ಯಶ್ಗೆ ಬಿಗ್ ರಿಲೀಫ್; ‘ಟಾಕ್ಸಿಕ್’ ಸಿನಿಮಾ ವಿರುದ್ಧ ಎಫ್ಐಆರ್ಗೆ ಹೈಕೋರ್ಟ್ ತಡೆ
Toxic Kannada Movie: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಅರಣ್ಯ ಕಾಯ್ದೆ ಉಲ್ಲಂಘಿಸಿದೆ ಎಂದು ಆರೋಪಿಸಿ ಹಾಕಲಾಗಿದ್ದ ಎಫ್ಐಆರ್ಗೆ ಕರ್ನಾಟಕ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕರ ವಿರುದ್ಧ ಹಾಕಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ. ಆ ಮೂಲಕ ಸಿನಿಮಾದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ನಿರಾಳರಾಗಿದ್ದಾರೆ. ‘ಟಾಕ್ಸಿಕ್’ ಚಿತ್ರತಂಡ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿತ್ತು ಎಂದು ಆರೋಪಿಸಿ ಸಿನಿಮಾದ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಹಾಗೂ ಮಾನ್ಸಸ್ಟರ್ ಮೈಂಡ್ಸ್ ವಿರುದ್ಧ ರಾಜ್ಯ ಅರಣ್ಯ ಇಲಾಖೆ ದೂರು ನೀಡಿತ್ತು. ದೂರು ಆಧರಿಸಿ ಎಫ್ಐಆರ್ ಸಹ ದಾಖಲಾಗಿತ್ತು. ಇದೀಗ ಈ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ಎಚ್ಎಂಟಿಯ ಮೈದಾನದಲ್ಲಿ ‘ಟಾಕ್ಸಿಕ್’ ಸಿನಿಮಾ ಸೆಟ್ ನಿರ್ಮಾಣ ಮಾಡಲಾಗಿತ್ತು. ಭಾರಿ ಮೊತ್ತದ ಹಣ ಖರ್ಚು ಮಾಡಿ ಬೃಹತ್ ಸೆಟ್ ಅನ್ನು ಇಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಈ ಸೆಟ್ ನಿರ್ಮಾಣ ಮಾಡಲು ಮೈದಾನದಲ್ಲಿದ್ದ ಮರಗಳನ್ನು ಅಕ್ರಮವಾಗಿ, ಯಾವುದೇ ಪೂರ್ವಾನುಮತಿ ಇಲ್ಲದೆ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಆರೋಪ ಮಾಡಿತ್ತು, ವಕೀಲರೊಬ್ಬರು ಸಹ ನ್ಯಾಯಾಲಯದಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿದ್ದರು.
ಸ್ವತಃ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಯವರು ‘ಟಾಕ್ಸಿಕ್’ ಸಿನಿಮಾ ಸೆಟ್ಗೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆ ವತಿಯಿಂದ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿ, ‘ಟಾಕ್ಸಿಕ್’ ಸಿನಿಮಾ ಸೆಟ್ ಹಾಕುವ ಮುಂಚೆ ಆ ಪ್ರದೇಶ ಹೇಗಿತ್ತು, ಸೆಟ್ ನಿರ್ಮಾಣ ಮಾಡಿದ ಮೇಲೆ ಹೇಗಾಗಿದೆ ಎಂದು ಮಾಧ್ಯಮಗಳ ಮುಂದೆ ತೋರಿಸಿದ್ದರು. ಆದರೆ ಚಿತ್ರತಂಡ, ತಾವು ಮರಗಳನ್ನು ಕಡಿದಿಲ್ಲವೆಂದು, ಅಲ್ಲದೆ ಮೈದಾನದಲ್ಲಿದ್ದ ಗಿಡಗಂಟೆಗಳನ್ನಷ್ಟೆ ಸ್ವಚ್ಛ ಮಾಡಿರುವುದಾಗಿ ಹೇಳಿಕೊಂಡಿತ್ತು.
ಇದನ್ನೂ ಓದಿ:ಟಾಕ್ಸಿಕ್ ಸಿನಿಮಾ: ಯಶ್ ಜೊತೆಗೂಡಿದ ಮತ್ತೊಬ್ಬ ಬಾಲಿವುಡ್ ಬೆಡಗಿ
ಈ ಪ್ರಕರಣದಲ್ಲಿ ಎಚ್ಎಂಟಿ ಸಂಸ್ಥೆ ಮೇಲೆ ಸಹ ಆರೋಪಗಳು ಕೇಳಿ ಬಂದಿದ್ದವು. ಸರ್ಕಾರ ನೀಡಿರುವ ಭೂಮಿಯನ್ನು ಸಿನಿಮಾ ಚಿತ್ರೀಕರಣಗಳಿಗೆ ನೀಡಿ ಎಚ್ಎಂಟಿ ಅಕ್ರಮವಾಗಿ ಹಣ ಮಾಡುತ್ತಿದೆ. ತಪ್ಪು ಉದ್ದೇಶಗಳಿಗೆ ಸರ್ಕಾರ ನೀಡಿರುವ ಜಾಗವನ್ನು ಬಳಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ಬಿಡುಗಡೆ ಮಾಡಿದ್ದ ಎಚ್ಎಂಟಿ, ‘ಟಾಕ್ಸಿಕ್’ ಸಿನಿಮಾಕ್ಕೆ ಸೆಟ್ ಹಾಕಿರುವ ಜಾಗಕ್ಕೂ ತಮಗೂ ಸಂಬಂಧ ಇಲ್ಲ ಎಂದಿತ್ತು. ಆ ಜಾಗ ಈಗ ಕೆನರಾ ಬ್ಯಾಂಕ್ ಸುಪರ್ಧಿಯಲ್ಲಿರುವ ವಿಷಯ ಬಳಿಕ ಬೆಳಕಿಗೆ ಬಂದಿತ್ತು.
ಇದೀಗ ರಾಜ್ಯ ಹೈಕೋರ್ಟ್ನ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿ ಸಿನಿಮಾದ ನಿರ್ಮಾಪಕರ ಮೇಲೆ ಸಲ್ಲಿಸಲಾಗಿದ್ದ ಎಫ್ಐಆರ್ಗೆ ಮಧ್ಯಂತರ ತಡೆ ಆಜ್ಞೆ ನೀಡಿದೆ. ‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕರ ಪರವಾಗಿ ವಾದಿಸಿದ ವಕೀಲ ಬಿಪಿನ್ ಹೆಗ್ಡೆ, 400 ಎಕರೆ ಜಮೀನಿನ 18 ಎಕರೆ ಜಾಗವನ್ನು ಹೆಚ್ ಎಂ ಟಿ ಸಂಸ್ಥೆ ಕೆನರಾ ಬ್ಯಾಂಕ್ಗೆ ಮಾರಾಟ ಮಾಡಿದೆ. ಇಲ್ಲಿ, 30 ಕೋಟಿ ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ. ಈಗ ಸೆಟ್ ನಿರ್ಮಿಸಲಾಗಿರುವ ಜಾಗ ಅರಣ್ಯ ಭೂಮಿಯಲ್ಲ ಎಂದು ಸ್ವತಃ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಅಲ್ಲದೆ ಶೂಟಿಂಗ್ ಸೆಟ್ ಹಾಕಲು ಯಾವುದೇ ಮರಗಳನ್ನು ಕಡಿದಿಲ್ಲ ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಮಧ್ಯಂತರ ತಡೆ ಆದೇಶ ನೀಡಿದರು.
‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಒಟ್ಟಿಗೆ ನಿರ್ಮಾಣ ಮಾಡುತ್ತಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಮುಂಬೈಗೆ ಸ್ಥಳಾಂತರಗೊಂಡಿದೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಇನ್ನೂ ಹಲವು ಖ್ಯಾತ ನಟ-ನಟಿಯರು ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Thu, 5 December 24