
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‘ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಸಪ್ಟೆಂಬರ್ 4ರಂದು ಇಂಗ್ಲಿಷ್ ಆವೃತ್ತಿಯ ದೇಶಾದ್ಯಂತ ತೆರೆಗೆ ಬಂದಿದೆ. ಇದಕ್ಕೆ ಅತ್ಯಂತ ನಿರಾಸಾದಾಯಕ ಆರಂಭ ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿ ಒಂದು ಲಕ್ಷ ರೂಪಾಯಿ ಗಡಿ ದಾಟಲು ಇಂಗ್ಲಿಷ್ ವರ್ಷನ್ ಒದ್ದಾಡಿದೆ. ಈಗಾಗಲೇ ಎಲ್ಲರೂ ಸ್ಥಳೀಯ ಭಾಷೆಯಲ್ಲಿ ಸಿನಿಮಾ ವೀಕ್ಷಿಸಿರುವುದರಿಂದ ಇಂಗ್ಲಿಷ್ ವರ್ಷನ್ ನೋಡಲು ಅಷ್ಟಾಗಿ ಆಸಕ್ತಿ ತೋರಿಸಿಲ್ಲ.
ಆಗಸ್ಟ್ 26ರಂದು ತೆರೆಕಂಡಿದ್ದ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಆವೃತ್ತಿಗಳು ನಿರೀಕ್ಷಿತ ಮಟ್ಟದ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದ್ದವು. ಇದರ ಬೆನ್ನಲ್ಲೇ ಸೆಪ್ಟೆಂಬರ್ 4ರಂದು ಚಿತ್ರದ ಇಂಗ್ಲಿಷ್ ಆವೃತ್ತಿಯನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು. ಆದರೆ ‘ಹನುಮಾನ್ ಅಂಶ್’ ಹಾಗೂ ‘ಮಿರ್ಜಾಪುರ್’ ಸಿನಿಮಾಗಳ ತೀವ್ರ ಪೈಪೋಟಿಯಿಂದಾಗಿ ಈ ಇಂಗ್ಲಿಷ್ ಆವೃತ್ತಿಗೆ ಭಾರತದಾದ್ಯಂತ ಕೇವಲ 11 ಶೋಗಳು ಮಾತ್ರ ಸಿಕ್ಕಿದ್ದವು.
ಚಿತ್ರತಂಡವು ಮುಂಬೈ, ಬೆಂಗಳೂರು, ಗುರುಗ್ರಾಮ್ ಮತ್ತು ನೋಯ್ಡಾ ಹೀಗೆ ಕೇವಲ ನಾಲ್ಕು ಪ್ರಮುಖ ನಗರಗಳಲ್ಲಿ ಮಾತ್ರ ಇಂಗ್ಲಿಷ್ ಆವೃತ್ತಿಯನ್ನು ತೆರೆಗೆ ತಂದಿತ್ತು. ಬಾಲಿವುಡ್ ಹಂಗಾಮಾ ನೀಡಿದ ಅಂಕಿಅಂಶಗಳ ಪ್ರಕಾರ, ಮೊದಲ ದಿನ ದೇಶಾದ್ಯಂತ ಮಾರಾಟವಾಗಿದ್ದು ಕೇವಲ 450 ಟಿಕೆಟ್‌ಗಳು ಮಾತ್ರ. ಪರಿಣಾಮವಾಗಿ ಮೊದಲ ದಿನದ ಒಟ್ಟು ಗಳಿಕೆ ಕೇವಲ 1.40 ಲಕ್ಷ ರೂಪಾಯಿಗಳಿಗೆ ಸೀಮಿತವಾಗಿದೆ.
ಮುಂಬೈ ಮತ್ತು ಬೆಂಗಳೂರಿನಲ್ಲಿ ಮಾತ್ರ ಶೋಗಳಿಗೆ ಕೊಂಚ ಮಟ್ಟದ ಪ್ರೇಕ್ಷಕರು ಬಂದಿದ್ದರೆ, ಗುರುಗ್ರಾಮ್ ಮತ್ತು ನೋಯ್ಡಾದಲ್ಲಿ ಪ್ರದರ್ಶನಗೊಂಡ ಶೋಗಳಲ್ಲಿ 25ಕ್ಕಿಂತ ಕಡಿಮೆ ಟಿಕೆಟ್‌ಗಳು ಮಾರಾಟವಾಗಿವೆ. ಪ್ರೇಕ್ಷಕರ ನಿರಾಸಕ್ತಿ ಹೀಗೆಯೇ ಮುಂದುವರಿದರೆ ಶನಿವಾರ ಮತ್ತು ಭಾನುವಾರದ ಶೋಗಳ ಸಂಖ್ಯೆ ಮತ್ತಷ್ಟು ಕಡಿತಗೊಳ್ಳುವ ಸಾಧ್ಯತೆಯಿದ್ದು, ಇಂಗ್ಲಿಷ್ ಆವೃತ್ತಿಯ ಜೀವಮಾನದ ಕಲೆಕ್ಷನ್ 10 ಲಕ್ಷ ರೂಪಾಯಿ ಗಡಿ ದಾಟುವುದು ಕೂಡ ಅನುಮಾನವಾಗಿದೆ.
ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಚಿತ್ರದ ಗಳಿಕೆ ಎಷ್ಟು ಕೋಟಿ ರೂಪಾಯಿ? 400 ಕೋಟಿ ಕಲೆಕ್ಷನ್ ಅನುಮಾನ?
ಇನ್ನುಳಿದಂತೆ 10ನೇ ದಿನವಾದ ಸೆಪ್ಟೆಂಬರ್ 4ರಂದು ಎಲ್ಲಾ ಭಾಷೆಗಳು ಸೇರಿ ಭಾರತದಲ್ಲಿ 2,253 ಶೋಗಳಿಂದ 1.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ದಾಖಲಾಗಿದೆ. ಇದರಲ್ಲಿ ಹಿಂದಿ ಹಾಗೂ ಕನ್ನಡ ಆವೃತ್ತಿಗಳು ತಲಾ 85 ಲಕ್ಷ ರೂಪಾಯಿ ಗಳಿಸಿದರೆ, ತೆಲುಗು 4 ಲಕ್ಷ ಹಾಗೂ ತಮಿಳು ಆವೃತ್ತಿ 1 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿವೆ. ಪ್ರಸ್ತುತ ಭಾರತದಲ್ಲಿ ಒಟ್ಟು ನೆಟ್ ಕಲೆಕ್ಷನ್ 241.05 ಕೋಟಿ ರೂಪಾಯಿ ತಲುಪಿದ್ದು, ವಿದೇಶಿ ಗಳಿಕೆ 43.25 ಕೋಟಿ ಸೇರಿ ಜಾಗತಿಕವಾಗಿ ಚಿತ್ರವು 331 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.