ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (Krishnakumar Kunnath) ಅವರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ. ಎಸ್ಎಸ್ಕೆಎಮ್ ಆಸ್ಪತ್ರೆಯು ಕೋಲ್ಕತ್ತಾ ಪೊಲೀಸರಿಗೆ ನೀಡಿದ ಪ್ರಾಥಮಿಕ ವರದಿಯಲ್ಲಿ, ಗಾಯಕ ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯಲ್ಪಡುವ ‘ಮಯೋಕಾರ್ಡಿಯಲ್ ಇನ್ಫಾರ್ಕ್ಷನ್’ನಿಂದ (myocardial infarction) ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ಸಾವಿಗೆ ಅಸಹಜ ಕಾರಣಗಳನ್ನು ನೀಡಲಾಗಿಲ್ಲ. ಈ ಹಿಂದೆ ಕೋಲ್ಕತ್ತಾ ಪೊಲೀಸರು ಗಾಯಕನ ಸಾವಿನ ಬಗ್ಗೆ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ ಅವರ ಮುಖ ಮತ್ತು ತಲೆಗೆ ಗಾಯಗಳಾಗಿತ್ತು. ಆದರೆ ಪ್ರಾಥಮಿಕ ವರದಿಯಲ್ಲಿ ಹೃದಯಾಘಾತದಿಂದ ಕೆಕೆ ನಿಧನರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಮೇ 31 ರ ಮಂಗಳವಾರದಂದು ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೆಕೆ, ಹಿಂದಿರುಗಿದ ನಂತರ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಗಾಯಕ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಕೆಕೆ ಅವರ ಅಂತಿಮ ಮರಣೋತ್ತರ ಪರೀಕ್ಷೆ ವರದಿಯನ್ನು 72 ಗಂಟೆಗಳಲ್ಲಿ ಪ್ರಕಟಿಸಲಾಗುವುದು.
ಕೆಕೆ ಭಾಗವಹಿಸಿದ್ದ ಸಂಗೀತ ಕಚೇರಿಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಗಾಯಕ ಹಲವು ಬಾರಿ ಈ ಬಗ್ಗೆ ಆಯೋಜಕರಿಗೆ ತಿಳಿಸಿದ್ದರು ಎಂದು ವರದಿಯಾಗಿತ್ತು. ಕೃಷ್ಣಕುಮಾರ್ ಕುನ್ನತ್ ಅವರ ನಿಧನದಿಂದ ಭಾರತೀಯ ಚಿತ್ರರಂಗ, ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ಕೆಕೆ ಅವರ ಅಭಿಮಾನಿ ಬಳಗ ಕಂಬನಿ ಮಿಡಿದಿತ್ತು.
ಇಂದು ಮುಂಬೈನಲ್ಲಿ ಕೆಕೆ ಅಂತ್ಯಕ್ರಿಯೆ:
ಕೆಕೆ ಅವರ ಅಂತ್ಯಕ್ರಿಯೆಯನ್ನು ಇಂದು (ಜೂ.2) ಮುಂಬೈನಲ್ಲಿ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ. ಬುಧವಾರದಂದು ಕೋಲ್ಕತ್ತಾದಿಂದ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಯ ವೇಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ. ಕೆಕೆ ಅವರು ಪತ್ನಿ ಜ್ಯೋತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಹಲವು ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ಕೆಕೆ: 1990ರ ದಶಕದ ಉತ್ತರಾರ್ಧದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ‘ಪಾಲ್’ ಮತ್ತು ‘ಯಾರೋನ್’ ನಂತಹ ಹಾಡುಗಳಿಗೆ ಕೆಕೆ ಧ್ವನಿ ನೀಡಿದ್ದರು. ಅಲ್ಲಿಂದ ಕೆಕೆ ಧ್ವನಿ ಅಜರಾಮರವಾಯಿತು. ಎಲ್ಲಾ ವಯೋಮನದವರಿಗೆ ಕೆಕೆ ಅಚ್ಚುಮೆಚ್ಚಿನ ಗಾಯಕರಾಗಿದ್ದರು. 2000ರ ದಶಕದ ಆರಂಭದಿಂದ ಅವರು ಹಿನ್ನೆಲೆ ಗಾಯನದ ವೃತ್ತಿಜೀವನದಲ್ಲಿ ಮಿಂಚಿದರು. ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಮೊದಲಾದ ಭಾಷೆಗಳಲ್ಲಿ ಗಾಯನ ಮಾಡಿದ್ದರು. ಒಂಟಿಯಾಗಿರುವವರ ಮನದಲ್ಲೂ ಪ್ರೀತಿಯ ಭಾವ ತುಂಬುವಂತೆ ಕೆಕೆ ಭಾವಪೂರ್ಣವಾಗಿ ಹಾಡುತ್ತಿದ್ದರು ಎಂದು ಅಭಿಮಾನಿಗಳು ಗಾಯಕನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 am, Thu, 2 June 22