Sonu Nigam: ‘ಹಿಂದಿ ರಾಷ್ಟ್ರಭಾಷೆ ಎಂದು ಎಲ್ಲೂ ಬರೆದಿಲ್ಲ’; ಅಜಯ್ ದೇವಗನ್​ಗೆ ಖಡಕ್ ಪ್ರತಿಕ್ರಿಯೆ ನೀಡಿದ ಸೋನು ನಿಗಮ್

| Updated By: shivaprasad.hs

Updated on: May 03, 2022 | 3:23 PM

Kichcha Sudeep vs Ajay Devgan | National Language: ಹಿಂದಿ ರಾಷ್ಟ್ರಭಾಷೆ ಎಂದು ಎಲ್ಲೂ ಬರೆದಿಲ್ಲ ಎಂದಿರುವ ಸೋನು ನಿಗಮ್, ಜನರು ಅವರವರಿಗೆ ಆಸಕ್ತಿ ಇರುವ ಭಾಷೆಯಲ್ಲಿ ಮಾತನಾಡುವ ಹಕ್ಕನ್ನು ಹೊಂದಿದ್ದಾರೆ. ಅದನ್ನು ಹೇರಲಾಗದು ಎಂದು ನುಡಿದಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ಅಜಯ್ ದೇವಗನ್ ‘ಹಿಂದಿ ನಮ್ಮ ಮಾತೃಭಾಷೆ. ಹಾಗೆಯೇ ರಾಷ್ಟ್ರಭಾಷೆಯೂ ಹೌದು’’ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು.

Sonu Nigam: ‘ಹಿಂದಿ ರಾಷ್ಟ್ರಭಾಷೆ ಎಂದು ಎಲ್ಲೂ ಬರೆದಿಲ್ಲ’; ಅಜಯ್ ದೇವಗನ್​ಗೆ ಖಡಕ್ ಪ್ರತಿಕ್ರಿಯೆ ನೀಡಿದ ಸೋನು ನಿಗಮ್
ಅಜಯ್ ದೇವಗನ್, ಸೋನು ನಿಗಮ್, ಕಿಚ್ಚ ಸುದೀಪ್
Follow us on

ಅಜಯ್ ದೇವಗನ್ (Ajay Devgan) ಹಾಗೂ ಕಿಚ್ಚ ಸುದೀಪ್ (Kichcha Sudeep) ನಡುವೆ ನಡೆದಿದ್ದ ರಾಷ್ಟ್ರಭಾಷೆ (National Language) ಕುರಿತು ಇನ್ನೂ ಚರ್ಚೆಯಾಗುತ್ತಿದೆ. ತಾರೆಯರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಾಡಿ ಜನರ ಮನಗೆದ್ದಿರುವ ಹಿನ್ನೆಲೆ ಗಾಯಕ ಸೋನು ನಿಗಮ್ ಈಗ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಸೋನು ನಿಗಮ್ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಹಿಂದಿ ರಾಷ್ಟ್ರಭಾಷೆ ಎಂದು ಎಲ್ಲೂ ಬರೆದಿಲ್ಲ ಎಂದಿರುವ ಸೋನು ನಿಗಮ್, ಜನರು ಅವರವರಿಗೆ ಆಸಕ್ತಿ ಇರುವ ಭಾಷೆಯಲ್ಲಿ ಮಾತನಾಡುವ ಹಕ್ಕನ್ನು ಹೊಂದಿದ್ದಾರೆ. ಅದನ್ನು ಹೇರಲಾಗದು ಎಂದು ನುಡಿದಿದ್ದಾರೆ. ‘‘ನನಗೆ ತಿಳಿದ ಮಟ್ಟಿಗೆ ಹಾಗೂ ತಜ್ಞರಿಂದ ನಾನು ಕೇಳಿ ತಿಳಿದ ಪ್ರಕಾರ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಉಲ್ಲೇಖಿಸಲಾಗಿಲ್ಲ. ಆದರೆ ಭಾರತದಲ್ಲಿ ಹೆಚ್ಚಿನ ಜನರು ಹಿಂದಿಯನ್ನು ಮಾತನಾಡುತ್ತಾರೆ ಎನ್ನುವುದನ್ನು ಒಪ್ಪಬೇಕು. ಆದರೆ ಒಂದು ಭಾಷೆಯನ್ನು ಮತ್ತೋರ್ವರ ಮೇಲೆ ಹೇರಬಾರದು. ಎಲ್ಲರೂ ಅವರವರ ಇಚ್ಛೆಗೆ ಅನುಗುಣದ ಭಾಷೆಯಲ್ಲಿ ಮಾತನಾಡಲಿ’’ ಎಂದು ಸೋನು ನಿಗಮ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸೋನು ನಿಗಮ್ ತಮ್ಮ ಮಾತಿನಲ್ಲಿ ಹೇಳಿದ್ದೇನು? ಇಲ್ಲಿದೆ ಪೂರ್ಣ ಸಾರಾಂಶ:

ಮೊದಲಿಗೆ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ತಿಳಿಸಿದ ಸೋನು ನಿಗಮ್, ಸಂಸ್ಕೃತ ಹಾಗೂ ತಮಿಳಿನ ನಡುವೆ ವಿಶ್ವದ ಅತ್ಯಂತ ಹಳೆಯ ಭಾಷೆ ಯಾವುದು ಎನ್ನುವ ಚರ್ಚೆಗಳಿವೆ. ತಮಿಳು ಹಳೆಯ ಭಾಷೆ ಎಂಬ ವಾದಗಳೂ ಇದೆ ಎಂದಿದ್ದಾರೆ ಸೋನು ನಿಗಮ್. ನಂತರ ಸೋನು ನಿಗಮ್ ಭಾಷೆಯ ಆಧಾರದಲ್ಲಿ ಜನರನ್ನು ಪ್ರತ್ಯೇಕಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

‘‘ದೇಶವು ಈಗಾಗಲೇ ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಭಾಷೆಯನ್ನು ಮತ್ತೊಬ್ಬರ ಮೇಲೆ ಹೇರುವ ಹೊಸ ಸಮಸ್ಯೆ ನಮಗೆ ಬೇಕೆ?’’ ಎಂದು ಪ್ರಶ್ನಿಸಿರುವ ಸೋನು ನಿಗಮ್, ‘‘ನೀನು ತಮಿಳಿಗ. ಆದರೆ ನೀನು ಹಿಂದಿ ಮಾತನಾಡಬೇಕು ಎನ್ನಲಾಗುತ್ತದೆಯೇ? ಅವರು ಯಾಕಾದರೂ ಮಾತನಾಡುತ್ತಾರೆ? ಅವರವರ ಆಸಕ್ತಿಯ ಭಾಷೆಯನ್ನು ಮಾತನಾಡುವ ಹಕ್ಕು ಜನರಿಗೇ ಇರಬೇಕು. ಮತ್ತೋರ್ವರು ನಿರ್ಧರಿಸಬಾರದು’’ ಎಂದಿದ್ದಾರೆ.

‘ಪಂಜಾಬಿ ಮಾತನಾಡುವವರು ಅದರಲ್ಲಿ ಮಾತನಾಡಲಿ. ತಮಿಳಿನಲ್ಲಿ ಮಾತನಾಡುವವರು ಅದರಲ್ಲಿ ಮಾತನಾಡಲಿ. ಇಂಗ್ಲೀಷ್​ನಲ್ಲಿ ಮಾತನಾಡಬೇಕು ಎನ್ನುವವರು ಅದರಲ್ಲೇ ಮಾತನಾಡಲಿ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂಗ್ಲೀಷ್ ಭಾಷೆ ಬಳಸಲಾಗುತ್ತದೆ. ವಿಮಾನ ಸೇವೆಯಲ್ಲೂ ಅದನ್ನೇ ಬಳಸಲಾಗುತ್ತದೆ’’ ಎಂದು 32ಕ್ಕೂ ಹೆಚ್ಚು ಭಾಷೆಗಳಲ್ಲಿ ಗಾಯನ ಮಾಡಿ, ಎಲ್ಲೆಡೆಯಿಂದ ಅಭಿಮಾನಿ ಬಳಗ ಸಂಪಾದಿಸಿರುವ ಸೋನು ನಿಗಮ್ ಹೇಳಿದ್ದಾರೆ.

‘ಬೀಸ್ಟ್ ಸ್ಟುಡಿಯೋಸ್’ನ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಸುಶಾಂತ್ ಮೆಹ್ತಾರೊಂದಿಗೆ ಸೋನು ನಿಗಮ್ ಮಾತುಕತೆ ಇಲ್ಲಿದೆ:

ಅಜಯ್ ದೇವಗನ್- ಕಿಚ್ಚ ಸುದೀಪ್ ಟ್ವೀಟ್ ಚರ್ಚೆಯ ಹಿನ್ನೆಲೆಯೇನು?

ಸುದೀಪ್ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹಿಂದಿ ಈಗ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ ಎಂದಿದ್ದರು. ಪ್ಯಾನ್ ಇಂಡಿಯಾ ಚಿತ್ರಗಳ ಹಿನ್ನೆಲೆಯಲ್ಲಿ ಮಾತನಾಡಿದ್ದ ನಟ, ದಕ್ಷಿಣದ ಚಿತ್ರಗಳಿಗೆ ಮಾತ್ರ ಪ್ಯಾನ್ ಇಂಡಿಯಾ ಎನ್ನುವ ಲೇಬಲ್ ಏಕೆ? ಹಿಂದಿ ಕೂಡ ಒಂದು ಭಾಷೆ. ಅವರೂ ದಕ್ಷಿಣದ ಚಿತ್ರಗಳಿಗೆ ಡಬ್ ಮಾಡಿಯೇ ಬಿಡುಗಡೆ ಮಾಡುತ್ತಾರೆ. ಆದರೆ ಆ ಚಿತ್ರಗಳನ್ನು ಏಕೆ ಪ್ಯಾನ್ ಇಂಡಿಯಾ ಎಂದು ಗುರುತಿಸುವುದಿಲ್ಲ? ನಮ್ಮದ್ದು ಮಾತ್ರ ಏಕೆ ಹೀಗೆ?’’ ಎಂದು ಪ್ರಶ್ನಿಸಿದ್ದರು. ಈ ವೇಳೆ ಸುದೀಪ್ ನುಡಿದಿದ್ದ ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, ‘ಹಿಂದಿ ರಾಷ್ಟ್ರಭಾಷೆಯಲ್ಲದಿದ್ದರೆ ಏಕೆ ಡಬ್ ಮಾಡಿ ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ? ಹಿಂದಿ ಎಂದೆಂದಗೂ ಮಾತೃಭಾಷೆ ಹಾಗೂ ರಾಷ್ಟ್ರ ಭಾಷೆಯೇ ಆಗಿರುತ್ತದೆ’ ಎಂದಿದ್ದರು.

ಹಿಂದಿ ರಾಷ್ಟ್ರಭಾಷೆ ಎಂದಿದ್ದ ಅಜಯ್ ದೇವಗನ್​ಗೆ ಟಾಂಗ್ ನೀಡಿದ್ದ ಸುದೀಪ್, ‘‘ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್‌ ನನಗೆ ಅರ್ಥವಾಯಿತು. ನನ್ನ ಪ್ರತಿಕ್ರಿಯೆಯನ್ನು ಕನ್ನಡ ಭಾಷೆಯಲ್ಲೇ ಟೈಪ್ ಮಾಡಿದರೆ, ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’’ ಎಂದು ಬರೆದಿದ್ದರು. ನಂತರ ಅಜಯ್ ದೇವಗನ್ ಪ್ರತಿಕ್ರಿಯಿಸಿ, ಅನುವಾದ ಸಮಸ್ಯೆಯಿಂದ ಗೊಂದಲ ಉಂಟಾಗಿದೆ. ನಾನು ಇಡೀ ಚಿತ್ರರಂಗವನ್ನು ಒಂದು ಎಂದು ಭಾವಿಸುತ್ತೇನೆ. ಬೇರೆ ಭಾಷೆಗಳನ್ನು ಗೌರವಿಸುತ್ತೇವೆ, ಅಂತೆಯೇ ನಮ್ಮ ಭಾಷೆಯನ್ನೂ ಗೌರವಿಸಲು ಬಯಸುತ್ತೇವೆ. ಈ ನಡುವೆ ಅನುವಾದ ಮಾಡುವಾಗ ಅರ್ಥ ತಪ್ಪಾಗಿರಬಹುದು’’ ಎಂದು ಬರೆದಿದ್ದರು. ಈ ಚರ್ಚೆ ರಾಷ್ಟ್ರಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.

ಇದನ್ನೂ ಓದಿ: Ajay Devgan: ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ‘ಹಿಂದಿಯೇ ನಮ್ಮ ರಾಷ್ಟ್ರಭಾಷೆ’ ಎಂದ ಅಜಯ್ ದೇವಗನ್; ನೆಟ್ಟಿಗರಿಂದ ಕ್ಲಾಸ್

Kichcha Sudeep: ‘ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’; ಹಿಂದಿ ರಾಷ್ಟ್ರಭಾಷೆ ಎಂದ ಅಜಯ್ ದೇವಗನ್​ಗೆ ಕಿಚ್ಚ ಸುದೀಪ್ ಪ್ರತ್ಯುತ್ತರ

Published On - 3:20 pm, Tue, 3 May 22