AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ; ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

ಬಹಿರಂಗವಾಗಿ ಜಾತಿನಿಂದನೆ ಮಾಡಿರುವುದಕ್ಕೆ ಮುನ್​ಮುನ್​ ದತ್ತ ಅವರನ್ನು ಅರೆಸ್ಟ್​ ಮಾಡಬೇಕು ಎಂದು ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. #ArrestMunmunDutta ಎಂಬ ಹ್ಯಾಷ್​ ಟ್ಯಾಗ್​ ಮೂಲಕ ಟ್ರೆಂಡ್​ ಮಾಡಲಾಗುತ್ತಿದೆ.

ಜಾತಿನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ; ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು
ಮುನ್ ಮುನ್ ದತ್ತ
ಮದನ್​ ಕುಮಾರ್​
|

Updated on: May 11, 2021 | 11:27 AM

Share

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಎಷ್ಟು ಹುಷಾರಾಗಿದ್ದರೂ ಸಾಲದು. ಅಪ್ಪಿತಪ್ಪಿ ಒಂದು ಮಾತು ಬೇರೆ ಅರ್ಥ ಪಡೆದುಕೊಂಡರೆ ದೊಡ್ಡ ವಿವಾದವೇ ಆಗಿ ಹೋಗುತ್ತದೆ. ಅಂಥದ್ದರಲ್ಲಿ ನೇರಾನೇರವಾಗಿ ಒಂದು ಜಾತಿಯ ಬಗ್ಗೆ ಕೀಳಾಗಿ ಮಾತನಾಡಿದರೆ ಜನರು ಬಿಡುತ್ತಾರಾ? ಖಂಡಿತಾ ಇಲ್ಲ. ಹಿಂದಿ ಕಿರುತೆರೆಯ ಖ್ಯಾತ ನಟಿ ಮುನ್​ಮುನ್​ ದತ್ತ ಅವರು ಇಂಥ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ.

ಲಾಕ್​ಡೌನ್​ ಇರುವ ಕಾರಣ ಈಗ ಆನ್​ಲೈನ್​ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೆಲೆಬ್ರಿಟಿಗಳು ಪ್ರಯತ್ನಿಸುತ್ತಿದ್ದಾರೆ. ಹಿಂದಿಯ ‘ತಾರಕ್​ ಮೆಹ್ತಾ ಕಾ ಉಲ್ಟಾ ಚಸ್ಮಾ’ ಸೀರಿಯಲ್​ ಖ್ಯಾತಿಯ ನಟಿ ಮುನ್​ಮುನ್​ ದತ್ತ​ ಕೂಡ ಇತ್ತೀಚೆಗೆ ಒಂದು ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಹಂಚಿಕೊಂಡರು. ಆ ಸಂದರ್ಭದಲ್ಲಿ ಅವರು ಆಡಿದ ಒಂದು ಮಾತು ತೀವ್ರ ವಿವಾದಕ್ಕೆ ಕಾರಣ ಆಗಿದೆ. ಏನನ್ನೋ ಮಾತನಾಡುವ ಭರದಲ್ಲಿ ಅವರು ಜಾತಿ ನಿಂದನೆ ಮಾಡಿದ್ದಾರೆ.

ಯೂಟ್ಯೂಬ್​ ವಿಡಿಯೋದಲ್ಲಿ ತಮ್ಮ ಮೇಕಪ್ ಬಗ್ಗೆ ಮುನ್​ಮುನ್​ ದತ್ತ ಮಾಹಿತಿ ನೀಡುತ್ತಿದ್ದರು. ‘ಯೂಟ್ಯೂಬ್​ನಲ್ಲಿ ಎಲ್ಲರ ಎದುರಿಗೆ ಬರುತ್ತಿದ್ದೇನೆ. ಚೆನ್ನಾಗಿ ಕಾಣಬೇಕು ಅಂತ ಸ್ವಲ್ಪ ಮೇಕಪ್​ ಮಾಡಿಕೊಂಡಿದ್ದೇನೆ. ಆ ಜಾತಿಯವರ ರೀತಿ ಕಾಣಲು ನನಗೆ ಇಷ್ಟ ಇಲ್ಲ’ ಎಂದು ಒಂದು ನಿರ್ದಿಷ್ಟ ಜಾತಿಯ ಹೆಸರು ಹೇಳಿದ್ದಾರೆ. ಅದೇ ಈಗ ವಿವಾದಕ್ಕೆ ಕಾರಣ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಮುನ್​ಮುನ್​ ದತ್ತ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೀಗೆ ಬಹಿರಂಗವಾಗಿ ಜಾತಿ ನಿಂದನೆ ಮಾಡಿರುವುದಕ್ಕೆ ಮುನ್​ಮುನ್​ ದತ್ತ ಅವರನ್ನು ಅರೆಸ್ಟ್​ ಮಾಡಬೇಕು ಎಂದು ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. #ArrestMunmunDutta ಎಂಬ ಹ್ಯಾಷ್​ ಟ್ಯಾಗ್​ ಮೂಲಕ ಟ್ರೆಂಡ್​ ಮಾಡಲಾಗುತ್ತಿದೆ. ‘ಈಕೆ ತನ್ನನ್ನು ತಾನು ಪ್ರಾಣಿ ಪ್ರಿಯೆ ಎಂದು ಕರೆದುಕೊಂಡಿದ್ದಾಳೆ. ಆದರೆ ಮನುಷ್ಯರನ್ನು ಪ್ರೀತಿಸುವುದನ್ನು ಮರೆತಿದ್ದಾಳೆ’ ಎಂದು ಜನರು ಟ್ರೋಲ್​ ಮಾಡುತ್ತಿದ್ದಾರೆ.

ವಿಷಯ ಇಷ್ಟು ಸೀರಿಯಸ್​ ಆದ ಬಳಿಕ ಟ್ವಿಟರ್​ ಮೂಲಕ ಮುನ್​ಮುನ್​ ದತ್ತ ಕ್ಷಮೆ ಕೇಳಿದ್ದಾರೆ. ‘ಯಾರಿಗೂ ನೋವು ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಸಿರಲಿಲ್ಲ. ನನ್ನ ಭಾಷೆಯ ಮಿತಿಯಿಂದಾಗಿ ಆ ಪದದ ಸರಿಯಾದ ಅರ್ಥ ನನಗೆ ತಿಳಿದಿರಲಿಲ್ಲ. ಎಲ್ಲರ ಜಾತಿ, ಧರ್ಮ, ಜನಾಂಗದ ಬಗ್ಗೆ ನಾನು ಗೌರವ ಹೊಂದಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಮುನ್​ಮುನ್​ ದತ್ತ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 

ದೌರ್ಜನ್ಯದಲ್ಲಿ ನೊಂದ ಪರಿಶಿಷ್ಟ ಜಾತಿ-ಪಂಗಡದ ಸಂತ್ರಸ್ತರಿಗೆ 75.36 ಲಕ್ಷ ರೂ. ಪರಿಹಾರ ಧನ ವಿತರಣೆ ಮಾಡಿದ ವಿಜಯಪುರ ಜಿಲ್ಲಾಡಳಿತ

ಲಕ್ಷ್ಮೀನಾರಾಯಣ ಭಟ್ಟ​ ಭಾವನಮನ: ಜಾತಿ ನೋಡಿ ಪಾಠ ಮಾಡುವವರು ಎಂದಾದರೂ ಮೇಷ್ಟ್ರಾಗಲು ಸಾಧ್ಯ ಇದೆಯಾ?