ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿಲ್ಲವೇಕೆ: ಯಶ್ ಕೊಟ್ಟರು ಉತ್ತರ

|

Updated on: May 10, 2023 | 8:54 PM

Karnataka Assembly Election 2023: ಸುದೀಪ್, ಶಿವಣ್ಣ ಇನ್ನೂ ಹಲವು ಸ್ಟಾರ್​ ನಟರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಆದರೆ ನಟ ಯಶ್ ಯಾರ ಪರವಾಗಿಯೂ ಪ್ರಚಾರ ಮಾಡಿಲ್ಲ. ತಾವೇಕೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿಲ್ಲ ಎಂಬುದನ್ನು ಸ್ವತಃ ಯಶ್ ವಿವರಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿಲ್ಲವೇಕೆ: ಯಶ್ ಕೊಟ್ಟರು ಉತ್ತರ
ಯಶ್
Follow us on

ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Eleection 2023) ಮತದಾನ ಅಂತ್ಯವಾಗಿದೆ. ರಾಜ್ಯದಾದ್ಯಂತ ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಐದು ಗಂಟೆ ವೇಳೆಗೆ ರಾಜ್ಯದಾದ್ಯಂತ 65.69% ಮತಚಲಾವಣೆ ಆಗಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಮತದಾನ ಈ ಬಾರಿ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಬಾರಿ ಸಿನಿಮಾ ನಟರು ವಿವಿಧ ಪಕ್ಷಗಳು, ಅಭ್ಯರ್ಥಿಗಳ ಪರವಾಗಿ ಸಕ್ರಿಯಾಗಿ ಚುನಾವಣಾ ಪ್ರಚಾರದಲ್ಲಿ (Election Campaign) ಪಾಲ್ಗೊಂಡಿದ್ದರು. ಸುದೀಪ್ (Sudeep), ಶಿವರಾಜ್ ಕುಮಾರ್ (Shiva Rajkumar), ದುನಿಯಾ ವಿಜಯ್, ಧ್ರುವ ಸರ್ಜಾ, ನಟಿಯರಾದ ರಮ್ಯಾ, ಶ್ರುತಿ, ಹರ್ಷಿಕಾ ಪೂಣಚ್ಚ ಇನ್ನೂ ಹಲವರು ಈ ಬಾರಿ ಚುನಾವಣಾ ಪ್ರಚಾರ ನಡೆಸಿದರು. ಆದರೆ ಕನ್ನಡದ ಸ್ಟಾರ್ ನಟರಲ್ಲೊಬ್ಬರಾದ ಯಶ್ (Yash) ಈ ಬಾರಿ ಯಾರ ಪರವಾಗಿಯೂ ಪ್ರಚಾರ ಮಾಡಿರಲಿಲ್ಲ. ತಾವೇಕೆ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು ಎಂಬ ಬಗ್ಗೆ ಸ್ವತಃ ಯಶ್ ಇಂದು ಮಾತನಾಡಿದ್ದಾರೆ.

ಇಂದು ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ಯಶ್, ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಈ ಬಾರಿ ಚುನಾವಣಾ ಪ್ರಚಾರ ಮಾಡಬೇಕು ಎಂದು ಅನಿಸಲಿಲ್ಲ. ಚುನಾವಣೆ ಪ್ರಚಾರ ಮಾಡದೇ ಇರುವುದು ನನ್ನ ವೈಯಕ್ತಿಕ ಆಯ್ಕೆ ಆಗಿತ್ತು. ಕಳೆದ ಬಾರಿ ಚುನಾವಣಾ ಪ್ರಚಾರ ಮಾಡುವಾಗ ಕೆಲವು ಉದ್ದೇಶಗಳಿದ್ದವು, ಯಶೋಮಾರ್ಗದ ಕಡೆಯಿಂದ ಕೆರೆ ಮರುಪೂರಣದ ಕುರಿತು ಮಾಹಿತಿ ಪಡೆಯುವುದಾಗಲಿ ಇನ್ನಿತರೆ ಕಾರಣಗಳಿಗಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಆದರೆ ಈ ಬಾರಿ ಚುನಾವಣಾ ಪ್ರಚಾರ ಮಾಡದೇ ಇರುವುದು ವೈಯಕ್ತಿಕ ಆಯ್ಕೆ ಅಷ್ಟೆ” ಎಂದಿದ್ದಾರೆ ಯಶ್.

ಯುವ ಮತದಾರರಿಗಿಂತಲೂ ಹಿರಿಯ ನಾಗರೀಕರೆ ಉತ್ಸಾಹದಿಂದ ಮತಚಲಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಯಶ್, ‘ಮತಚಲಾವಣೆ ಎಷ್ಟು ಮುಖ್ಯ ಎಂಬ ಬಗ್ಗೆ 18 ತುಂಬಿದ ಯುವಕ-ಯುವತಿಯರೆ ಪ್ರತ್ಯೇಕ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎನಿಸುತ್ತದೆ. ಮಾಹಿತಿ ಕೊರತೆಯಿಂದ, ಯಾರಿಗೆ ಮತ ಹಾಕಿದರೇನು ಎಂಬೆಲ್ಲ ಮಾತುಗಳನ್ನು ಯುವಕರು ಆಡಿಬಿಡುತ್ತಾರೆ. ಆದರೆ ಅದರಿಂದ ಆಗುವ ಬದಲಾವಣೆ ಎಂಥಹದ್ದು, ಮತದಾನ ಹಕ್ಕು ಎಂಬುದನ್ನು ಅವರಿಗೆ ಅರ್ಥಮಾಡಿಸಬೇಕಿದೆ” ಎಂದಿದ್ದಾರೆ ಯಶ್.

”ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷವಾಗಲಿ ಜನರ ಮೂಲಭೂತ ಅವಶ್ಯಕತೆಯನ್ನು ಪೂರೈಸುವುದೇ ಮೊದಲ ಆದ್ಯತೆ ಆಗಬೇಕಾಗುತ್ತದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳೇ ಜನರಿಗೆ ಹೆಚ್ಚು ಮುಖ್ಯ. ಜೊತೆಗೆ ಯಾವುದೇ ಕೆಲಸಗಳಿಗಾಗಿ ಅಧಿಕಾರಿಗಳು, ರಾಜಕಾರಣಿಗಳ ಮೂಲಕ ಆಗಬೇಕು ಎಂಬುದಕ್ಕಿಂತಲೂ ಕೆಲಸಗಳು ಸರಳವಾಗಿ, ನಿಯಮಬದ್ಧವಾಗಿ ಆಗುವಂತೆ ಮಾಡುವುದು ಸಹ ರಾಜಕಾರಣಿಗಳ ಕರ್ತವ್ಯ ಎನಿಸುತ್ತದೆ” ಎಂದಿದ್ದಾರೆ ನಟ ಯಶ್.

ಇದನ್ನೂ ಓದಿ:Yash: ರಾಧಿಕಾ ಪಂಡಿತ್ ನಿರೀಕ್ಷಿಸಿದ್ದೇ ಬೇರೆ, ವಾಸ್ತವವೇ ಬೇರೆ; ಫೋಟೋ ಮೂಲಕ ವಿವರಿಸಿದ ಯಶ್

ಯಶ್ ಮತದಾನ ಮಾಡಲು ಆಗಮಿಸಿದ ವೇಳೆ ಅವರ ಹೊಸ ಹೇರ್​ಸ್ಟೈಲ್ ಸಖತ್ ಗಮನ ಸೆಳೆದಿದೆ. ಉದ್ದನೆಯ ಕೂದಲು ಬಿಟ್ಟಿದ್ದಾರೆ ನಟ ಯಶ್. ಗಡ್ಡ ಮಾತ್ರ ಹಾಗೆಯೇ ಇದೆ. ಯಶ್​ರ 19ನೇ ಸಿನಿಮಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಮಾಷೆಯ ಉತ್ತರ ನೀಡಿದ ಯಶ್, ನನಗೆ 35 ವರ್ಷ ವಯಸ್ಸಾಯಿತು, ನೀವಿನ್ನೂ ಯಶ್ 19 ಎನ್ನುತ್ತಿದ್ದೀರಲ್ಲ ಎಂದಿದ್ದಾರೆ. ನಂತರ, ಇದು ಮತದಾನದ ದಿನ, ಇಂದು ಸಿನಿಮಾ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಸಮಯ ಬಂದಾಗ ನಾನೇ ಕೇಳುತ್ತೇನೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ