Suriya: ಫ್ಯಾಮಿಲಿ ಸಮೇತ ಮುಂಬೈನಲ್ಲಿ ಸೆಟ್ಲ್ ಆದ ನಟ ಸೂರ್ಯ; ಚೆನ್ನೈ ತೊರೆಯುವಂಥದ್ದು ಏನಾಯ್ತು?
Jyothika | Suriya Family: ಮುಂಬೈನಲ್ಲಿ ಸೂರ್ಯ ಅವರು ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಬರೋಬ್ಬರಿ 70 ಕೋಟಿ ರೂಪಾಯಿ ನೀಡಿ ಅವರು ಪ್ರಾಪರ್ಟಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಾಂಶಗಳು
- ಚೆನ್ನೈ ಬದಲು ಮುಂಬೈನಲ್ಲಿ ವಾಸಿಸಲು ಆರಂಭಿಸಿದ ಸೂರ್ಯ
- ಪತ್ನಿ ಮತ್ತು ಮಕ್ಕಳ ಜೊತೆ ಮುಂಬೈಗೆ ಶಿಫ್ಟ್ ಆದ ಸ್ಟಾರ್ ನಟ
- 70 ಕೋಟಿ ರೂಪಾಯಿ ನೀಡಿ ಪ್ರಾಪರ್ಟಿ ಖರೀದಿಸಿದ ಸೂರ್ಯ
ತಮಿಳು ಚಿತ್ರರಂಗದಲ್ಲಿ ನಟ ಸೂರ್ಯ (Suriya) ಅವರು ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅವರನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಇಷ್ಟು ವರ್ಷಗಳ ಕಾಲ ಚೆನ್ನೈನಲ್ಲಿ ವಾಸವಾಗಿದ್ದ ಸೂರ್ಯ ಅವರು ಈಗ ಏಕಾಏಕಿ ಮುಂಬೈಗೆ ಶಿಫ್ಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹಾಗಂತ ಅವರೊಬ್ಬರೇ ಮುಂಬೈನಲ್ಲಿ ವಾಸವಾಗಿಲ್ಲ. ಜೊತೆಗೆ ಪತ್ನಿ ಜ್ಯೋತಿಕಾ (Jyothika) ಹಾಗೂ ಇಬ್ಬರು ಮಕ್ಕಳ ಜೊತೆ ಸೂರ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ 70 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಅಷ್ಟಕ್ಕೂ ಸೂರ್ಯ ಅವರು ಇಂಥ ನಿರ್ಧಾರ ಯಾಕೆ ತೆಗೆದುಕೊಂಡರು? ಚೆನ್ನೈ ಬಿಟ್ಟು ಮುಂಬೈಗೆ ಹೋಗುವಂಥದ್ದು ಏನಾಯಿತು? ಇಲ್ಲಿದೆ ವಿವರ..
ಸೂರ್ಯ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಪತ್ನಿ ಮತ್ತು ಮಕ್ಕಳ ಜೊತೆ ಅವರು ಹೆಚ್ಚಾಗಿ ಕಾಲ ಕಳೆಯುತ್ತಾರೆ. ಸಿನಿಮಾದ ಕೆಲಸಗಳ ಬಿಡುವಿನಲ್ಲಿ ಅವರು ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಾರೆ. ಈಗ ಅವರು ಮುಂಬೈಗೆ ಶಿಫ್ಟ್ ಆಗುವ ನಿರ್ಧಾರ ತೆಗೆದುಕೊಂಡಿದ್ದು ಕೂಡ ಮಕ್ಕಳ ಸಲುವಾಗಿ ಎಂದು ವರದಿ ಆಗಿದೆ. ಸೂರ್ಯ ಅವರ ಮಕ್ಕಳಾದ ದಿಯಾ ಮತ್ತು ದೇವ್ ಅವರು ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕಾಗಿ ಚೆನ್ನೈನಿಂದ ಮುಂಬೈಗೆ ತಮ್ಮ ಮನೆಯನ್ನು ಸೂರ್ಯ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ನೀಡಿ ಭಾವುಕರಾದ ನಟ ಸೂರ್ಯ
ವಾಣಿಜ್ಯ ನಗರಿಯಲ್ಲಿ ಸೂರ್ಯ ಅವರು ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಪತ್ನಿ ಮತ್ತು ಮಕ್ಕಳ ಜೊತೆ ಕಾಣಿಸಿಕೊಂಡಾಗ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುತ್ತಿಕೊಂಡಿದ್ದರು. ಆಗ ಮಕ್ಕಳ ಫೋಟೋ ತೆಗೆಯುವುದು ಬೇಡ ಎಂದು ಸೂರ್ಯ ಮನವಿ ಮಾಡಿಕೊಂಡಿದ್ದರು. ಮಕ್ಕಳ ಖಾಸಗಿತನಕ್ಕೆ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂಪಾಯಿ ನೀಡಿ ಅವರು ಪ್ರಾಪರ್ಟಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಸೂರ್ಯ ಅವರು ಅಧಿಕೃತವಾಗಿ ಮಾತನಾಡಿಲ್ಲ.
ಇದನ್ನೂ ಓದಿ: Suriya: ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ; ಕಾರಣವೇನು? ಇಲ್ಲಿದೆ ಮಾಹಿತಿ
ಸ್ಕ್ರಿಪ್ಟ್ ಆಯ್ಕೆಯಲ್ಲಿ ಸೂರ್ಯ ಅವರು ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಪ್ರತಿ ಸಿನಿಮಾದಲ್ಲೂ ಅವರು ಡಿಫರೆಂಟ್ ಪಾತ್ರ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಸಿನಿಮಾಗಳೆಲ್ಲವೂ ಸಖತ್ ಸದ್ದು ಮಾಡಿವೆ. ‘ಸೂರರೈ ಪೋಟ್ರು’, ‘ಜೈ ಭೀಮ್’ ಸಿನಿಮಾಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಮಲ್ ಹಾಸನ್ ನಟನೆಯ ‘ವಿಕ್ರಂ’ ಚಿತ್ರದಲ್ಲಿ ಸೂರ್ಯ ಮಾಡಿದ ರೋಲೆಕ್ಸ್ ಎಂಬ ಪಾತ್ರವಂತೂ ಟ್ರೆಂಡ್ ಸೃಷ್ಟಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








