‘ಸಲಾರ್’ ನನ್ನ ಸಿನಿಮಾ ಅಲ್ಲ, ಆ ಬಗ್ಗೆ ಬೇಸರವೂ ಇಲ್ಲ: ಶ್ರುತಿ ಹಾಸನ್

Salaar: 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಎದುರು ನಾಯಕಿಯಾಗಿ ನಟಿಸಿರುವ ಶ್ರುತಿ ಹಾಸನ್ 'ಸಲಾರ್' ನನ್ನ ಸಿನಿಮಾ ಅಲ್ಲ, ಆ ಬಗ್ಗೆ ಬೇಸರವೂ ಇಲ್ಲ ಎಂದಿದ್ದಾರೆ.

‘ಸಲಾರ್’ ನನ್ನ ಸಿನಿಮಾ ಅಲ್ಲ, ಆ ಬಗ್ಗೆ ಬೇಸರವೂ ಇಲ್ಲ: ಶ್ರುತಿ ಹಾಸನ್
Follow us
ಮಂಜುನಾಥ ಸಿ.
|

Updated on: Nov 04, 2023 | 3:08 PM

ಪ್ರಭಾಸ್ (Prabhas) ನಟನೆಯ ‘ಸಲಾರ್‘ (Salaar) ಸಿನಿಮಾದ ಬಿಡುಗಡೆ ಹಿಂದಕ್ಕೆ ಹೋಗುತ್ತಲೇ ಇದೆ. ‘ಸಲಾರ್’ ಸಿನಿಮಾದ ಒಂದು ಟೀಸರ್ ಹೊರತಾಗಿ ಇನ್ಯಾವುದೇ ಪ್ರಮುಖ ಅಪ್​ಡೇಟ್ ಹೊರಗೆ ಬಂದಿಲ್ಲ. ಇನ್ನು ಐವತ್ತು ದಿನದಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಇನ್ನೂ ಆರಂಭವಾಗಿಲ್ಲ. ಇದರ ನಡುವೆ ಸಿನಿಮಾದ ನಾಯಕಿಯಾಗಿ ನಟಿಸಿರುವ ಶ್ರುತಿ ಹಾಸನ್, ‘ಸಲಾರ್’ ನನ್ನ ಸಿನಿಮಾ ಅಲ್ಲ ಎಂದಿದ್ದಾರೆ.

‘ಸಲಾರ್’ ಪ್ರಭಾಸ್ ಸಿನಿಮಾ ಎಂದು ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಸಿನಿಮಾದಲ್ಲಿ ನಟಸಿರುವ ಇತರೆ ಪ್ರಮುಖ ನಟರಿಗೆ ಅಷ್ಟಾಗಿ ಪ್ರಾಮುಖ್ಯತೆ ನೀಡಲಾಗಿಲ್ಲ. ಸಿನಿಮಾದ ನಾಯಕಿ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದು, ಅವರಿಗೆ ಈ ಬಗ್ಗೆ ಪ್ರಶ್ನೆಯೊಂದು ಎದುರಾಗಿದೆ. ‘ಸಲಾರ್’ ಅನ್ನು ಪ್ರಭಾಸ್ ಸಿನಿಮಾ ಎಂದೇ ಪ್ರೊಜೆಕ್ಟ್ ಮಾಡಲಾಗುತ್ತಿದೆ. ನೀವು ಸಹ ಆ ಸಿನಿಮಾದ ಭಾಗವಾಗಿದ್ದೀರಿ, ‘ಸಲಾರ್’ ಪ್ರಭಾಸ್ ಸಿನಿಮಾ ಎಂದಾಗ ನಿಮಗೆ ಬೇಸರ ಆಗುವುದಿಲ್ಲವೇ?” ಎಂದು ಕೇಳಲಾಗಿದೆ.

ಪ್ರಶ್ನೆಗೆ ಉತ್ತರಿಸಿರುವ ಶ್ರುತಿ ಹಾಸನ್, ”ಸಲಾರ್’ ಖಂಡಿತವಾಗಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ. ಅದು ನನ್ನ ಸಿನಿಮಾ ಅಲ್ಲ, ನಾನು ಅದರ ಭಾಗವಷ್ಟೆ, ಆ ಬಗ್ಗೆ ನನಗೇನೂ ಬೇಸರವಿಲ್ಲ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಆ ಸಿನಿಮಾಕ್ಕಾಗಿ ಪಟ್ಟ ಕಷ್ಟ, ಶ್ರಮ ಎಲ್ಲವನ್ನೂ ಲೆಕ್ಕಾಚಾರ ಹಾಕಿದರೆ ಖಂಡಿತ ಅದು ಅವರ ಸಿನಿಮಾವೇ. ಅಲ್ಲದೆ ಮೊದಲಿನಿಂದಲೂ ಸಿನಿಮಾಗಳನ್ನು ನಾಯಕರ ಹೆಸರಿನೊಂದಿಗೆ ಸೇರಿಯೇ ರಿಪೋರ್ಟ್ ಮಾಡಲಾಗುತ್ತಿದೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ” ಎಂದಿದ್ದಾರೆ ಶ್ರುತಿ ಹಾಸನ್.

ಇದನ್ನೂ ಓದಿ: ಡಂಕಿ, ಸಲಾರ್ ರೇಸ್​ಗೆ ಮತ್ತೊಂದು ದೊಡ್ಡ ಬಜೆಟ್ ಸಿನಿಮಾ ಎಂಟ್ರಿ, ಗೆಲ್ಲುವುದ್ಯಾರು?

”ಅಲ್ಲದೆ, ‘ಸಲಾರ್’ ಸಿನಿಮಾ ಪ್ರಭಾಸ್ ಪಾತ್ರದ ಸುತ್ತ ಹೆಣೆಯಲಾದ ಸಿನಿಮಾ. ಹಾಗಿದ್ದಾಗ ಅದು ಪ್ರಭಾಸ್ ಅವರ ಸಿನಿಮಾ ಎಂದು ಕರೆಯುವುದು ತಪ್ಪು ಎನಿಸುವುದಿಲ್ಲ. ಅಲ್ಲದೆ ಪ್ರಭಾಸ್ ತಮ್ಮ ವೃತ್ತಿಯನ್ನು ಕಟ್ಟಿಕೊಂಡಿರುವ ರೀತಿ ಅದ್ಭುತವಾದುದು, ಪ್ರಶಾಂತ್ ನೀಲ್ ಸಹ ಅದ್ಭುತವಾಗಿ ತಮ್ಮ ವೃತ್ತಿ ಕಟ್ಟಿಕೊಂಡಿದ್ದಾರೆ. ಹೀಗಿದ್ದಾಗ ‘ಸಲಾರ್’ ಪ್ರಭಾಸ್ ಸಿನಿಮಾ ಎಂದು ಹೇಳಿದಾಗ ಒಪ್ಪಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

‘ಸಲಾರ್’ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಶ್ರುತಿ ಹಾಸನ್ ಸುಮಾರು ಒಂದು ವರ್ಷದ ಹಿಂದೆಯೇ ‘ಸಲಾರ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಹಾಗಿದ್ದರು ಈಗಲೂ ಸಹ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ಡಿಸೆಂಬರ್ 22 ಕ್ಕೆ ‘ಸಲಾರ್’ ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲಮ್ಸ್ ಘೋಷಣೆ ಮಾಡಿದ್ದು, ಸಿನಿಮಾದ ಪ್ರಚಾರದಲ್ಲಿ ಶ್ರುತಿ ಹಾಸನ್ ಭಾಗಿಯಾಗುವ ಸಾಧ್ಯತೆ ಇದೆ.

‘ಸಲಾರ್’ ಅನ್ನು ಪ್ರಭಾಸ್ ಸಿನಿಮಾ ಎಂದು ಕರೆಯುತ್ತಿರುವುದಕ್ಕೆ ಬೇಸರವಿಲ್ಲ ಎಂದು ಶ್ರುತಿ ಹಾಸನ್ ಹೇಳಿದ್ದಾರೆ. ಆದರೆ ಪ್ರಭಾಸ್​ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಸಿನಿಮಾದ ಘೋಷಣೆ ಆದಾಗ ಪ್ರಭಾಸ್​ 24 ಎಂದು ಅಭಿಮಾನಿಗಳು ಕರೆದಿದ್ದರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೀಪಿಕಾ ಪಡುಕೋಣೆ, ಅದು ಪ್ರಭಾಸ್ ಒಬ್ಬರ ಸಿನಿಮಾ ಅಲ್ಲ ಎಂದಿದ್ದರು. ಬಳಿಕ ಸಿನಿಮಾಕ್ಕೆ ಬೇರೆ ತಾತ್ಕಾಲಿಕ ಹೆಸರು ಇಡಲಾಯ್ತು, ಬಳಿಕ ‘ಕಲ್ಕಿ 2898 ಎಡಿ’ ಎಂದು ಹೆಸರಿಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ