ತ್ರಿಷಾ ಬಗ್ಗೆ ಕೀಳು ಹೇಳಿಕೆ ನೀಡಿದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಕೇಸ್ ದಾಖಲು
ಅನೇಕ ಸೆಲೆಬ್ರಿಟಿಗಳು ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ನಟಿ ತ್ರಿಷಾ ಸಹ ಮನ್ಸೂರ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ಮನ್ಸೂರ್ ಅಲಿ ಖಾನ್ (Mansoor Ali Khan) ಅವರಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ಜನಪ್ರಿಯ ನಟಿ ತ್ರಿಷಾ (Trisha) ಬಗ್ಗೆ ಅವರು ನೀಡಿದ್ದ ಕೀಳು ಹೇಳಿಕೆಗೆ ಅನೇಕರಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸ್ ಕೇಸ್ ದಾಖಲಾಗಿದೆ. ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ನವೆಂಬರ್ 21ರಂದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), 509 (ಮಹಿಳೆಯರ ಘನತೆಗೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಹಿಳಾ ಆಯೋಗದ ಆದೇಶದ ಬಳಿಕ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಈ ಕೇಸ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ಮನ್ಸೂರ್ ಅಲಿ ಖಾನ್ ಕೂಡ ಅಭಿನಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ಈ ಚಿತ್ರದಲ್ಲಿ ತ್ರಿಷಾ ಅವರ ಜೊತೆ ನನಗೆ ಬೆಡ್ ರೂಂ ಸೀನ್ ಇರಲಿಲ್ಲ. ಬೇರೆ ಸಿನಿಮಾಗಳಲ್ಲಿ ನಾನು ರೇಪ್ ಸೀನ್ ಮಾಡಿದ್ದೇನೆ. ಈ ಸಿನಿಮಾದಲ್ಲಿ ಕೂಡ ನಾನು ತ್ರಿಷಾ ಅವರನ್ನು ಬೆಡ್ ರೂಮ್ಗೆ ಎಳೆದುಕೊಂಡು ಹೋಗುವ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಶೂಟಿಂಗ್ ವೇಳೆ ಚಿತ್ರತಂಡದವರು ನನಗೆ ತ್ರಿಷಾರ ಮುಖವನ್ನೂ ತೋರಿಸಲಿಲ್ಲ’ ಎಂದು ಹೇಳಿದ್ದರು. ಅದು ವಿವಾದಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ: ಪಟ್ಟು ಬಿಡದ ‘ಖಳ’ನಟ ಮನ್ಸೂರ್ ಅಲಿ ಖಾನ್
ಅನೇಕ ಸೆಲೆಬ್ರಿಟಿಗಳು ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ನಟ ಮನ್ಸೂರ್ ಅಲಿ ಖಾನ್ ಹೇಳಿಕೆ ವಿರುದ್ಧ ಆಯೋಗವು ಸ್ವಯಂ ದೂರು ದಾಖಲಿಸಿಕೊಂಡಿದೆ. ತಮಿಳುನಾಡು ಡಿಜಿಪಿ ಈ ಪ್ರಕರಣದಲ್ಲಿ ನಟನ ವಿರುದ್ಧ ಕ್ರಮ ಕೈಗೊಳ್ಳಬೇಕು. ನಟ ನೀಡಿರುವ ಇಂಥ ಹೇಳಿಕೆಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತದೆ. ಇದನ್ನು ಖಂಡಿಸಬೇಕು’ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
ಇದನ್ನೂ ಓದಿ: ದಳಪತಿ ವಿಜಯ್ ಜತೆಗಿನ ‘ಲಿಯೋ’ ಚಿತ್ರದ ಸೆಟ್ನಿಂದ ತ್ರಿಷಾ ವಾಪಸ್ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ
ತ್ರಿಷಾ ಪ್ರತಿಕ್ರಿಯೆ ಏನು?
‘ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಡಿಯೋ ಗಮನಿಸಿದ್ದೇನೆ. ಮಹಿಳೆಯರ ಬಗ್ಗೆ ಅಗೌರವಯುತವಾಗಿ, ಕೆಟ್ಟದಾಗಿ ಮಾತನಾಡಿರುವ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅಂಥ ವ್ಯಕ್ತಿ ಜೊತೆ ನಾನೆಂದೂ ನಟಿಸಲಾರೆ. ನನ್ನ ಇಡೀ ಜೀವನದಲ್ಲಿ ಮುಂದೆಂದೂ ಇಂಥವರ ಜೊತೆ ತೆರೆ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತೇನೆ. ಇಂಥ ಜನರು ಇಡೀ ಮನುಷ್ಯಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ’ ಎಂದು ತ್ರಿಷಾ ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.