Kalki 2898 AD: ಪ್ರಭಾಸ್ರ ‘ಕಲ್ಕಿ 2898 ಎಡಿ’ಯಲ್ಲಿ ‘ದಿವಂಗತ ಸ್ಟಾರ್’ ಇದು ಹೇಗೆ ಸಾಧ್ಯ?
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಹಲವು ತಾರೆಯರು ಒಟ್ಟಿಗೆ ನಟಿಸಿದ್ದಾರೆ. ತೆಲುಗು ಚಿತ್ರರಂಗದ ದಂತಕತೆ, ದಿವಂಗತ ಸೀನಿಯರ್ ಎನ್ಟಿಆರ್ ಸಹ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎನ್ಟಿಆರ್ ಅವರನ್ನು ತೆರೆ ಮೇಲೆ ತಂದಿದ್ದಾರೆ ನಾಗ್ ಅಶ್ವಿನ್.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಿಡುಗಡೆಗೆ 24 ಗಂಟೆಗಿಂತಲೂ ಕಡಿಮೆ ಸಮಯವಿದೆ. ಆಂಧ್ರ, ತೆಲಂಗಾಣಗಳಲ್ಲಂತೂ ಇಂದು (ಜೂನ್ 26) ಮಧ್ಯ ರಾತ್ರಿಯಿಂದಲೇ ಶೋ ಆರಂಭವಾಗಲಿವೆ. ‘ಕಲ್ಕಿ’ ಸಿನಿಮಾ ಅಂತೂ ಸ್ಟಾರ್ ನಟರುಗಳ ಕೂಟವೇ ಆಗಿದೆ. ಒಬ್ಬರಿಗಿಂತಲೂ ಒಬ್ಬರು ದೊಡ್ಡ ಸ್ಟಾರ್ ನಟರುಗಳು ಸಿನಿಮಾದಲ್ಲಿದ್ದಾರೆ. ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ರಾಣಾ ದಗ್ಗುಬಾಟಿ ಇವರೆಲ್ಲರ ಜೊತೆಗೆ ಇದೀಗ ತೆಲುಗು ಚಿತ್ರಜಗತ್ತಿನ ಮೊಟ್ಟ ಮೊದಲ ಸೂಪರ್ ಸ್ಟಾರ್ ಸಹ ‘ಕಲ್ಕಿ’ ಸಿನಿಮಾದಲ್ಲಿದ್ದಾರೆ ಎನ್ನಲಾಗುತ್ತಿದೆ.
ತೆಲುಗು ಸಿನಿಮಾ ರಂಗಕ್ಕೆ ದೇಶ, ವಿದೇಶದಲ್ಲಿ ಮಾನ್ಯತೆ ದೊರಕಿಸಿಕೊಟ್ಟ, ತೆಲುಗು ಚಿತ್ರರಂಗದ ದಂತಕತೆ ಎಂದೇ ಕರೆಯಲಾಗುವ ಸೀನಿಯರ್ ಎನ್ಟಿಆರ್ ಸಹ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿದ್ದಾರೆ ಎಂಬ ವಿಷಯ ತುಸು ತಡವಾಗಿ ಬಹಿರಂಗವಾಗಿದೆ. ಸೀನಿಯರ್ ಎನ್ಟಿಆರ್ ನಿಧನ ಹೊಂದಿ ವರ್ಷಗಳೇ ಆಗಿವೆ. ಆದರೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಎನ್ಟಿಆರ್ ಅವರನ್ನು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.
‘ಕಲ್ಕಿ’ ಸಿನಿಮಾನಲ್ಲಿ ಎನ್ಟಿಆರ್ ಅವರನ್ನು ಕೃಷ್ಣನ ಪಾತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ತೋರಿಸಿದ್ದಾರೆ. ಸಿನಿಮಾದ ಪ್ರಾರಂಭದಲ್ಲಿ ಹಾಗೂ ಅಂತ್ಯದಲ್ಲಿ ಎನ್ಟಿಆರ್ ಅವರು ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಎಐ (ಕೃತಕ ಬುದ್ಧಿಮತ್ತೆ)ಯನ್ನು ಸಹ ನಾಗ್ ಅಶ್ವಿನ್ ಬಳಸಿದ್ದಾರೆ. ಎನ್ಟಿಆರ್ ಅವರು 300 ಸಿನಿಮಾಗಳಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದಾರೆ ಆದರೆ ಅವರ ಶ್ರೀ ಕೃಷ್ಣನ ಪಾತ್ರ ಅತ್ಯಂತ ಜನಪ್ರಿಯ. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 17 ಸಿನಿಮಾಗಳಲ್ಲಿ ಕೃಷ್ಣನ ಪಾತ್ರದಲ್ಲಿ ಎನ್ಟಿಆರ್ ನಟಿಸಿದ್ದು ಎಲ್ಲವೂ ಸೂಪರ್ ಹಿಟ್.
ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರದ ಟಿಕೆಟ್ ದರ ಹೆಚ್ಚಳ; ಹೆಚ್ಚಿತು ಆಕ್ರೋಶ
ಎನ್ಟಿಆರ್ ಮರಣಾನಂತರ ಕೆಲವು ಸಿನಿಮಾಗಳಲ್ಲಿ ಜೂ ಎನ್ಟಿಆರ್ ಅವರನ್ನು ವಿಡಿಯೋ, ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ರಾಜಮೌಳಿ ನಿರ್ದೇಶನದ ಯಮದೊಂಗ ಸಿನಿಮಾನಲ್ಲಿ ಎನ್ಟಿಆರ್ ಅವರನ್ನು ಪಾತ್ರವಾಗಿ ಬಳಸಿಕೊಳ್ಳಲಾಗಿತ್ತು. ಒಂದು ಹಾಡಿನಲ್ಲಿ ಅವರೇ ಜೂ ಎನ್ಟಿಆರ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವಂತೆ ರಾಜಮೌಳಿ ತೋರಿಸಿದ್ದರು. ಈಗ ‘ಕಲ್ಕಿ’ ಸಿನಿಮಾದಲ್ಲಿ ಮತ್ತೊಮ್ಮೆ ತೋರಿಸಲಾಗುತ್ತಿದೆ.
‘ಕಲ್ಕಿ’ ಸಿನಿಮಾವು 6000 ವರ್ಷಗಳ ಕತೆಯನ್ನು ಒಳಗೊಂಡಿದೆ. ಮಹಾಭಾರತದ ಬಳಿಕ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಕೆಲವು ಮೂಲಗಳ ಪ್ರಕಾರ ಕಲಿಯುಗದ ಅಂತ್ಯದ ಮಹಾಯುದ್ಧದ ಕತೆ ಸಹ ‘ಕಲ್ಕಿ’ಯಲ್ಲಿದೆಯಂತೆ. ಸಿನಿಮಾನಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ನಟ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಭೈರವ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಈ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಜುಲೈ 27ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ