯಲಕ್ಷ್ಮಿ ಕುಟುಂಬದ ಚಿತ್ರವೊಂದನ್ನು ಅಪ್​ಲೋಡ್ ಮಾಡಿದ್ದರು. ಅದರ ಬೆನ್ನಲ್ಲೆ ದರ್ಶನ್​ಗೆ ಆಪ್ತರಾಗಿರುವ ಪವಿತ್ರಾ ಗೌಡ ಸಹ ತಮ್ಮ ಹಾಗೂ ದರ್ಶನ್​ರ ಹಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ‘ನಮ್ಮ ಸಂಬಂಧಕ್ಕೆ ಹತ್ತು ವರ್ಷ’ ಎಂದು ಕ್ಯಾಪ್ಷನ್ ಬರೆದುಕೊಂಡರು. ಇದಕ್ಕೆ ಪ್ರತಿಯಾಗಿ ವಿಜಯಲಕ್ಷ್ಮಿ, ಪವಿತ್ರಾ ಗೌಡ ಅವರನ್ನು ಉದ್ದೇಶಿಸಿ ಇನ್​ಸ್ಟಾಗ್ರಾಂನಲ್ಲಿ ವಾಗ್ದಾಳಿ ನಡೆಸಿದ್ದು, ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಆತ್ಮೀಯತೆ ಗುಟ್ಟೇನಲ್ಲ. ಆಗಾಗ್ಗೆ ದರ್ಶನ್ ಹಾಗೂ ಪವಿತ್ರಾ ಹೆಸರು ಒಟ್ಟಾಗಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಯಾರು ಈ ಪವಿತ್ರಾ ಗೌಡ? ಇವರ ಹಿನ್ನೆಲೆ ಏನು? ದರ್ಶನ್​ಗೆ ಆಪ್ತವಾಗಿದ್ದು ಹೇಗೆ? ವಿಜಯಲಕ್ಷ್ಮಿ ಅವರಿಗೇಕೆ ಪವಿತ್ರಾ ಮೇಲೆ ಸಿಟ್ಟು?

ಪವಿತ್ರಾ ಗೌಡ, ಮಾಡೆಲ್ ಮತ್ತು ನಟಿ. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಗಮ್ಯಾ, ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದಾರೆ. ಆದರೆ ನಟನೆಯಲ್ಲಿ ದೊಡ್ಡ ಯಶಸ್ಸು ಪವಿತ್ರಾಗೆ ದೊರೆತಿಲ್ಲ. ಸಿನಿಮಾ ಕಾರ್ಯಕ್ರಮದಲ್ಲಿ ಒಬ್ಬ ಕಾಮನ್ ಫ್ರೆಂಡ್​ನಿಂದಾಗಿ ದರ್ಶನ್ ಹಾಗೂ ಪವಿತ್ರಾ ಪರಿಚಯ ಆಯಿತು ಎನ್ನಲಾಗುತ್ತದೆ. ಈ ಪರಿಚಯ ಆಪ್ತ ಸ್ನೇಹಕ್ಕೆ ತಿರುಗಿತು.

ಪವಿತ್ರಾ ಗೌಡ ಅವರು ದರ್ಶನ್​ ಜೊತೆಗಿನ ಚಿತ್ರಗಳನ್ನು ಹೆಚ್ಚಾಗಿ ಅಪ್​ಲೋಡ್ ಮಾಡುತ್ತಿರಲಿಲ್ಲ. ಹಿಂದೊಮ್ಮೆ ದರ್ಶನ್​ರ ತಾಯಿ ಹಾಗೂ ಸಹೋದರಿ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದರು. ಆಗ ದರ್ಶನ್ ಹಾಗೂ ಪವಿತ್ರಾರ ಆಪ್ತತೆ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ದರ್ಶನ್​ರ ಸಿನಿಮಾ ಸೆಟ್​ಗಳಲ್ಲಿ ಸಹ ಪವಿತ್ರಾ ಗೌಡ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಬಳಿಕ ಇಂದ್ರಜೀತ್ ಆರೋಪ ಮಾಡಿದ್ದ, ದರ್ಶನ್​ರ ಮೈಸೂರು ಹೋಟೆಲ್ ಗಲಾಟೆ ಪ್ರಕರಣದಲ್ಲಿಯೂ ಪವಿತ್ರಾ ಗೌಡರ ಹೆಸರು ಕೇಳಿ ಬಂದಿತ್ತು. ಇಂದ್ರಜಿತ್ ಬಿಡುಗಡೆ ಮಾಡಿದ್ದ ಸಂದೇಶ್ ನಾಗರಾಜ್ ಅವರ ಆಡಿಯೋ ಕ್ಲಿಪ್​ನಲ್ಲಿಯೂ ಪವಿತ್ರಾ ಹೆಸರು ಇತ್ತು.

ಇದನ್ನೂ ಓದಿ:ದನಿ ಎತ್ತುವ ಸಮಯ ಬಂದಿದೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಕಳೆದ ವರ್ಷ ದರ್ಶನ್​ರ ಹುಟ್ಟುಹಬ್ಬಕ್ಕೆ ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದ ಚಿತ್ರದಲ್ಲಿ ದರ್ಶನ್ ಜೊತೆಗೆ ಪವಿತ್ರಾ ಗೌಡ ಇದ್ದರು. ಆಗ ಮೊದಲ ಬಾರಿಗೆ ಇದರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದ ದರ್ಶನ್​ರ ಪತ್ನಿ ವಿಜಯಲಕ್ಷ್ಮಿ, ಮೇಘಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಕೂಡಲೇ ಮೇಘಾ ಶೆಟ್ಟಿ, ತಾವು ಹಂಚಿಕೊಂಡಿದ್ದ ಚಿತ್ರಗಳನ್ನು ಡಿಲೀಟ್ ಮಾಡಿದರು.

ಪವಿತ್ರಾ ಗೌಡಗೆ ಈಗಾಗಲೇ ವಿವಾಹವಾಗಿ ಖುಷಿ ಗೌಡ ಹೆಸರಿನ ಮಗಳಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೆ ತಮ್ಮ ಪುತ್ರಿ ಜೊತೆಗೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಇತ್ತೀಚೆಗಷ್ಟೆ ಪವಿತ್ರಾ ಗೌಡ, ಖುಷಿ ಗೌಡ ಜೊತೆಗೆ ಕಬಿನಿಗೆ ಪ್ರವಾಸಕ್ಕೆ ಸಹ ದರ್ಶನ್ ತೆರಳಿದ್ದರು. ಆ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ಪವಿತ್ರಾ ಗೌಡ ಪತಿ ಹೆಸರು ಸಂಜಯ್ ಸಿಂಗ್ ಎಂದಾಗಿದ್ದು, ಪವಿತ್ರಾ ಹಾಗೂ ಸಂಜಯ್ ಹಲವು ವರ್ಷಗಳಿಂದ ಪರಸ್ಪರ ದೂರವೇ ಇದ್ದಾರೆ. ಪವಿತ್ರಾ ಗೌಡ ಹಾಗೂ ಅವರ ಪತಿಯ ಹಳೆಯ ಚಿತ್ರಗಳನ್ನು ವಿಜಯಲಕ್ಷ್ಮಿ ದರ್ಶನ್, ತಮ್ಮ ಇನ್​ಸ್ಟಾಗ್ರಾಂನಲ್ಲಿ ಇಂದು (ಜನವರಿ 25) ಹಂಚಿಕೊಂಡಿದ್ದಾರೆ. ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನ ಫ್ಯಾಷನ್ ಬುಟಿಕ್ ಅನ್ನು ಸಹ ನಡೆಸುತ್ತಿದ್ದು, ಸೆಲೆಬ್ರಿಟಿಗಳಿಗೆ ಹಾಗೂ ಜನಸಾಮಾನ್ಯರಿಗೆ ಉಡುಗೆಗಳನ್ನು ಮಾರಾಟ ಮಾಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ