ಹೊಸ ಸಿನಿಮಾ ಪ್ರಾರಂಭಿಸುವ ಮುನ್ನ ಟೆಂಪಲ್ ರನ್ ಮಾಡಿದ ರಾಜಮೌಳಿ
Rajamouli: ನಿರ್ದೇಶಕ ರಾಜಮೌಳಿ ತಮ್ಮ ಕುಟುಂಬದೊಟ್ಟಿಗೆ ತಮಿಳುನಾಡು ಪ್ರವಾಸ ಮಾಡಿದ್ದಾರೆ.

ಸಿನಿಮಾಕ್ಕಾಗಿ (Cinema) ಅತೀವ ಶ್ರಮ, ಸಮಯ, ಪ್ರತಿಭೆ ಎಲ್ಲವನ್ನೂ ಧಾರೆ ಎರೆಯುವ ರಾಜಮೌಳಿ, ಸಿನಿಮಾದ ಯಶಸ್ಸಿಗೆ ಶ್ರಮದ ಜೊತೆಗೆ ದೈವ ಬಲವೂ ಬೇಕೆಂದು ನಂಬಿರುವವರು. ಪ್ರತಿ ಸಿನಿಮಾದ ಪ್ರಾರಂಭಕ್ಕೂ ಮುನ್ನ ವಿಶೇಷ ಪೂಜೆಗಳನ್ನು ನೆರವೇರಿಸಿಯೇ ಸಿನಿಮಾದ ಕ್ಲ್ಯಾಪ್ ಕೈಗೆತ್ತಿಕೊಳ್ಳುತ್ತಾರೆ ರಾಜಮೌಳಿ (Rajamouli). ಆರ್ಆರ್ಆರ್ (RRR) ಸಿನಿಮಾದಿಂದ ದೊರೆತಿರುವ ಅಭೂತಪೂರ್ವ ಯಶಸ್ಸಿನ ಬಳಿಕ ರಾಜಮೌಳಿ ಮೇಲೆ ನಿರೀಕ್ಷೆಗಳ ಭಾರಿ ನೂರು ಪಟ್ಟು ಹೆಚ್ಚಾಗಿದ್ದು, ಹೊಸ ಸಿನಿಮಾ ಶುರು ಮಾಡುವ ಮುನ್ನ ಮತ್ತೆ ದೇವರ ಮೊರೆ ಹೋಗಿದ್ದಾರೆ ಜಕ್ಕಣ್ಣ.
ತಮಿಳುನಾಡಿನ ಹಲವು ದೇವಾಲಯಗಳನ್ನು ರಾಜಮೌಳಿ ಸುತ್ತು ಹೊಡೆದಿದ್ದಾರೆ. ಮಧುರೈ ಮೀನಾಕ್ಷಿ ದೇವಾಲಯ, ತಂಜಾವೂರಿನ ಬೃಹದೀಶ್ವರ ದೇವಾಲಯ, ರಾಮೇಶ್ವರಮ್, ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ದೇವಾಲಯ, ತೂತುಕ್ಕುಡಿ ತಮಿಳುನಾಡಿನ ಇನ್ನಿತರೆ ಕಡೆಗಳಲ್ಲಿ ರಾಜಮೌಳಿ ತಮ್ಮ ಕುಟುಂಬದೊಂದಿಗೆ ಪ್ರವಾಸ ಮಾಡಿದ್ದಾರೆ. ಪ್ರವಾಸದಲ್ಲಿ ಪತ್ನಿ ರಮಾ, ಮಗ ಮತ್ತು ಸೊಸೆ, ಮಗಳು ಸಹ ರಾಜಮೌಳಿ ಜೊತೆಗಿದ್ದರು. ಕಾರಿನಲ್ಲಿ ಆನ್ರೋಡ್ ಟ್ರಿಪ್ ಮಾಡಬೇಕು ಎಂಬ ಆಸೆಯಿಂದ ಹೀಗೆ ಮಧ್ಯ ತಮಿಳುನಾಡಿನ ಸುತ್ತು ಹೊಡೆದಿದ್ದಾರಂತೆ ರಾಜಮೌಳಿ ಮತ್ತು ಕುಟುಂಬ.
ಇದನ್ನೂ ಓದಿ:Mahesh Babu: ಅಷ್ಟು ಸುಲಭಕ್ಕೆ ಸೆಟ್ಟೇರಲ್ಲ ಮಹೇಶ್ ಬಾಬು-ರಾಜಮೌಳಿ ಸಿನಿಮಾ
ಬಹಳ ದಿನಗಳಿಂದ ಮಧ್ಯ ತಮಿಳುನಾಡಿನಲ್ಲಿ ರೋಡ್ ಟ್ರಿಪ್ ಮಾಡಲು ಬಯಸಿದ್ದೆ. ದೇವಸ್ಥಾನಗಳಿಗೆ ಭೇಟಿ ನೀಡಲು ಬಯಸಿದ ನನ್ನ ಮಗಳಿಗೆ ಧನ್ಯವಾದಗಳು, ಆಕೆಯ ಇಚ್ಛೆಯಂತೆ ದೇವಾಲಯಗಳಿಗೆ ಭೇಟಿ ನೀಡಲು ನಿಶ್ಚಯಿಸಿದೆವು. ಜೂನ್ ಕೊನೆಯ ವಾರದಲ್ಲಿ ಶ್ರೀರಂಗಂ, ದಾರಾಸುರಂ, ಬೃಹದೀಶ್ವರರ ಕೋಯಿಲ್, ರಾಮೇಶ್ವರಂ, ಕನಾಡುಕಥನ್, ತೂತುಕುಡಿ ಮತ್ತು ಮಧುರೈಗೆ ಭೇಟಿ ನೀಡಿದೆವು. ಇದ್ದ ಕೆಲವೇ ದಿನಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಾತ್ರವೇ ಸ್ಥಳಗಳನ್ನು ನೋಡಿದೆವು. ಅಂದವಾದ ವಾಸ್ತುಶಿಲ್ಪ, ಅದ್ಭುತವಾದ ಇಂಜಿನಿಯರಿಂಗ್ ಮತ್ತು ಪಾಂಡ್ಯರು, ಚೋಳರು ನಾಯಕರು ಮತ್ತು ಇತರ ಅನೇಕ ಆಡಳಿತಗಾರರ ಆಳವಾದ ಆಧ್ಯಾತ್ಮಿಕ ಚಿಂತನೆಯು ನಿಜವಾಗಿಯೂ ಮೋಡಿ ಮಾಡುವಂತಿತ್ತು ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
ಮಂತ್ರಕೂಡಂ, ಕುಂಭಕೋಣಂನಲ್ಲಿ ಫೈಟ್ಸ್ಟಾರ್ ಫೈನ್ ಡೈನಿಂಗ್ ಊಟ ಹಾಗೂ ರಾಮೇಶ್ವರಂನಲ್ಲಿರುವ ಕಾಕಾ ಹೋಟೆಲ್ ಮುರುಗನ್ ಮೆಸ್‌ನಲ್ಲಿನ ಆಹಾರವು ಅದ್ಭುತವಾಗಿತ್ತು. ನಾನು ಒಂದು ವಾರದಲ್ಲಿ 2-3 ಕಿಲೋ ತೂಕ ಹೆಚ್ಚಿಸಿಕೊಂಡಿರಬೇಕು. 3 ತಿಂಗಳ ವಿದೇಶಿ ಪ್ರಯಾಣ ಮತ್ತು ವಿದೇಶಿ ಆಹಾರದ ನಂತರ, ಈ ಹೋಮ್ ಲ್ಯಾಂಡ್ ಪ್ರವಾಸವು ಉತ್ತೇಜನಕಾರಿಯಾಗಿತ್ತು ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
ಆರ್ಆರ್ಆರ್ ಸಿನಿಮಾದಿಂದಾಗಿ ವಿಶ್ವದ ಅತ್ಯುತ್ತಮ ನಿರ್ದೇಶಕರ ಸಾಲಿಗೆ ರಾಜಮೌಳಿ ಸೇರಿದ್ದು ಇದೀಗ ಅವರು ತಮ್ಮ ಮುಂದಿನ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ. ಮಹೇಶ್ ಬಾಬು ಜೊತೆಗೆ ರಾಜಮೌಳಿ ಶೀಘ್ರವೇ ಸಿನಿಮಾ ಆರಂಭಿಸಲಿದ್ದು, ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಈಗಾಗಲೇ ಶುರುವಾಗಿದೆ. ಹಲವು ಅಂತರಾಷ್ಟ್ರೀಯ ಸಂಸ್ಥೆಗಳೊಟ್ಟಿಗೆ, ಸ್ಟುಡಿಯೋಗಳೊಟ್ಟಿಗೆ ರಾಜಮೌಳಿ ಚರ್ಚೆ ನಡೆಸಿದ್ದು ಅತ್ಯುತ್ತಮ ತಂತ್ರಜ್ಞಾನವನ್ನು ತಮ್ಮ ಸಿನಿಮಾಕ್ಕೆ ದುಡಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ಜೊತೆಗೆ ಮಹೇಶ್ ಬಾಬು ಸಹ ರಾಜಮೌಳಿಯವರ ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಶೀಘ್ರವೇ ಚಿತ್ರೀಕರಣ ಶುರುವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ