AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಾಳಿಪಟ 2’ ರಿಲೀಸ್​ಗೂ ಮುನ್ನ ಯೋಗರಾಜ್​ ಹೊಸ ಚಿತ್ರ ಶುರು; ‘ಗರಡಿ’ಯಲ್ಲಿ ಬಿ.ಸಿ. ಪಾಟೀಲ್​, ಯಶಸ್​ ಸೂರ್ಯ

Yogaraj Bhat: ಯೋಗರಾಜ್​ ಭಟ್​ ನಿರ್ದೇಶಿಸಲಿರುವ ‘ಗರಡಿ’ ಚಿತ್ರದಲ್ಲಿ ನಾಯಕನಾಗಿ ಯುವ ನಟ ಯಶಸ್ ಸೂರ್ಯ ಅಭಿನಯಿಸುತ್ತಿದ್ದಾರೆ. ಬಿ.ಸಿ. ಪಾಟೀಲ್ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

‘ಗಾಳಿಪಟ 2’ ರಿಲೀಸ್​ಗೂ ಮುನ್ನ ಯೋಗರಾಜ್​ ಹೊಸ ಚಿತ್ರ ಶುರು; ‘ಗರಡಿ’ಯಲ್ಲಿ ಬಿ.ಸಿ. ಪಾಟೀಲ್​, ಯಶಸ್​ ಸೂರ್ಯ
‘ಗರಡಿ’ ಸಿನಿಮಾ ಮುಹೂರ್ತ
Follow us
TV9 Web
| Updated By: ಮದನ್​ ಕುಮಾರ್​

Updated on: Nov 20, 2021 | 3:53 PM

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಯೋಗರಾಜ್​ ಭಟ್​ (Yogaraj Bhat) ಅವರು ಈಗ ‘ಗಾಳಿಪಟ 2’ (Galipata 2) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಿರ್ದೇಶನದ ಸಿನಿಮಾ ಎಂದರೆ ಪ್ರೇಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ. ‘ಮುಂಗಾರು ಮಳೆ’ ಮೂಲಕ ಅವರ ಮೂಡಿಸಿದ ಭರವಸೆ ಅಂಥದ್ದು. ಯೋಗರಾಜ್​ ಭಟ್​ ‘ಗಾಳಿಪಟ 2’ ಹಾರಿಸೋದು ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಗಾಳಿಪಟ’ ಸಿನಿಮಾದ ಸೀಕ್ವೆಲ್​ ಆಗಿ ಈ ಚಿತ್ರ ಮೂಡಿಬರುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಆದರೆ ಆ ಸಿನಿಮಾ ರಿಲೀಸ್​ ಆಗುವುದಕ್ಕೂ ಮುನ್ನವೇ ಯೋಗರಾಜ್​ ಭಟ್​ ಅವರು ಹೊಸದೊಂದು ಸಿನಿಮಾದ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಹೊಸ ಚಿತ್ರಕ್ಕೆ ‘ಗರಡಿ’ (Garadi) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ‘ಕೌರವ’ ಬಿ.ಸಿ. ಪಾಟೀಲ್​ (BC Patil) ಅವರು ಅಭಿನಯಿಸುತ್ತಿದ್ದಾರೆ ಎಂಬುದು ವಿಶೇಷ. ಚಿತ್ರದ ‘ಮುಹೂರ್ತ’ ಹಾಗೂ ‘ಟೈಟಲ್ ಲಾಂಚ್’ ಕಾರ್ಯಕ್ರಮಗಳು ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಇತ್ತೀಚೆಗಷ್ಟೇ ನಡೆಯಿತು. ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನರು ಬಂದು ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.

ಸೌಮ್ಯ ಫಿಲಂಸ್ ಸಂಸ್ಥೆ ಮೂಲಕ ತಯಾರಾಗುತ್ತಿರುವ ಈ ಚಿತ್ರಕ್ಕೆ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರ ಪತ್ನಿ ವನಜಾ ಬಿ. ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ಬಂಡವಾಳ ಹೂಡಲಿದ್ದಾರೆ. ‘ಗರಡಿ’ ಚಿತ್ರದಲ್ಲಿ ನಾಯಕನಾಗಿ ಯುವ ನಟ ಯಶಸ್ ಸೂರ್ಯ ಅಭಿನಯಿಸುತ್ತಿದ್ದಾರೆ. ಬಿ.ಸಿ. ಪಾಟೀಲ್ ಅವರು ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಗರಡಿ’ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಯಕಿಯ ಪಾತ್ರಕ್ಕೆ ಜನಪ್ರಿಯ ನಟಿಯೊಬ್ಬರು ಆಯ್ಕೆಯಾಗಲಿದ್ದಾರೆ. ಇನ್ನುಳಿದಂತೆ ಚಿತ್ರದ ಬೇರೆ ಬೇರೆ ಪ್ರಮುಖ ಪಾತ್ರಗಳಿಗಾಗಿ ಕಲಾವಿದರ ಹುಡುಕಾಟ ನಡೆಯುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ.

ನಿರಂಜನ್ ಬಾಬು ಛಾಯಾಗ್ರಾಹಣ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಯೋಗರಾಜ್​ ಭಟ್​ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ‘ಡ್ರಾಮಾ’ ಸಿನಿಮಾದ ಚಿತ್ರಕಥೆಯಲ್ಲಿ ಯೋಗರಾಜ್​ ಭಟ್ ಜೊತೆ ಕೈ ಜೋಡಿಸಿದ್ದ ವಿಕಾಸ್ ಅವರು ‘ಗರಡಿ’ ಚಿತ್ರದಲ್ಲಿ ಮತ್ತೆ ಅವರಿಗೆ ಸಾಥ್​ ನೀಡಲಿದ್ದಾರೆ.

ಇದನ್ನೂ ಓದಿ:

ಸಖತ್​ ಆಗಿದೆ ‘ಸಖತ್’ ಟೀಸರ್​; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್​, ಸಿಂಪಲ್​ ಸುನಿ

ಕಪಾಳಮೋಕ್ಷ ಕಾಂಟ್ರವರ್ಸಿ: ಟೀಕೆ ಮಾಡಿದವರಿಗೆ ‘ಜೈ ಭೀಮ್​’ ನಟ ಪ್ರಕಾಶ್​ ರಾಜ್​ ಖಡಕ್​ ತಿರುಗೇಟು