ಇಂದೇ ಜೈಲಿನಿಂದ ಬಿಡುಗಡೆ ಆಗುತ್ತಾರೆಯೇ ದರ್ಶನ್, ಹೇಗೆ ನಡೆಯಲಿದೆ ಪ್ರಕ್ರಿಯೆ?
Darshan Thoogudeepa Bail: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪಗೆ ಜಾಮೀನು ದೊರೆತಿದೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಇಂದೇ (ಅಕ್ಟೋಬರ್ 30) ಜೈಲಿನಿಂದ ಬಿಡುಗಡೆ ಹೊಂದುತ್ತಾರೆಯೇ? ಬಿಡುಗಡೆ ಪ್ರಕ್ರಿಯೆ ಹೇಗಿರಲಿದೆ? ಇಲ್ಲಿದೆ ಮಾಹಿತಿ.
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬೆಳಿಗ್ಗೆ 10:45ರ ವೇಳೆಗೆ ನ್ಯಾಯಮೂರ್ತಿಗಳು ಆದೇಶ ಪ್ರಕಟಿಸಿದ್ದಾರೆ. ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದ್ದು, ಜಾಮೀನು ಅವಧಿ ಆರು ವಾರಗಳ ಕಾಲ ಮಾತ್ರವೇ ಇರಲಿದೆ. ಇನ್ನು ದರ್ಶನ್ ಇಂದೇ ಜೈಲಿನಿಂದ ಬಿಡುಗಡೆ ಆಗುತ್ತಾರೆಯೇ ಎಂಬ ಅನುಮಾನ ಮೂಡಿದೆ. ಜಾಮೀನು ಸಿಕ್ಕ ನಂತರದ ಪ್ರಕ್ರಿಯೆ ಹೇಗಿರಲಿದೆ? ಇಲ್ಲಿದೆ ಮಾಹಿತಿ.
ಸಾಮಾನ್ಯ ವ್ಯಕ್ತಿಗಳ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆ ಆಗಲು ಕೆಲ ದಿನಗಳ ಸಮಯ ಬೇಕಾಗುತ್ತದೆ. ಜಾಮೀನು ಆದೇಶದ ಪ್ರತಿಯನ್ನು ನ್ಯಾಯಾಲಯವು ಸಂಬಂಧಪಟ್ಟ ಜೈಲಿಗೆ ಕಳಿಸಬೇಕಾಗುತ್ತದೆ. ಅದಕ್ಕೆ ಮುನ್ನ ಜಾಮೀನುದಾರರು ಷರತ್ತುಗಳನ್ನು ಪೂರೈಸಬೇಕಿರುತ್ತದೆ. ಇದೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲಿಗೆ ಜಾಮೀನು ದೊರೆತ ಮೂವರು ಆರೋಪಿಗಳು ಜಾಮೀನು ದೊರೆತ ವಾರಗಳ ಬಳಿಕ ಜೈಲಿನಿಂದ ಬಿಡುಗಡೆ ಆಗಿದ್ದರು.
ಆದರೆ ದರ್ಶನ್ ಪ್ರಕರಣದಲ್ಲಿ ಹೀಗಾಗುವುದಿಲ್ಲ. ದರ್ಶನ್ ಬಹುತೇಕ ಇಂದೇ ಅಂದರೆ ಅಕ್ಟೋಬರ್ 30ರಂದೇ ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶ ಪ್ರತಿಯನ್ನು ಬೈ ಹ್ಯಾಂಡ್ ಬಳ್ಳಾರಿ ಜೈಲಿಗೆ ತಲುಪಿಸಲಾಗುತ್ತದೆ. ಆದೇಶ ಹೊರಬಿದ್ದ ಬಳಿಕ ಆದೇಶ ಪ್ರತಿಯನ್ನು ಪ್ರಿಂಟ್ ಹಾಕಿಸಿಕೊಂಡು ದರ್ಶನ್ ಪರವಾದವರು ಆದೇಶ ಪ್ರತಿಯನ್ನು ಬಳ್ಳಾರಿ ಜೈಲಿಗೆ ಹೋಗಿ ತಲುಪಿಸುತ್ತಾರೆ. ಆದೇಶ ಪ್ರತಿ ತೆಗೆದುಕೊಳ್ಳುವ ಜೈಲು ಸಿಬ್ಬಂದಿ ಅದನ್ನು ಪರಿಶೀಲಿಸಿ ದರ್ಶನ್ ಅನ್ನು ಬಿಡುಗಡೆಗೊಳಿಸಲಿದ್ದಾರೆ.
ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?
ಬೆಂಗಳೂರಿನಿಂದ ಬಳ್ಳಾರಿ ತುಸು ದೂರವೇ ಇದೆಯಾದರೂ ಸಹ ಸಂಜೆ ವೇಳೆಗೆ ದರ್ಶನ್ರ ಜಾಮೀನು ಪ್ರತಿ ಬಳ್ಳಾರಿ ಜೈಲು ತಲುಪಲಿದೆ. ಜಾಮೀನು ಆದೇಶ ದೊರೆತಾಗ ಬಿಡುಗಡೆ ಮಾಡಬೇಕು ಎಂಬ ನಿಯಮ ಇರುವ ಕಾರಣ, ತಡವಾದರೂ ಸಹ ಬಿಡುಗಡೆ ಮಾಡಲಿದ್ದಾರೆ. ಬಿಗ್ಬಾಸ್ ಮನೆಯಿಂದ ಬಂಧನಕ್ಕೆ ಒಳಗಾಗಿದ್ದ ವರ್ತೂರು ಸಂತೋಷ್ 14 ದಿನಗಳ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಜೈಲಿನಿಂದ ಬಿಡುಗಡೆ ಆಗಿದ್ದನ್ನು ಇಲ್ಲಿ ನೆನೆಯಬಹುದು.
ಒಟ್ಟಾರೆ ದರ್ಶನ್ರ 131 ದಿನಗಳ ಜೈಲು ವಾಸ ಇಂದಿಗೆ ಮುಕ್ತಾಯ ಆಗಲಿದೆ. ಆರು ವಾರಗಳ ಕಾಲ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಆರು ವಾರ ಆದ ಬಳಿಕ ಮತ್ತೆ ಜೈಲು ಸೇರುವ ಸಾಧ್ಯತೆ ಇದೆ. ಒಂದೊಮ್ಮೆ ಆರು ವಾರಗಳಲ್ಲಿ ಚಿಕಿತ್ಸೆ ಪೂರ್ಣವಾಗದೇ ಇದ್ದರೆ ಜಾಮೀನು ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆಯೂ ಸಹ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ