
ಸುದೀಪ್ (Sudeep) ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದರ ಹಿಂದೊಂದು ಖುಷಿ ಸುದ್ದಿಗಳನ್ನು ಸುದೀಪ್ ನೀಡುತ್ತಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲು ಆಗುತ್ತಿಲ್ಲವೆಂದು ಕಿಚ್ಚ ಹೇಳಿದಾಗ ಸಹಜವಾಗಿಯೇ ಅಭಿಮಾನಿಗಳು ತುಸು ಬೇಸರಗೊಂಡಿದ್ದರು, ಆದರೆ ಅದರ ಬದಲಾಗಿ ಸುದೀಪ್ ತಮ್ಮ ಸಿನಿಮಾಗಳ ಘೋಷಣೆಯನ್ನು ಮಾಡುವ ಮೂಲಕ ಅಭಿಮಾನಿಗಳ ಮನದಲ್ಲಿ ಖುಷಿ ಮತ್ತು ನಿರೀಕ್ಷೆಗಳನ್ನು ಮೂಡಿಸಿದ್ದಾರೆ. ಕೆಲ ದಿನಗಳ ಹಿಂದೆ ಸುದೀಪ್ ಹಂಚಿಕೊಂಡಿದ್ದ ಪೋಸ್ಟ್ನಲ್ಲಿ, ‘ಸಿಂಹ ಸುಮ್ಮನೆ ಕೂತಿದೆ ಎಂದರೆ ಸುಸ್ತಾಗಿದೆ ಎಂದಲ್ಲ, ಮುಂದಿನ ಭೇಟೆಗೆ ತಯಾರಾಗಿದೆ ಎಂದರ್ಥ’ ಎಂದಿದ್ದರು. ಸುದೀಪ್ ಅವರು ಹಾಗೆ ಹೇಳಿದ್ದೇಕೆ ಎಂಬುದು ಈಗ ತಿಳಿಯುತ್ತಿದೆ.
ಸುದೀಪ್ ಹುಟ್ಟುಹಬ್ಬಕ್ಕೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಹೊಸ ರಗಡ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದರ ಬೆನ್ನಲ್ಲೆ ಸುದೀಪ್ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಮಾಡಿದ್ದಾರೆ. ಸುದೀಪ್ ಅವರು ತಮಿಳು ನಿರ್ದೇಶಕನ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇತ್ತು. ಆದರೆ ಆ ನಿರ್ದೇಶಕ ಯಾರೆಂಬುದು ಖಾತ್ರಿ ಆಗಿರಲಿಲ್ಲ. ಇದೀಗ ಸುದೀಪ್ ಹುಟ್ಟುಹಬ್ಬಕ್ಕೆ ಅಧಿಕೃತವಾಗಿ ಸಿನಿಮಾದ ಘೋಷಣೆ ಮಾಡಲಾಗಿದೆ. ಜೊತೆಗೆ ಸಿನಿಮಾದ ಟೈಟಲ್ ಸಹ ಅನೌನ್ಸ್ ಮಾಡಲಾಗಿದೆ.
ಸುದೀಪ್ ಅವರು ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ ಸಮುದ್ರಕಣಿ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಮುದ್ರಕಣಿ, ಖ್ಯಾತ ನಿರ್ದೇಶಕರಾಗಿದ್ದು, ‘ನಾಡೋಡಿಗಳ್’ (ಕನ್ನಡದಲ್ಲಿ ‘ಹುಡುಗರು’), ‘ಪೊರಾಲಿ’ (ಕನ್ನಡದಲ್ಲಿ ಯಾರೇ ಕೂಗಾಡಲಿ) ಸೇರಿದಂತೆ ‘ಅಪ್ಪ’, ‘ಬ್ರೋ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಂಪೂರ್ಣ ಕಮರ್ಶಿಯಲ್ ಅಲ್ಲದ ಆದರೆ ಅದ್ಭುತ ಕತೆಯನ್ನು ಒಳಗೊಂಡ ಸಿನಿಮಾಗಳನ್ನು ನಿರ್ದೇಶಿಸುವುದು ಅವರ ಸ್ಟೈಲ್. ಇದೀಗ ಈ ಪ್ರತಿಭಾವಂತ ನಿರ್ದೇಶಕನ ಜೊತೆಗೆ ದೈತ್ಯ ಪ್ರತಿಭೆ ಸುದೀಪ್ ಕೈಜೋಡಿಸಿದ್ದಾರೆ.
ಇದನ್ನೂ ಓದಿ:Kichcha Sudeep Birthday: ಕಿಚ್ಚ ಸುದೀಪ್ ಜನ್ಮದಿನ; ನಟ ಆಸ್ತಿ ಎಷ್ಟು ಗೊತ್ತಾ?
ಸುದೀಪ್ ಅವರಿಗಾಗಿ ಸಮುದ್ರಕಿಣಿ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ‘ಸ್ಕೂಲ್ ಬಸ್ ವಾಯ್ಸಸ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಹೆಸರು ಇದೊಂದು ಸಂದೇಶ ಹೊಂದಿರುವ ಸಿನಿಮಾ ಎಂಬುದನ್ನು ಸಾರಿ ಹೇಳುತ್ತಿದೆ. ಒಂದರ ಹಿಂದೊಂದು ಮಾಸ್ ಸಿನಿಮಾಗಳನ್ನು ಮಾಡಿಕೊಂಡೇ ಬಂದಿರುವ ಸುದೀಪ್ ಈಗ ಅವರ ನಟನೆಗೆ ಒರೆಗೆ ಹಚ್ಚುವ ಪಾತ್ರವೊಂದನ್ನು ನಟಿಸಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿದೆ.
ಸುದೀಪ್ ಸಹ ಕೇವಲ ಮಾಸ್ ಮಸಾಲಾ ಸಿನಿಮಾಗಳನ್ನು ಮಾಡಿಕೊಂಡು ಬಂದ ನಟರಲ್ಲ. ಹಲವಾರು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಶಾಂತಿ ನಿವಾಸ’, ‘ಆಟೋಗ್ರಾಫ್’, ‘ಸ್ವಾತಿ ಮುತ್ತು’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಇನ್ನೂ ಕೆಲವು ಭಿನ್ನ ಮಾದರಿಯ, ಕಂಟೆಂಟ್ ಆಧರಿತ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಇದೀಗ ಸುದೀಪ್ ಅವರು ‘ಸ್ಕೂಲ್ ಬಸ್’ ಮೂಲಕ ಮತ್ತೊಮ್ಮೆ ಅಂಥಹುದೇ ಪ್ರಯತ್ನಕ್ಕೆ ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:02 am, Wed, 2 September 26