‘ಬಿಗ್ ಬಾಸ್’ (Bigg Boss) ಶೋ ದೇಶಾದ್ಯಂತ ಸಖತ್ ಫೇಮಸ್ ಆದ ರಿಯಾಲಿಟಿ ಶೋ. ಹಿಂದಿಯಲ್ಲಿ ಮೊದಲಿಗೆ ಆರಂಭವಾದ ಈ ಶೋ ನಂತರ ಕನ್ನಡ, ತೆಲುಗು, ತಮಿಳು ಹಾಗೂ ಮೊದಲಾದ ಭಾಷೆಗಳಲ್ಲಿ ಪ್ರಸಾರ ಕಂಡಿತು. ಅನೇಕರು ಈ ಶೋನ ಇಷ್ಟಪಡುತ್ತಾರೆ. ಆದರೆ, ಒಂದು ವರ್ಗದ ಜನರು ಮಾತ್ರ ಈ ಶೋ ಬಗ್ಗೆ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಇದು ಸ್ಕ್ರಿಪ್ಟೆಡ್ ಎಂದು ಆರೋಪ ಮಾಡಿದ ಒಂದು ವರ್ಗ ಕೂಡ ಇದೆ. ಈಗ ಬಿಗ್ ಬಾಸ್ ಸ್ಪರ್ಧಿಯೇ ಈ ರೀತಿಯ ಆರೋಪ ಮಾಡಿದ್ದಾರೆ. ಅವರು ಬೇರಾರು ಅಲ್ಲ ಅಭಿನಯಶ್ರೀ (Abhinayashree).
ಅಭಿನಯಶ್ರೀ ಅವರು ಕನ್ನಡ ಸೇರಿ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಕರಿಯ’ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ ಪ್ರಸಾರ ಕಾಣುತ್ತಿರುವ ‘ಬಿಗ್ ಬಾಸ್ ತೆಲುಗು 6’ನಲ್ಲಿ ಭಾಗಿ ಆಗಿದ್ದರು. ಈ ಶೋನ ಅಕ್ಕಿನೇನಿ ನಾಗಾರ್ಜುನ ಅವರು ನಡೆಸಿಕೊಡುತ್ತಿದ್ದಾರೆ. ಕೇವಲ 14ನೇ ದಿನಕ್ಕೆ ಅಭಿನಯಶ್ರೀ ಮನೆಯಿಂದ ಔಟ್ ಆಗಿದ್ದಾರೆ. ಶೋ ಆಯೋಜಕರಿಂದ ನನಗೆ ಮೋಸ ಆಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
‘ಬಿಗ್ ಬಾಸ್ನಲ್ಲಿ ನಾನು ಕಾಣಿಸಿಕೊಂಡ ದೃಶ್ಯಗಳನ್ನು ಕಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ನನ್ನ ಚಟುವಟಿಕೆಗಳನ್ನು ಹೆಚ್ಚು ತೋರಿಸಿಲ್ಲ. ವಾಹಿನಿಯವರಿಗೆ ಬೇಕಾದವರನ್ನು ಉಳಿಸಿಕೊಳ್ಳಲಾಗುತ್ತದೆ. ಉಳಿದವರನ್ನು ಎಲಿಮಿನೇಟ್ ಮಾಡಲಾಗುತ್ತದೆ. ವಾಹಿನಿಯವರು ತಮಗೆ ಬೇಕಾದವರನ್ನು ಸೇವ್ ಮಾಡುತ್ತಾರೆ ಎಂದಾದಾಗ ಫ್ಯಾನ್ಸ್ ವೋಟಿಂಗ್ ಬೋಗಸ್ ಎಂದೇ ಆಗುತ್ತದೆ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅಭಿನಯಶ್ರೀ ಹೇಳಿಕೆಗೆ ವಾಹಿನಿಯವರು ಯಾವ ರೀತಿಯಲ್ಲಿ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಮೊದಲು ಕೂಡ ಅನೇಕ ಸ್ಪರ್ಧಿಗಳು ಇದೇ ಮಾದರಿಯ ಆರೋಪ ಮಾಡಿದ್ದರು.
ಇದನ್ನೂ ಓದಿ: Bigg Boss: ಅ.1ರಿಂದ ಬದಲಾಗಲಿದೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಸ್ವರೂಪ; ಏನಿದು ಹೊಸ ಸುದ್ದಿ?
2001ರಲ್ಲಿ ತೆರೆಗೆ ಬಂದ ತಮಿಳಿನ ‘ಫ್ರೆಂಡ್ಸ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ನಟಿ ಅಭಿನಯಶ್ರೀ. ನಂತರ ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದರು. 2002ರಲ್ಲಿ ರಿಲೀಸ್ ಆದ ‘ಕರಿಯ’ ಚಿತ್ರದಲ್ಲಿ ಬಣ್ಣ ಹಚ್ಚಿದರು. ಈ ಮೂಲಕ ಸ್ಯಾಂಡಲ್ವುಡ್ಗೂ ಕಾಲಿಟ್ಟರು. ಇತ್ತೀಚೆಗೆ ಬಣ್ಣದ ಲೋಕದಿಂದ ಅಭಿನಯಶ್ರೀ ದೂರ ಉಳಿದುಕೊಂಡಿದ್ದಾರೆ. ಅವರು ಈಗ ಬಿಗ್ ಬಾಸ್ ಬಗ್ಗೆ ಹೇಳಿಕೆ ನೀಡಿ ಚರ್ಚೆ ಹುಟ್ಟುಹಾಕಿದ್ದಾರೆ.
Published On - 8:24 pm, Mon, 26 September 22