‘ಥಗ್ ಲೈಫ್’ ಸಿನಿಮಾ ರಿಲೀಸ್​ಗೆ ಅನುವು ಮಾಡಿಕೊಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಆದೇಶ

Thug Life Movie: ಕಮಲ್ ಹಾಸನ್ ಹೇಳಿಕೆ ವಿರೋಧಿಸಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾದ ವಿರುದ್ಧ ಅಘೋಷಿತ ನಿಷೇಧ ಹೇರಲಾಗಿತ್ತು. ಕಮಲ್ ಹಾಸನ್ ಪರ ವಕೀಲರು ಈ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆದು ಇದೀಗ ಸುಪ್ರೀಂಕೋರ್ಟ್, ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

‘ಥಗ್ ಲೈಫ್’ ಸಿನಿಮಾ ರಿಲೀಸ್​ಗೆ ಅನುವು ಮಾಡಿಕೊಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಆದೇಶ
Thug Life

Updated on: Jun 17, 2025 | 1:14 PM

ಕಮಲ್ ಹಾಸನ್ (Kamal Haasan) ಕನ್ನಡದ ಬಗ್ಗೆ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ. ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಅನ್ನು ಬಿಡುಗಡೆ ಮಾಡದಂತೆ ತಡೆಯಲಾಗಿತ್ತು. ಕಮಲ್ ಹಾಸನ್ ಪರ ವಕೀಲರು ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

‘ಗೂಂಡಾಗಳ ಗುಂಪು, ಯಾವ ಸಿನಿಮಾ ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂದು ನಿರ್ಧರಿಸಲಾಗದು’ ಎಂದು ಕಠಿಣ ಪದಗಳಲ್ಲಿಯೇ ಹೇಳಿದೆ ಸುಪ್ರೀಂಕೋರ್ಟ್. ‘ಯಾರಾದರೂ ಒಂದು ಹೇಳಿಕೆ ನೀಡಿದರೆ ನೀವು ಅದಕ್ಕೆ ವಿರುದ್ಧವಾದ ಹೇಳಿಕೆ ನೀಡಿ, ಆದರೆ ಚಿತ್ರಮಂದಿರಗಳನ್ನು ಸುಟ್ಟು ಹಾಕುತ್ತೀವೆ ಎಂದು ಬೆದರಿಸುವುದು ಕಾನೂನಿಗೆ ವಿರುದ್ಧ. ಕಮಲ್ ಹಾಸನ್ ಹೇಳಿಕೆಯನ್ನು ಒಪ್ಪುವುದು ಒಪ್ಪದೇ ಇರುವುದು ಕರ್ನಾಟಕದ ಜನರಿಗೆ ಬಿಟ್ಟ ವಿಷಯ ಆದರೆ ಮೂಲಭೂತ ಹಕ್ಕುಗಳ ರಕ್ಷಣೆ ಆಗಲೇಬೇಕು’ ಎಂದಿದೆ.

‘ಬೆಂಗಳೂರಿನ ಜಾಗೃತ ಜನತೆಗೆ ಕಮಲ್ ಹಾಸನ್ ಹೇಳಿಕೆ ತಪ್ಪು ಎನಿಸಿದಾದಲ್ಲಿ, ಯಾವುದು ಸರಿಯೋ ಅದನ್ನು ಹೇಳಲಿ. ಆದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆಂದು ಬೆದರಿಸುವುದು ಏಕೆ?’ ಎಂದು ಸುಪ್ರೀಂ ಪ್ರಶ್ನಿಸಿದೆ. ರಾಜ್ಯ ಹೈಕೋರ್ಟ್​ ಸೂಚನೆಯನ್ನು ಟೀಕೆ ಮಾಡಿರುವ ಸುಪ್ರೀಂಕೋರ್ಟ್, ‘ವ್ಯವಸ್ಥೆಯಲ್ಲೇ ತಪ್ಪಿದೆ ಎನಿಸುತ್ತದೆ. ಒಬ್ಬ ವ್ಯಕ್ತಿ ತಪ್ಪು ಹೇಳಿಕೆ ನೀಡಿದ್ದಾರೆ, ಆದರೆ ಎಲ್ಲರೂ ಒಟ್ಟಾಗಿ ಅದರ ವಿರುದ್ಧ ನಿಂತಂತೆ ಕಾಣುತ್ತಿದೆ. ಕ್ಷಮೆ ಕೇಳು ಎಂದು ಹೈಕೋರ್ಟ್ ಹೇಳುತ್ತಿದೆ, ಅದು ಹೈಕೋರ್ಟ್​ನ ಕೆಲಸ ಅಲ್ಲ’ ಎಂದಿದೆ.

ಇದನ್ನೂ ಓದಿ:ವೀಕೆಂಡ್​ನಲ್ಲಿ ಲಕ್ಷಕ್ಕೆ ಕುಸಿದ ‘ಥಗ್ ಲೈಫ್’ ಗಳಿಕೆ; ಹೀನಾಯ ಸ್ಥಿತಿಯಲ್ಲಿ ಕಮಲ್ ಸಿನಿಮಾ

‘ಯಾವುದೇ ಸಿನಿಮಾ ಸಿಬಿಎಫ್​ಸಿಯಿಂದ ಪ್ರಮಾಣ ಪತ್ರ ಪಡೆದಿದೆ ಎಂದರೆ ಅದು ಬಿಡುಗಡೆ ಆಗಬೇಕು. ಆ ಸಿನಿಮಾವನ್ನು ನೋಡಬೇಕೆ ಬೇಡವೆ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ಆದರೆ ಒತ್ತಾಯಪೂರ್ವಕವಾಗಿ ಅದನ್ನು ಬಿಡುಗಡೆ ಮಾಡದಂತೆ ತಡೆಯುವುದು ಸೂಕ್ತ ಅಲ್ಲ. ‘ಮಿ ನಾಥೂರಾಮ್ ಬೋಲ್ಟೋಯ್’ ನಾಟಕ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಭಿನ್ನ ಅಭಿಪ್ರಾಯದ ಕಾರಣಕ್ಕೆ ನಿಷೇಧ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರೋಧ ಎಂದಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಇದೀಗ ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗಬೇಕಿದೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದ ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರ ಪೊಲೀಸ್ ಭದ್ರತೆ ಒದಿಗಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ