ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ನಟಿ ಸ್ನೇಹಾ ಉಲ್ಲಾಳ್: ಕಾರಣ?
Aishwarya Rai: ಮಂಗಳೂರು ಮೂಲದ ಬಾಲಿವುಡ್ ನಟಿ ಸ್ನೇಹಾ ಉಲ್ಲಾಳ್, ಸಲ್ಮಾನ್ ಖಾನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ಸ್ನೇಹಾ ಉಲ್ಲಾಳ್, ನೋಡಲು ಐಶ್ವರ್ಯಾ ರೈ ರೀತಿ ಕಾಣುತ್ತಿದ್ದರು. ಆದರೆ ಒಮ್ಮೆ ಐಶ್ವರ್ಯಾ ಅವರನ್ನು ಭೇಟಿಯಾದಾಗ ತಾವು ಅವರ ಕ್ಷಮೆ ಕೇಳಿದ್ದಾಗಿ ಸ್ನೇಹಾ ಹೇಳಿಕೊಂಡಿದ್ದಾರೆ.

ಮಂಗಳೂರು ಮೂಲದ ನಟಿ ಸ್ನೇಹಾ ಉಲ್ಲಾಳ್ (Sneha Ullal), ಬಾಲಿವುಡ್ನ (Bollywood) ಜನಪ್ರಿಯ ನಟಿಯರಲ್ಲಿ ಒಬ್ಬರು. ಒಮನ್ನಲ್ಲಿ ಹುಟ್ಟಿದ್ದರಾದರೂ ಅವರದ್ದು ಮಂಗಳೂರು ಮೂಲ. ಸಲ್ಮಾನ್ ಖಾನ್ ನಟನೆಯ ‘ಲಕ್ಕಿ’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅದೂ ಅವರು ಚಿತ್ರರಂಗಕ್ಕೆ ಬರಲು ಐಶ್ವರ್ಯಾ ರೈ ಅವರೊಟ್ಟಿಗಿನ ಹೋಲಿಕೆಯೇ ಕಾರಣ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳು, ಸಲ್ಮಾನ್ ಖಾನ್ ಅವರೊಂದಿಗಿನ ಒಡನಾಟ ಮತ್ತು ಐಶ್ವರ್ಯ ರೈ ಅವರೊಂದಿಗಿನ ಭೇಟಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅವರು ಐಶ್ವರ್ಯಾ ರೈ ಅವರ ಬಳಿ ಕ್ಷಮೆ ಕೇಳಿರುವ ಬಗ್ಗೆ ಹೇಳಿಕೊಂಡಿದ್ದಾರೆ.
2005ರಲ್ಲಿ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸ್ನೇಹಾ, ಅಂದು ವಿಶ್ವ ಸುಂದರಿ ಐಶ್ವರ್ಯ ರೈ ಅವರಂತೆಯೇ ಕಾಣುತ್ತಿದ್ದರು ಎಂಬ ಕಾರಣಕ್ಕೆ ಭಾರೀ ಸುದ್ದಿಯಾಗಿದ್ದರು. ಮಾಧ್ಯಮಗಳು ತನ್ನನ್ನು ಐಶ್ವರ್ಯ ರೈ ಅವರ ತದ್ರೂಪು ಎಂದು ಕರೆಯುತ್ತಿದ್ದ ಕಾಲದಲ್ಲಿ ಸ್ನೇಹಾ ಅವರು ಐಶ್ವರ್ಯರನ್ನು ಭೇಟಿಯಾಗಿದ್ದರಂತೆ. ಸಂದರ್ಶನದಲ್ಲಿ ಆ ಸಂದರ್ಭವನ್ನು ನೆನಪಿಸಿಕೊಂಡಿರುವ ಸ್ನೇಹಾ ಉಲ್ಲಾಳ್ , ‘ನಾನು ಐಶ್ವರ್ಯರನ್ನು ಭೇಟಿಯಾದಾಗ ಅವರಿಗೆ ಕ್ಷಮೆ ಕೇಳಿದೆ. ಮಾಧ್ಯಮಗಳಲ್ಲಿ ಆಗುತ್ತಿದ್ದ ಹೋಲಿಕೆಗಳಿಂದಾಗಿ ಅವರು ನನ್ನ ಮೇಲೆ ಸಿಟ್ಟಾಗಿರಬಹುದು ಎಂಬ ಭಯ ನನಗಿತ್ತು. ಪ್ಲೀಸ್ ನನ್ನನ್ನು ದ್ವೇಷಿಸಬೇಡಿ ಎಂದು ಅವರಲ್ಲಿ ವಿನಂತಿಸಿದೆ’ ಎಂದು ಹೇಳಿದ್ದಾರೆ. ಆದರೆ ಐಶ್ವರ್ಯ ರೈ ಅವರು ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಂಡರು, ‘ಬಾಲಿವುಡ್ ಕುಟುಂಬಕ್ಕೆ ನಿನಗೆ ಸ್ವಾಗತ’ ಎಂದು ಐಶ್ವರ್ಯಾ ಹೇಳಿದರು ಎಂದು ಸ್ನೇಹಾ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್
ಸಲ್ಮಾನ್ ಖಾನ್ ಅವರ ಬಗ್ಗೆ ಮಾತನಾಡಿದ ಸ್ನೇಹಾ, ಚಿತ್ರೀಕರಣದ ಸಮಯದಲ್ಲಿ ಅವರು ತಮಗೆ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ‘ಸಲ್ಮಾನ್, ನನ್ನ ಬಗ್ಗೆ ಎಂದಿಗೂ ಅಸಹನೆ ತೋರಲಿಲ್ಲ. ನಾನು ಆಗ ತಾನೇ ಕಾಲೇಜು ಮುಗಿಸಿ ಬಂದ ಹೊಸಬಳಾಗಿದ್ದೆ. ಸಲ್ಮಾನ್ ಅತ್ಯಂತ ತಾಳ್ಮೆಯಿಂದ ನನಗೆ ಎಲ್ಲವನ್ನೂ ಹೇಳಿಕೊಟ್ಟರು. ನನ್ನ ವಿರುದ್ಧ ಸಿಟ್ಟು ಪ್ರದರ್ಶಿಸಲಿಲ್ಲ, ಅಹಂ ತೋರಿಸಲಿಲ್ಲ’ ಎಂದು ಸ್ನೇಹಾ ತಿಳಿಸಿದ್ದಾರೆ.
ತಮಗೆ ನಟಿಯಾಗುವುದು ಇಷ್ಟವೇ ಇರಲಿಲ್ಲ ಎಂದಿರುವ ಸ್ನೇಹಾ, ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರ ಗೆಳೆಯರು ಸ್ನೇಹಾರನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ನೋಡಿದರಂತೆ. ಅದೇ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ಮುರಿದುಬಿದ್ದಿತ್ತು. ಸ್ನೇಹಾ ನೋಡಲು ಐಶ್ವರ್ಯಾ ರೈ ರೀತಿ ಇದ್ದ ಕಾರಣದಿಂದಾಗಿಯೇ ಅವರನ್ನು ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಆ ಬಗ್ಗೆತೂ ಪ್ರತಿಕ್ರಿಯಿಸಿದ ಸ್ನೇಹಾ, ‘ಅದೊಂದು ಪ್ರಚಾರ ತಂತ್ರವಾಗಿತ್ತು, ನಾನು ತುಂಬಾ ಚಿಕ್ಕವಳಾಗಿದ್ದರಿಂದ ಆ ಹೋಲಿಕೆಗಳು ನನಗೆ ಎಂದೂ ಬೇಸರ ತರಲಿಲ್ಲ’ ಎಂದಿದ್ದಾರೆ.
ಸಲ್ಮಾನ್ ಖಾನ್ ಜೊತೆಗೆ ಲಾಂಚ್ ಆದರೂ ಸಹ ಸ್ನೇಹಾ ಉಲ್ಲಾಲ್ ಹೆಚ್ಚು ಯಶಸ್ವಿ ಆಗಿದ್ದು ದಕ್ಷಿಣದ ಸಿನಿಮಾಗಳಲ್ಲಿ ಅದರಲ್ಲೂ ತೆಲುಗಿನಲ್ಲಿ ‘ಉಲ್ಲಾಸಂಗಾ, ಉತ್ಸಾಹಂಗ’ ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ದೇವಿ’ ಸಿನಿಮಾನಲ್ಲಿಯೂ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




