‘ಮೋನಿಕಾ’ ಹಾಡು: ಪೂಜಾ ಹೆಗ್ಡೆ ಸೈಡ್ಲೈನ್ ಮಿಂಚಿದ್ದು ಪೋಷಕ ನಟ
Soubin Shahir: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ನಟಿ ಪೂಜಾ ಹೆಗ್ಡೆ ‘ಮೋನಿಕಾ’ ಹೆಸರಿನ ವಿಶೇಷ ಹಾಡಿನಲ್ಲಿ ನಟಿಸಿದ್ದಾರೆ. ಇದೇ ಹಾಡಿನಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ಮತ್ತು ಬಲು ಪ್ರತಿಭಾವಂತ ನಟ ಸೌಬಿನ್ ಸಹ ಇದ್ದಾರೆ. ಹಾಡು ಬಿಡುಗಡೆ ಆಗಿದ್ದು, ಸೌಬಿನ್, ತನ್ನ ನೃತ್ಯ ಪ್ರತಿಭೆಯಿಂದ ಪೂಜಾ ಹೆಗ್ಡೆಯನ್ನೇ ಸೈಡ್ಲೈನ್ ಮಾಡಿಬಿಟ್ಟಿದ್ದಾರೆ.

ಸಿನಿಮಾ ನಾಯಕಿಯರು ಐಟಂ ಹಾಡುಗಳಲ್ಲಿ ಅಥವಾ ವಿಶೇಷ ಹಾಡುಗಳಲ್ಲಿ ನಟಿಸುವ ಟ್ರೆಂಡ್ ಶುರುವಾಗಿ ವರ್ಷಗಳಾಗಿವೆ. ತಮನ್ನಾ ಭಾಟಿಯಾ, ಕಾಜಲ್ ಅಗರ್ವಾಲ್, ಸಮಂತಾ, ಶ್ರೀಲೀಲಾ (Sreeleela) ಇನ್ನೂ ಕೆಲವಾರು ನಟಿಯರು ಕೆಲ ವರ್ಷಗಳಿಂದಲೂ ವಿಶೇಷ ಹಾಡುಗಳಲ್ಲಿ ನರ್ತಿಸಿದ್ದಾರೆ. ಇನ್ನೂ ಹಲವು ನಟಿಯರು ವಿಶೇಷ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. ನಟಿ ಪೂಜಾ ಹೆಗ್ಡೆ ಸಹ ಕೆಲ ವರ್ಷಗಳಿಂದಲೂ ಆಗೊಮ್ಮೆ-ಈಗೊಮ್ಮೆ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ‘ರಂಗಸ್ಥಳಂ’ ಸಿನಿಮಾದ ‘ಜಿಗೇಲು ರಾಣಿ’, ‘ಎಫ್3’ ಸಿನಿಮಾದ ‘ಲೈಫ್ ಅಂಟೆ ಇಟ್ಟಾ ಉಂಡಾಲ’ ಹಾಡುಗಳಲ್ಲಿ ನಟಿಸಿದ್ದರು. ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮದ ವಿಶೇಷ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಹಾಡಿನಲ್ಲಿ ಮಿಂಚಿರುವುದು ಪೂಜಾ ಹೆಗ್ಡೆ ಅಲ್ಲ ಬದಲಿಗೆ ಮಲಯಾಳಂ ನಟ.
ಪೂಜಾ ಹೆಗ್ಡೆ ‘ಮೋನಿಕಾ’ ಹೆಸರಿನ ವಿಶೇಷ ಹಾಡಿಗೆ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಸಾಕಷ್ಟು ಮಂದಿ ಸಹ ನೃತ್ಯಗಾರರು ಇರುವ ಹಾಡು ಇದಾಗಿದ್ದು, ಹಾಡಿನಲ್ಲಿ ಮಲಯಾಳಂ ನಟ ಸೌಬಿನ್ ಸಾಹಿರ್ ಸಹ ಇದ್ದಾರೆ. ಪೂಜಾ ಹೆಗ್ಡೆ ಮುಂದೆ ಡ್ಯಾನ್ಸ್ ಮಾಡಿದರೆ ಸೌಬಿನ್ ಇತರೆ ಸಹನೃತ್ಯಗಾರರ ಜೊತೆಗೆ ಹಿಂದೆ ಡ್ಯಾನ್ಸ್ ಮಾಡಿದ್ದಾರೆ. ಪೂಜಾ ಹೆಗ್ಡೆ ಕೆಂಪು ಬಣ್ಣದ ಆಕರ್ಷಕ ಗ್ಲಾಮರಸ್ ಉಡುಗೆಯನ್ನು ಹಾಡಿನಲ್ಲಿ ಧರಿಸಿದ್ದಾರೆ. ಸೌಬಿನ್, ಸಾಮಾನ್ಯವಾದ ಶರ್ಟ್ ಪ್ಯಾಂಟ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಹಾಡಿನಲ್ಲಿ ಸಖತ್ ಆಗಿ ಮಿಂಚಿರುವುದು ಮಾತ್ರ ಸೌಬಿನ್ ಸಾಹಿರ್.
ಮಲಯಾಳಂ ಚಿತ್ರರಂಗದ ಖ್ಯಾತ ನಟ, ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ಅತ್ಯುತ್ತಮ ನಟನಾ ಪ್ರದರ್ಶನ ನೀಡಿ ಭಾರತದಾದ್ಯಂತ ಸಿನಿಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಸೌಬಿನ್, ಇದೀಗ ತಮ್ಮ ನೃತ್ಯ ಕಲೆಯಿಂದ ಮತ್ತೊಮ್ಮೆ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ಸೌಬಿನ್, ‘ಮೋನಿಕಾ’ ಹಾಡಿನಲ್ಲಿ ಅತ್ಯದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಹಾಡು ಬಿಡುಗಡೆ ಆದಾಗಿನಿಂದಲೂ ಸೌಬಿನ್ ಅವರ ನೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಇದನ್ನೂ ಓದಿ:ರಜನೀಕಾಂತ್ ಸಿನಿಮಾಕ್ಕಾಗಿ ಒಳ್ಳೆಯ ಪಾತ್ರವುಳ್ಳ ಸಿನಿಮಾ ಬಿಟ್ಟ ಶ್ರುತಿ ಹಾಸನ್
ಸುಂದರಿ, ಅದ್ಭುತ ಡ್ಯಾನ್ಸರ್ ಎರಡು ಆಗಿರುವ ಪೂಜಾ ಹೆಗ್ಡೆಯನ್ನೇ ಸೈಡ್ ಲೈನ್ ಮಾಡಿಬಿಟ್ಟಿದ್ದಾರೆ ಸೌಬಿನ್. ತಾವೊಬ್ಬ ಬಹುಕಲಾ ಪಾರಂಗತ ಎಂಬುದನ್ನು ಸಾಬೀತು ಮಾಡಿದ್ದಾರೆ. ಹಾಡು ನೋಡಿದ ಪ್ರತಿಯೊಬ್ಬರೂ ಸಹ ಸೌಬಿನ್ ಅವರ ನೃತ್ಯವನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಸೌಬಿನ್, ಕೇವಲ ಡ್ಯಾನ್ಸ್ ಮಾಡಿಲ್ಲ, ಬದಲಿಗೆ ಎಂಜಾಯ್ ಮಾಡಿದ್ದಾರೆ. ಅದುವೇ ಅವರ ಡ್ಯಾನ್ಸ್ ಸ್ಟೆಪ್ಪುಗಳನ್ನು ಜನರಿಗೆ ಹೆಚ್ಚು ಇಷ್ಟವಾಗುವಂತೆ ಮಾಡಿದೆ.
‘ಕೂಲಿ’ ಸಿನಿಮಾನಲ್ಲಿ ರಜನೀಕಾಂತ್ ನಾಯಕ. ಸಿನಿಮಾನಲ್ಲಿ ನಾಗಾರ್ಜುನ, ಉಪೇಂದ್ರ, ಬಾಲಿವುಡ್ ನಟ ಆಮಿರ್ ಖಾನ್, ಮಲಯಾಳಂನ ಸೌಬಿನ್, ನಾಯಕಿಯಾಗಿ ಶ್ರುತಿ ಹಾಸನ್, ರೆಬಾ ಮೋನಿಕಾ ಜಾನ್, ಕಾಳಿ ವೆಂಕಟ್ ಅವರುಗಳು ನಟಿಸಿದ್ದಾರೆ. ಸಿನಿಮಾ ಅನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Sun, 13 July 25




