Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ

| Updated By: ಮದನ್​ ಕುಮಾರ್​

Updated on: Dec 25, 2021 | 4:11 PM

2021ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳ ಸಂಖ್ಯೆ 100ಕ್ಕೂ ಅಧಿಕ! ಡಬ್ಬಿಂಗ್​ ಚಿತ್ರಗಳು ಮತ್ತು ಡಿಸೆಂಬರ್​ ಕೊನೇ ವಾರದಲ್ಲಿ ರಿಲೀಸ್​ ಆಗುವ ಸಿನಿಮಾಗಳನ್ನೂ ಸೇರಿದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ.

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ
Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು
Follow us on

ಸಿನಿಮಾ ಎಂದರೆ ಮಾಯಾಲೋಕ. ಇಲ್ಲಿನ ವ್ಯವಹಾರವೂ ಕೆಲವೊಮ್ಮೆ ಮಾಯೆಯಾಗಿಯೇ ಕಾಣುತ್ತದೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಿ ಗೆಲ್ಲುವುದು ಸುಲಭವಲ್ಲ. ವಾತಾವರಣ ಸರಿಯಿದ್ದಾಗಲೇ ಜನರನ್ನು ಥಿಯೇಟರ್​ಗೆ ಕರೆತರುವುದು ಕಷ್ಟದ ಕೆಲಸ. ಅಂಥದ್ದರಲ್ಲಿ ಕೊರೊನಾದಂತಹ ವಿಘ್ನಗಳು ಎದುರಾದರೆ ದೇವರೇ ಗತಿ. ಅದರ ನಡುವೆಯೂ ಧೈರ್ಯ ಮಾಡಿ ಬಿಡುಗಡೆಯಾದ ಕನ್ನಡ ಸಿನಿಮಾಗಳ ಸಂಖ್ಯೆ 100ಕ್ಕೂ ಅಧಿಕ! ಡಬ್ಬಿಂಗ್​ ಚಿತ್ರಗಳು ಮತ್ತು ಡಿಸೆಂಬರ್​ ಕೊನೇ ವಾರದಲ್ಲಿ ರಿಲೀಸ್​ ಆಗುವ ಸಿನಿಮಾಗಳನ್ನೂ ಸೇರಿದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಆದರೆ ಗೆಲ್ಲಲು ಸಾಧ್ಯವಾಗಿದ್ದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಆ ಫೈಕಿ ಗಮನ ಸೆಳೆದ ಕನ್ನಡ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ..

 

ಹೇಗಿತ್ತು ವರ್ಷದ ಆರಂಭ?

2021ರ ವರ್ಷಾರಂಭ ಕನ್ನಡ ಚಿತ್ರರಂಗದ ಪಾಲಿಗೆ ಅಷ್ಟೇನೂ ಆಶಾದಾಯಕ ಆಗಿರಲಿಲ್ಲ. ಜನವರಿ ತಿಂಗಳಲ್ಲಿ ಯಾವುದೇ ಬಿಗ್​ ಸಿನಿಮಾ ತೆರೆಕಾಣಲಿಲ್ಲ. ನಂತರ ಫೆಬ್ರವರಿ ತಿಂಗಳಲ್ಲಿ ಪ್ರಜ್ವಲ್ ​ದೇವರಾಜ್​ ನಟನೆಯ ‘ಇನ್​​ಪೆಕ್ಟರ್​ ವಿಕ್ರಮ್​’ ಚಿತ್ರ ಕೊಂಚ ಸದ್ದು ಮಾಡಿತು. ಫೆ.19ರಂದು ತೆರೆಕಂಡ ‘ಪೊಗರು’ ಸಿನಿಮಾಗೆ ಭರ್ಜರಿ ಓಪನಿಂಗ್​ ಸಿಕ್ಕಿತು. ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಕಲೆಕ್ಷನ್​ ಮಾಡುವಲ್ಲಿ ಈ ಸಿನಿಮಾ ಯಶಸ್ವಿ ಆಯಿತು.

ಧೂಳೆಬ್ಬಿಸಿದ ‘ರಾಬರ್ಟ್​’

ಮೊದಲ ಲಾಕ್​ಡೌನ್​ ಬಳಿಕ ಮಂಕಾಗಿದ್ದ ಚಿತ್ರರಂಗಕ್ಕೆ ‘ರಾಬರ್ಟ್​’ ಸಿನಿಮಾದಿಂದ ದೊಡ್ಡ ಚೇತರಿಕೆ ಸಿಕ್ಕಿತು. ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರಕ್ಕೆ ಜನರು ಫಿದಾ ಆದರು. ಮಾಸ್​ ಕಥೆಯ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್​, ಫ್ರೆಂಡ್​ಶಿಪ್​ ಮುಂತಾದ ಅಂಶಗಳನ್ನು ಸೇರಿಸಿ ಈ ಚಿತ್ರವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದರು. ಈ ವರ್ಷದ ಬ್ಲಾಕ್​ಬಸ್ಟರ್​ ಚಿತ್ರವಾಗಿ ‘ರಾಬರ್ಟ್​’ ಹೊರಹೊಮ್ಮಿತು.

ಏನಾಯಿತು ‘ಹೀರೋ’ ಕಥೆ?

ರಿಷಬ್​ ಶೆಟ್ಟಿ ನಿರ್ದೇಶನದ ‘ಹೀರೋ’ ಸಿನಿಮಾ ಮೇಲೆ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಟ್ರೇಲರ್​ನಿಂದ ಗಮನ ಸೆಳೆದಿದ್ದ ಈ ಚಿತ್ರ ಹಾಡುಗಳ ಮೂಲಕವೂ ಮೋಡಿ ಮಾಡಿತ್ತು. ಆದರೆ ಥಿಯೇಟರ್​ನಲ್ಲಿ ‘ಹೀರೋ’ ಆಟ ಅಷ್ಟೇನೂ ಯಶಸ್ವಿ ಆಗಲಿಲ್ಲ. ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್​ ಅವರು ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು.

ಕೊರೊನಾ ಹೊಡೆತಕ್ಕೆ ಸಿಕ್ಕ ‘ಯುವರತ್ನ’

ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ ಏಪ್ರಿಲ್​ 1ರಂದು ತೆರೆಕಂಡಿತು. ಆದರೆ ಆ ಚಿತ್ರದ ಮೇಲೆ ಕೊರೊನಾದ ಕರಿನೆರಳು ಆವರಿಸಿತು. ಚಿತ್ರ ಬಿಡುಗಡೆ ಆಗುತ್ತಿದ್ದಂತೆಯೇ ಕೊವಿಡ್​ ಎರಡನೇ ಅಲೆ ಜೋರಾಯಿತು. ರಾಜ್ಯ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಿತು. ಅದರ ಪರಿಣಾಮವಾಗಿ ‘ಯುವರತ್ನ’ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಗೆಲುವು ಸಿಗಲಿಲ್ಲ.

ಮೆಚ್ಚುಗೆ ಸಿಕ್ಕರೂ ಹಣ ಮಾಡಲಿಲ್ಲ ‘ಪುಕ್ಸಟ್ಟೆ ಲೈಫು’

ಸಂಚಾರಿ ವಿಜಯ್​ ನಟನೆಯ ‘ಪುಕ್ಸಟ್ಟೆ ಲೈಫು’ ಸಿನಿಮಾ ಸೆ.24ರಂದು ತೆರೆಕಂಡಿತು. ಅರವಿಂದ್​ ಕುಪ್ಲೀಕರ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಮರ್ಶಕರಿಂದ ‘ಪುಕ್ಸಟ್ಟೆ ಲೈಫು’ ಸಿನಿಮಾಗೆ ಮೆಚ್ಚುಗೆ ಸಿಕ್ಕಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುವಲ್ಲಿ ಸಾಧ್ಯವಾಗಲಿಲ್ಲ ಎಂಬುದು ಬೇಸರದ ಸಂಗತಿ.

‘ಸಲಗ’, ‘ಕೋಟಿಗೊಬ್ಬ 3’, ‘ಭಜರಂಗಿ 2’

ಅಕ್ಟೋಬರ್​ ತಿಂಗಳಲ್ಲಿ ಚಂದನವನದ ಚಟುವಟಿಕೆಗಳು ಗರಿಗೆದರಿದ್ದವು. ಬ್ಯಾಕ್​ ಟು ಬ್ಯಾಕ್​ ಸ್ಟಾರ್​ ಸಿನಿಮಾಗಳು ತೆರೆಕಂಡವು. ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಚಿತ್ರ ಆಂತರಿಕ ಕಾರಣಗಳಿಂದಾಗಿ ಮೊದಲ ದಿನ ರಿಲೀಸ್​ ಆಗಲು ಸಾಧ್ಯವಾಗಲಿಲ್ಲ. ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಒಂದು ದಿನ ತಡವಾಗಿ ಈ ಚಿತ್ರ ಬಿಡುಗಡೆ ಆಯಿತು. ಸುದೀಪ್​ ಅಭಿಮಾನಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡರು. ಈ ವರ್ಷ ಭರ್ಜರಿ ಗೆಲುವು ದಾಖಲಿಸಿದ ಸಿನಿಮಾಗಳ ಪಟ್ಟಿಯಲ್ಲಿ ‘ಸಲಗ’ ಚಿತ್ರ ಮುಂಚೂಣಿಯಲ್ಲಿದೆ. ದುನಿಯಾ ವಿಜಯ್​ ನಟನೆ, ನಿರ್ದೇಶನದ ಈ ಚಿತ್ರಕ್ಕೆ ಜನರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿತು. ಅ.29ರಂದು ‘ಭಜರಂಗಿ 2’ ಸಿನಿಮಾ ತೆರೆಕಂಡಿತು. ಮಾರ್ನಿಂಗ್​ ಶೋ ಎಲ್ಲ ಕಡೆ ಹೌಸ್​ ಫುಲ್ ಪ್ರದರ್ಶನ ಕಾಣುತ್ತಿತ್ತು. ಅದರ ಬೆನ್ನಲೇ ಪುನೀತ್​ ನಿಧನದ ಸುದ್ದಿ ಸಿಡಿಲಿನಂತೆ ಬಡಿಯಿತು. ಅದು ಕನ್ನಡ ಚಿತ್ರರಂಗ ಪಾಲಿಗೆ ಕರಾಳ ದಿನವಾಯಿತು.

ಓಟಿಟಿಯಲ್ಲಿ ‘ರತ್ನನ್​ ಪ್ರಪಂಚ’ಕ್ಕೆ ಗೆಲುವು

ಡಾಲಿ ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಯಿತು. ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ಪ್ರಸಾರವಾದ ಈ ಚಿತ್ರವನ್ನು ಸಿನಿಪ್ರಿಯರು ಮೆಚ್ಚಿಕೊಂಡರು.

‘ಗರುಡ ಗಮನ ವೃಷಭ ವಾಹನ’ ಮತ್ತು ‘100’

ನಿರ್ದೇಶಕ ರಾಜ್​ ಬಿ. ಶೆಟ್ಟಿ ಅವರ ಬತ್ತಳಿಕೆಯಿಂದ ಬಂದ (ನ.19) ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುವಲ್ಲಿ ಈ ಚಿತ್ರ ಯಶಸ್ವಿ ಆಯಿತು. ಅದೇ ದಿನ ತೆರೆಕಂಡ ‘100’ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನಬೆಂಬಲ ಸಿಗಲಿಲ್ಲ. ವಿಮರ್ಶೆಯ ದೃಷ್ಟಿಯಿಂದ ಆ ಚಿತ್ರ ಗಮನ ಸೆಳೆಯಿತು.

ಸಖತ್​, ದೃಶ್ಯ 2, ಬಡವ ರಾಸ್ಕಲ್​, ರೈಡರ್​, ಮದಗಜ:

ಗಣೇಶ್​ ನಟನೆಯ ‘ಸಖತ್​’ ಸಿನಿಮಾವನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ‘ಮದಗಜ’ ಚಿತ್ರಕ್ಕೆ ಮಾಸ್​ ಓಪನಿಂಗ್​ ಸಿಕ್ಕರೂ ಕೂಡ ನಂತರದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಯಿತು. ‘ದೃಶ್ಯ 2’ ಸಿನಿಮಾಗೆ ವಿಮರ್ಶಕರಿಂದ ಉತ್ತಮ ರೇಟಿಂಗ್​ ಸಿಕ್ಕಿತು. ಆದರೆ ಥಿಯೇಟರ್​ನಲ್ಲಿ ಹೆಚ್ಚು ಮೋಡಿ ಮಾಡಲಿಲ್ಲ. ಡಿ.24ರಂದು ಬಿಡುಗಡೆ ಆಗಿರುವ ‘ಬಡವ ರಾಸ್ಕಲ್​’ ಮತ್ತು ‘ರೈಡರ್​’ ಸಿನಿಮಾಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ:

Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ

100 Movie Review: ಮೆಸೇಜ್​ ಮಾಡಿ ಮೈ ಮರೆಯುವ ಎಲ್ಲರಿಗೂ ‘100’ ಚಿತ್ರವೇ ಒಂದು ಮೆಸೇಜ್​