ಗಂಡಂದಿರಿಗಿಂತಲೂ ಹೆಂಡತಿಯರು ಯಾಕೆ ಸುಖವಾಗಿರುತ್ತಾರೆ? ಭಟ್ಟರು ಕೊಟ್ಟರು ಉತ್ತರ

Yogaraj Bhatt: ಗಂಡಂದಿರಿಗೆ ಹೋಲಿಸಿಕೊಂಡರೆ ಹೆಂಡತಿಯರೇಕೆ ಸುಖವಾಗಿರುತ್ತಾರೆ, ನೆಮ್ಮದಿಯಾಗಿರುತ್ತಾರೆ? ಯೋಗರಾಜ್ ಭಟ್ಟರು ಕೊಟ್ಟರು ಸಖತ್ ಉತ್ತರ.

ಗಂಡಂದಿರಿಗಿಂತಲೂ ಹೆಂಡತಿಯರು ಯಾಕೆ ಸುಖವಾಗಿರುತ್ತಾರೆ? ಭಟ್ಟರು ಕೊಟ್ಟರು ಉತ್ತರ
Follow us
ಮಂಜುನಾಥ ಸಿ.
|

Updated on:Jan 22, 2024 | 10:05 PM

‘ವಿಕಟ ಕವಿ’ ಎಂದೇ ಖ್ಯಾತವಾಗಿರುವ ಯೋಗರಾಜ್ ಭಟ್ಟರು (Yogaraj Bhatt) ಕನ್ನಡಕ್ಕೆ ಕೆಲವು ಅದ್ಭುತ ಸಿನಿಮಾಗಳನ್ನು ಹಾಡುಗಳನ್ನು ನೀಡಿದ್ದಾರೆ. ಯೋಗರಾಜ್ ಭಟ್​ರ ಸಿನಿಮಾ, ಹಾಡುಗಳ ರೀತಿಯಲ್ಲಿ ಅವರ ಮಾತುಗಳು ಸಹ ಬಹಳ ಮಜವಾಗಿರುತ್ತವೆ. ಇದೇ ವಾರದಲ್ಲಿ ಬಿಡುಗಡೆ ಆಗಲಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ತಂಡವನ್ನು ಯೋಗರಾಜ್ ಭಟ್ ಸಂದರ್ಶನ ಮಾಡಿದ್ದು, ಹಳೆಯ ಗೆಳೆಯರನ್ನು ತಮ್ಮದೇ ಶೈಲಿಯಲ್ಲಿ ಮಾತನಾಡಿಸಿ ಚೆನ್ನಾಗಿ ಕಾಲೆಳೆದಿದ್ದಾರೆ. ಈ ಸಂವಾದದಲ್ಲಿ ಗಂಡಂದಿರಿಗೆ ಹೋಲಿಸಿದರೆ ಹೆಂಡತಿಯರು ಏಕೆ ಸುಖವಾಗಿ, ಸಂತೋಷವಾಗಿರುತ್ತಾರೆ ಎಂಬ ಪ್ರಶ್ನೆಗೆ ಭಟ್ಟರು ಉತ್ತರ ನೀಡಿದ್ದಾರೆ.

‘ಬ್ಯಾಚುಲರ್ ಪಾರ್ಟಿ’ ಸಿನಿಮಾನಲ್ಲಿ ವಿವಾಹಿತರಾದ ಯೋಗಿ ಹಾಗೂ ದಿಗಂತ್ ನಟಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವ ಅಭಿಜಿತ್ ಮಹೇಶ್ ಸಹ ವಿವಾಹಿತರೆ. ಭಟ್ಟರು, ಈ ಮೂವರನ್ನು ಮಾತಿಗೆ ಕೂರಿಸಿಕೊಂಡು, ವಿವಾಹದ ಬಳಿಕದ ಜೀವನ ಹಾಗೂ ಬ್ಯಾಚುಲರ್ ಆಗಿದ್ದಾಗಿನ ಜೀವನದ ಬಗ್ಗೆ ಮಾತನಾಡಿದರು. ಈ ವೇಳೆ ಸಾಧ್ಯವಾದಷ್ಟು ಡಿಪ್ಲೊಮ್ಯಾಟಿಕ್ ಉತ್ತರ ನೀಡಿದ ಮೂವರು ಮುಂಚೆ ಅತಿ ಆನಂದವಾಗಿದ್ದೆವು, ಈಗ ಆನಂದವಾಗಿದ್ದೇವೆ ಎಂದರು.

ಹಾಗೆಯೇ ಮಾತು ಮುಂದುವರೆಸಿದ ಯೋಗರಾಜ್ ಭಟ್ಟರು, ಮದುವೆಯಾದ ಬಳಿಕ ಗಂಡಂದಿರಿಗೆ ಹೋಲಿಸಿಕೊಂಡರೆ ಹೆಂಡತಿಯರು ಹೆಚ್ಚು ಖುಷಿಯಾಗಿ ಇರುತ್ತಾರೆ, ಜೀವನವನ್ನು ಆರಾಮವಾಗಿ ಸ್ವೀಕರಿಸುತ್ತಾರೆ, ನೆಮ್ಮದಿಯಿಂದ ಇರುತ್ತಾರೆ ಇದಕ್ಕೆ ಏನು ಕಾರಣ ಎಂದು ಮೂವರನ್ನು ಪ್ರಶ್ನೆ ಕೇಳಿದರು. ಮೂವರೂ ತಲೆ ಕೆರೆದುಕೊಂಡರಾದರೂ ಉತ್ತರ ಕೊಡಲಾಗಲಿಲ್ಲ. ಗೃಹಸ್ಥಾಶ್ರಮದಲ್ಲಿ ಹಿರಿಯರೂ ಆಗಿರುವ ಭಟ್ಟರೇ ಕೊನೆಗೆ ‘ಏಕೆಂದರೆ ಹೆಂಡತಿಯರಿಗೆ ಹೆಂಡಿರಿರುವುದಿಲ್ಲ ಅದಕ್ಕೆ’ ಎಂದರು. ಭಟ್ಟರ ಉತ್ತರಕ್ಕೆ ಯೋಗಿ, ದಿಗಂತ್, ಅಭಿಜಿತ್ ಬಿದ್ದು ಬಿದ್ದು ನಕ್ಕರು.

ಇದನ್ನೂ ಓದಿ:‘ತಂದೆಯ ಹೆಸರು ದುರುಪಯೋಗ ಮಾಡಿಕೊಳ್ಳಬೇಡಿ’: ಬುಲೆಟ್​ ಪ್ರಕಾಶ್​ ಮಗ ರಕ್ಷಕ್​ಗೆ ಸುದೀಪ್​ ಎಚ್ಚರಿಕೆ

ತಮ್ಮ ಉತ್ತರವನ್ನು ಮತ್ತೆ ವಿವರಿಸಿದ ಭಟ್ಟರು, ‘ನೋಡಿ ನೀವು ಈಗ ಇಲ್ಲಿ ಬಂದು ಮದುವೆ ಬಗ್ಗೆ, ಹೆಂಡತಿಯ ಬಗ್ಗೆ ಏನೇನೋ ಮಾತನಾಡುತ್ತಿದ್ದೀರಿ. ನೀವು ಯಾಕೆ ಹೀಗಿ ಮಾತನಾಡುತ್ತಿದ್ದೀರಿ ಎಂದು ನಿಮಗೆ ಗೊತ್ತು. ಆದರೆ ಮನೆಯಲ್ಲಿ ಕೂತು ಇದನ್ನೆಲ್ಲ ನೋಡುವ ಹೆಂಡತಿಯರಿಗೆ ಹೀಗೆಲ್ಲ ಮಾತನಾಡಿದ್ದಾರಲ್ಲ, ಇವರನ್ನು ಯಾವುದರಲ್ಲಿ ಹೊಡೆಯಬೇಕು ಎಂಬುದು ಅವರ ಯೋಚನೆ. ನೀವು ಏಕೆ ಹೀಗೆ ಮಾತನಾಡಿದಿರಿ ಎಂಬ ಕಾರಣ ಗೊತ್ತಿಲ್ಲ. ಏಕೆಂದರೆ ಅವರಿಗೆ ಹೆಂಡತಿ ಇಲ್ಲ. ಹೆಂಡತಿ ಇರುವುದು ನಿಮಗೆ’ ಎಂದರು.

ಭಟ್ಟರ ಈ ಅದ್ಭುತ ಸಂಶೋಧನೆಗೆ ಮೂವರು ಫಿದಾ ಆಗಿಬಿಟ್ಟರು. ನಿರ್ದೇಶಕ ಅಭಿಜಿತ್ ಅಂತೂ, ಗುರುಗಳೇ ನೀವು ಸಮಸ್ಯೆಯ ಮೂಲವನ್ನೇ ಹುಡುಕಿಬಿಟ್ಟಿದ್ದೀರಿ ಎಂದು ಅಭಿನಂದಿಸಿದರು. ಭಟ್ಟರು ಮಾಡಿರುವ ಸಂದರ್ಶನದಲ್ಲಿ ಯೋಗಿ ಹಾಗೂ ದಿಗಂತ್ ಹಲವು ಹಳೆಯ ತಮಾಷೆಯ ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಂದಹಾಗೆ ಜನವರಿ 26ಕ್ಕೆ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Mon, 22 January 24