
ಯಶ್, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ, ನಟಿಯರು ಒಟ್ಟಿಗೆ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಅಕ್ಟೋಬರ್ 15) ಬೆಂಗಳೂರಿನಲ್ಲಿ ರಿಲೀಸ್ ಆಯ್ತು. ಸಿನಿಮಾದ ಅಂತರಾಷ್ಟ್ರೀಯ ಟ್ರೈಲರ್ ಮತ್ತು ಭಾರತೀಯ ಪ್ರೇಕ್ಷಕರಿಗಾಗಿ ಒಂದು ವಿಶೇಷ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತು. ನಟ ಯಶ್ ಸೇರಿದಂತೆ ಸಿನಿಮಾದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯಶ್, ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಬೇರೆ ಕೆಲವು ವಿಷಯಗಳನ್ನು ಸಹ ಪರೋಕ್ಷವಾಗಿ ಹಂಚಿಕೊಂಡರು.
‘ರಾಮಾಯಣ’ ಸಿನಿಮಾದ ಮಹತ್ವ, ಬೃಹತ್ತತೆ, ಸಿನಿಮಾಕ್ಕಾಗಿ ಹಾಕಿರುವ ಶ್ರಮ, ಸಹ ಕಲಾವಿದರ ಪ್ರತಿಭೆ, ವ್ಯಕ್ತಿತ್ವ ಇನ್ನೂ ಹಲವಾರು ವಿಷಯಗಳನ್ನು ಮಾತನಾಡಿದ ನಟ ಯಶ್, ‘ಉದ್ದೇಶ ಒಳ್ಳೆಯದಿದ್ದಾಗ ಎಲ್ಲರೂ ಬೆಂಬಲಿಸಬೇಕು, ಅದನ್ನು ಬಿಟ್ಟು ಕೊಂಕು ಹುಡುಕುತ್ತಾ ಕೂಡಬಾರದು’ ಎಂದರು. ಸಿನಿಮಾದ ಬಗ್ಗೆ ಸಾಕಷ್ಟು ಮಾತನಾಡಿದ ನಟ ಯಶ್, ಭಾಷಣದ ಅಂತ್ಯದಲ್ಲಿ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿದರು. ಈ ವೇಳೆ ತಮ್ಮ ಹಿಂದಿನ ಸಿನಿಮಾಕ್ಕೆ ಬೆಂಬಲ ನೀಡಿದ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು.
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಮಾತನಾಡಿದ ಯಶ್, ‘ಪ್ರೇಮದ ಊರಲಿ’ ಹೆಸರಿನ ಸಿನಿಮಾಕ್ಕೆ ಕನ್ನಡಿಗರು ಅದ್ಭುತವಾದ ಗೆಲುವು ಕೊಟ್ಟಿದ್ದಾರೆ. ನನಗೆ ಬಹಳ ಖುಷಿ ಆಯಿತು. ಒಂದು ಚಿತ್ರರಂಗಕ್ಕೆ ಎರಡೂ ಇರಬೇಕು, ಅವಕಾಶ ಸಿಕ್ಕಾಗ ಹೊರಗೆ ಹೋಗಿ ಗಡಿಗಳನ್ನು ಒಡೆಯುವ ಕೆಲಸ ಮಾಡಬೇಕು ಅದೇ ಸಮಯದಲ್ಲಿ ನಮ್ಮ ಬೇರನ್ನು ಸಹ ನಾವು ಗಟ್ಟಿ ಮಾಡಿಕೊಳ್ಳಬೇಕು. ಇಂಥಹಾ ಸಣ್ಣ ಬಜೆಟ್ ಸಿನಿಮಾಗಳು ಬಂದು ಗೆಲ್ಲಬೇಕು, ಹೊಸ ನಾಯಕ, ನಾಯಕಿ ನಿರ್ದೇಶಕರುಗಳು ಬರುತ್ತಿರಬೇಕು’ ಎಂದರು.
ಇದನ್ನು ಓದಿ:ಬೆಂಗಳೂರಿನಲ್ಲಿ ‘ರಾಮಾಯಣ’ ಈವೆಂಟ್; ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಯಶ್?
ಇದೇ ಸಮಯದಲ್ಲಿ ಹೆಸರು ಹೇಳದೆ ‘ಟಾಕ್ಸಿಕ್’ ಬಗ್ಗೆ ಮಾತನಾಡಿದ ಯಶ್, ‘ಎಲ್ಲವನ್ನೂ ನಾನು ಗಮನಿಸಿದ್ದೀನಿ. ಯಾವ ಮಟ್ಟಿಗೆ ನೀವೆಲ್ಲ ಪ್ರೀತಿ ತೋರಿಸಿದಿರಿ, ಯಾವ ಮಟ್ಟಿಗೆ ನೀವೆಲ್ಲ ಹೋರಾಡಿದಿರಿ. ಇಷ್ಟಾದರೂ ಆ ಸಿನಿಮಾ ಅನ್ನು ನೀವೆಲ್ಲ ಹೋಗಿ ನೋಡಿ ಗೆಲ್ಲಿಸಿದಿರಿ, ಕಲೆಕ್ಷನ್ ಕೊಟ್ಟಿದ್ದೀರಿ. ನಿಮಗೆ ಒಂದೇ ಹೇಳಬಲ್ಲೆ. ನಿಮ್ಮ ಈ ಋಣ ನಾನು ತೀರಿಸೋಕೆ ಆಗಲ್ಲ, ನೀವು ಕೊಟ್ಟಿರುವ ಜವಾಬ್ದಾರಿಯನ್ನು ಅದ್ಭುತವಾಗಿ ಮಾಡೋ ಪ್ರಯತ್ನ ಮಾಡುತ್ತೇನೆ’ ಎಂದರು ನಟ ಯಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ