
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ‘ಡ್ಯಾಡಿ ಕೂಲ್’ ಹಾಡು ಬಿಡುಗಡೆಯಾಗಿದೆ. ನವೆಂಬರ್ 27ರಂದು ಶಾರುಖ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಹಾಡನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಕರೀನಾ ಕಪೂರ್ ಖಾನ್ ಜೊತೆ ಶಾರುಖ್ ಹೆಜ್ಜೆ ಹಾಕಿದ್ದಾರೆ. ಈ ಜೋಡಿಯ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಈ ಹಾಡು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಪಬ್ ರೀತಿಯ ಸೆಟ್‌ನಲ್ಲಿ ಶಾರುಖ್ ಖಾನ್ ಎಂಟ್ರಿಯೊಂದಿಗೆ ಈ ಹಾಡು ಶುರುವಾಗುತ್ತದೆ. ಕರೀನಾ ಕಪೂರ್ ಈ ಹಾಡಿನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ತಮ್ಮ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಹಾಗೂ ಫಿಟ್ ದೇಹದೊಂದಿಗೆ ಮಿಂಚಿದ್ದಾರೆ. ಇಬ್ಬರೂ ಸಖತ್ ಎನರ್ಜಿಯಿಂದ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ‘ಬೇಬೋ ಜೊತೆ ಮತ್ತೆ ಬಂದಿದ್ದೇನೆ. ಹಾಡು ಹಳೆಯ ಶೈಲಿಯಲ್ಲಿದ್ದರೂ ಈಗಲೂ ಕೂಲ್ ಆಗಿದೆ’ ಎಂದು ಶಾರುಖ್ ಬರೆದುಕೊಂಡಿದ್ದಾರೆ.
ಹಾಡು ರಿಲೀಸ್ ಆದ ತಕ್ಷಣ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಶಾರುಖ್ ಮತ್ತು ಕರೀನಾ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಹಳೆಯ ‘ಛಮ್ಮಕ್ ಛಲ್ಲೋ’ ಹಾಡನ್ನು ನೆನಪಿಸಿಕೊಂಡಿದ್ದಾರೆ. ‘ಛಮ್ಮಕ್ ಛಲ್ಲೋ ಸಾಲಲಿಲ್ಲ ಎಂದು ಇಬ್ಬರೂ ಮತ್ತೆ ಒಂದಾಗಿದ್ದಾರೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘61ನೇ ವಯಸ್ಸಿನಲ್ಲೂ ಶಾರುಖ್ ಬಾಸ್ ರೀತಿ ಡ್ಯಾನ್ಸ್ ಫ್ಲೋರ್ ಆಳುತ್ತಿದ್ದಾರೆ’ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವೆಂಬರ್ 2ರಂದು ಶಾರುಖ್ ಹುಟ್ಟುಹಬ್ಬದ ದಿನ ಕರೀನಾ ಕಪೂರ್ ಈ ಸಿನಿಮಾದ ಬಗ್ಗೆ ಸುಳಿವು ನೀಡಿದ್ದರು. ಇಬ್ಬರೂ ಡ್ಯಾನ್ಸ್ ಮಾಡುತ್ತಿರುವ ನೆರಳಿನ ಫೋಟೋ ಹಂಚಿಕೊಂಡು ಶುಭ ಕೋರಿದ್ದರು. ಅಂದಿನಿಂದಲೇ ಈ ಸಿನಿಮಾದಲ್ಲಿ ಕರೀನಾ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ಹಾಡಿನ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಅಧಿಕೃತ ತೆರೆ ಬಿದ್ದಿದೆ.
ಇದನ್ನೂ ಓದಿ: ವೈರಲ್ ವಿಡಿಯೋ ವಿವಾದ: ಇನ್‌ಫ್ಲುಯೆನ್ಸರ್‌ಗೆ ಮಾನನಷ್ಟ ನೋಟಿಸ್ ಕಳುಹಿಸಿಲ್ಲ ಎಂದ ಶಾರುಖ್ ಖಾನ್ ಟೀಮ್
ಸಿದ್ಧಾರ್ಥ್ ಆನಂದ್ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಹಾಗೂ ಜೈದೀಪ್ ಅಹ್ಲಾವತ್ ನಟಿಸಿದ್ದಾರೆ. ಶಾರುಖ್ ಪುತ್ರಿ ಸುಹಾನಾ ಖಾನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕಿಂಗ್’ ಸಿನಿಮಾ ಡಿಸೆಂಬರ್ 24ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.