ಸಿಎಂ ವಿಜಯ್ ಅನುಮತಿ ನೀಡಿದ್ದರೂ ತ್ರಿಶಾ ನಟನೆಯ ‘ಕರುಪ್ಪು’ ಚಿತ್ರಕ್ಕೆ ತಪ್ಪಲಿಲ್ಲ ತೊಂದರೆ

ತ್ರಿಶಾ ಕೃಷ್ಣನ್, ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾದ ಬೆಳಗಿನ ಪ್ರದರ್ಶನಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ನಿಖರ ಕಾರಣ ಇಲ್ಲದೇ ಈ ರೀತಿ ಮಾಡಿರುವುದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ. ಚಿತ್ರತಂಡದವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ. ಆ ಕುರಿತು ಇಲ್ಲಿದೆ ವಿವರ..

ಸಿಎಂ ವಿಜಯ್ ಅನುಮತಿ ನೀಡಿದ್ದರೂ ತ್ರಿಶಾ ನಟನೆಯ ‘ಕರುಪ್ಪು’ ಚಿತ್ರಕ್ಕೆ ತಪ್ಪಲಿಲ್ಲ ತೊಂದರೆ
Trisha Krishnan

Updated on: May 14, 2026 | 3:40 PM

ಕಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಕರುಪ್ಪು’ (Karuppu) ಇಂದು (ಮೇ 14) ತೆರೆಕಂಡಿದೆ. ಸೂರ್ಯ ಮತ್ತು ತ್ರಿಶಾ ಕೃಷ್ಣನ್ (Suriya Trisha) ನಟನೆಯ ಈ ಥ್ರಿಲ್ಲರ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳ ಮೊದಲು ಚಿತ್ರತಂಡ ತೆಗೆದುಕೊಂಡ ನಿರ್ಧಾರವೊಂದು ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಅವರು ಈ ಚಿತ್ರದ ಮುಂಜಾನೆಯ ಪ್ರದರ್ಶನಕ್ಕೆ ವಿಶೇಷ ಅನುಮತಿ ನೀಡಿದ್ದರೂ ಸಹ, ಕೊನೆಯ ಕ್ಷಣದಲ್ಲಿ ಬೆಳಿಗ್ಗೆ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗಿದೆ.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್‌ಆರ್ ಪ್ರಭು ಅವರು ರಾತ್ರಿ 1 ಗಂಟೆಯ ಸುಮಾರಿಗೆ ಎಕ್ಸ್ (ಟ್ವಿಟರ್) ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ‘ಅನಿವಾರ್ಯ ಕಾರಣಗಳಿಂದಾಗಿ ಕರುಪ್ಪು ಚಿತ್ರದ ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಅಭಿಮಾನಿಗಳಿಗೆ ಉಂಟಾದ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ಶೋಗಳನ್ನು ರದ್ದುಗೊಳಿಸಲು ನಿಖರವಾದ ಕಾರಣ ಏನು ಎಂದು ಅವರು ಬಹಿರಂಗಪಡಿಸಿಲ್ಲ.

ಮುಂಜಾನೆಯೇ ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಈ ಸುದ್ದಿಯಿಂದ ಕಂಗಾಲಾಗಿದ್ದಾರೆ. ನಿರ್ಮಾಪಕರ ಸ್ಪಷ್ಟನೆ ಇಲ್ಲದ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಯೊಬ್ಬರು, ‘ಇದು ಕೇವಲ ತಮಿಳುನಾಡಿಗೆ ಮಾತ್ರವೇ ಅಥವಾ ಕೇರಳದಲ್ಲೂ ರದ್ದಾಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ‘ಸ್ಪಷ್ಟವಾಗಿ ಮಾಹಿತಿ ನೀಡಿ, ನಾವು ರಜೆ ಹಾಕಿ ಸಿನಿಮಾ ನೋಡಲು ಬಂದಿದ್ದೇವೆ. ಮಧ್ಯಾಹ್ನ 12 ಗಂಟೆಗೆ ಸಿನಿಮಾ ಶುರುವಾಗುತ್ತದೆಯೇ ಅಥವಾ ಇಲ್ಲವೇ?’ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ಅನುಮತಿ ಸಿಕ್ಕಿದ್ದರೂ ತಾಂತ್ರಿಕ ದೋಷ ಅಥವಾ ಆರ್ಥಿಕ ಸಮಸ್ಯೆಗಳಿಂದಾಗಿ ‘ಕರುಪ್ಪು’ ಚಿತ್ರದ ಬೆಳಗಿನ ಪ್ರದರ್ಶನ ಸ್ಥಗಿತಗೊಂಡಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾದ ಶೋ ಕ್ಯಾನ್ಸಲ್ ಆಗಿದ್ದಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ವಿಶೇಷವೆಂದರೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಈ ಚಿತ್ರಕ್ಕೆ ಬೆಳಿಗ್ಗೆ 9 ಗಂಟೆಯ ಶೋ ನಡೆಸಲು ಅನುಮತಿ ನೀಡಿದ್ದರು. ಇದಕ್ಕಾಗಿ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ಸಿಎಂ ವಿಜಯ್ ಅವರು ಕಚೇರಿಯಲ್ಲಿ ಫೈಲ್‌ಗೆ ಸಹಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡು ಧನ್ಯವಾದ ಅರ್ಪಿಸಿತ್ತು. ಮುಖ್ಯಮಂತ್ರಿಗಳೇ ವಿಶೇಷ ಅನುಮತಿ ನೀಡಿದ್ದರೂ, ಶೋಗಳು ರದ್ದಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:36 pm, Thu, 14 May 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us