ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ‘ಆರ್ಆರ್ಆರ್’ ಚಿತ್ರದಿಂದ (RRR Movie) ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಾರೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಅವರು ವಿವಿಧ ರೀತಿಯ ಗೌರವಗಳನ್ನು ಪಡೆದಿದ್ದಾರೆ. ವಿಶೇಷ ಎಂದರೆ ಈ ಬಾರಿ ಅವರಿಗೆ ಆಸ್ಕರ್ ಅಕಾಡೆಮಿಯಲ್ಲಿ ಸದಸ್ಯತ್ವ ಪಡೆಯೋ ಅವಕಾಶ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಸ್ವೀಕರಿಸಿದ್ದಾರೆ. ಈ ವೇಳೆ ಹಲವು ಸವಲತ್ತುಗಳನ್ನು ಅವರು ಅನುಭವಿಸಲಿದ್ದಾರೆ.
ಸಂಗೀತ ಸಂಯೋಜಕ ಎಆರ್ ರೆಹಮಾನ್ ಸೇರಿದಂತೆ ಅನೇಕರು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ನ (ಆಸ್ಕರ್ ಅಕಾಡೆಮಿ) ಸದಸ್ಯತ್ವ ಹೊಂದಿದ್ದಾರೆ. ಈ ಬಾರಿ ರಾಜಮೌಳಿಗೆ ಆಹ್ವಾನ ಸಿಕ್ಕಿದೆ. ರಾಜಮೌಳಿ ಅವರು ಸದಸ್ಯತ್ವ ಪಡೆಯಲು ಒಪ್ಪಿದ್ದಾರೆ ಎನ್ನಲಾಗಿದೆ. ಇವರ ಜೊತೆ ಶಬಾನಾ ಆಜ್ಮಿ, ಸಿನಿಮಾಟೋಗ್ರಾಫರ್ ರವಿ ವರ್ಮನ್, ನಿರ್ಮಾಪಕ ರಿತೇಶ್ ಸಿಧ್ವಾನಿ ಹಾಗೂ ಡಾಕ್ಯುಮೆಂಟರಿ ಡೈರೆಕ್ಟರ್ ನಿಶಾ ಪಹುಜಾಗೂ ಈ ಬಾರಿ ಆಹ್ವಾನ ಸಿಕ್ಕಿದೆ. ರಾಜಮೌಳಿ ಪತ್ನಿ ಹಾಗೂ ಕಾಸ್ಟ್ಯೂಮ್ ಡಿಸೈನರ್ ರಮಾ ರಾಜಮೌಳಿಗೂ ಸದಸ್ಯತ್ವ ಸಿಕ್ಕಿದೆ ಎನ್ನಲಾಗುತ್ತಿದೆ.
ಈ ಸದಸ್ಯತ್ವ ಸಿಕ್ಕರೆ ಹಲವು ಲಾಭಗಳಾಗಲಿವೆ. ಪ್ರತಿ ವರ್ಷ ಆಸ್ಕರ್ ಸಿನಿಮಾಗಳಿಗೆ ವೋಟ್ ಮಾಡುವ ಅವಕಾಶ ಇವರಿಗೆ ಸಿಗಲಿದೆ. ಇವರಿಗಾಗಿ ವಿಶೇಷ ಸ್ಕ್ರೀನಿಂಗ್ ಕೂಡ ಇರುತ್ತದೆ. ವರ್ಕ್ಶಾಪ್, ಸೆಮಿನಾರ್ ಹಾಗೂ ಗ್ರಂಥಾಲಯವನ್ನು ಬಳಕೆ ಮಾಡುವ ಅವಕಾಶ ಇವರಿಗೆ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಷ್ಠಿತ ಸಂಸ್ಥೆಯ ಸದಸ್ಯತ್ವ ಸಿಕ್ಕ ಖುಷಿ ಇವರಿಗೆ ಇರುತ್ತದೆ.
ಇದನ್ನೂ ಓದಿ: ಯಾವಾಗ ಸೆಟ್ಟೇರಲಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ? ಇಲ್ಲಿದೆ ವಿವರ
ಸತ್ಯಜಿತ್ ರೇ, ಮೀರಾ ನಾಯರ್, ಕರಣ್ ಜೋಹರ್ ಮೊದಲಾದವರು ಅಕಾಡೆಮಿ ಸೇರಿದ್ದಾರೆ. ‘ಆರ್ಆರ್ಆರ್’ ರಿಲೀಸ್ ಆದ ಬಳಿಕ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಎಂಎಂ ಕೀರವಾಣಿ ಮೊಲಾದವರಿಗೆ ಆಹ್ವಾನ ನೀಡಲಾಗಿತ್ತು. ಈಗ ರಾಜಮೌಳಿಗೂ ಆಹ್ವಾನ ಸಿಕ್ಕಿದೆ. ಅವರು ಸದ್ಯ ಮಹೇಶ್ ಬಾಬು ನಿರ್ದೇಶನದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.