
‘ಅಮೃತಧಾರೆ’ ಧಾರಾವಾಹಿ (Amruthadhare Serial) ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ಕಥಾ ನಾಯಕ ಗೌತಮ್ ಮಲತಾಯಿ ಶಕುಂತಲ ಕೆಟ್ಟವಳು ಎಂಬ ವಿಚಾರ ಇಷ್ಟು ದಿನ ಮನೆಯಲ್ಲಿ ಯಾರಿಗೂ ಗೊತ್ತೇ ಆಗಿರಲಿಲ್ಲ. ಆದರೆ, ಈಗ ಹಂತ ಹಂತವಾಗಿ ಈ ವಿಚಾರ ತಿಳಿಯುತ್ತಿದೆ. ಭೂಮಿಕಾಗೆ ಈ ವಿಷಯ ಗೊತ್ತಾಗಿ ಹೋಗಿದೆ. ಆಕೆ ನೇರವಾಗಿ ಚಾಲೆಂಜ್ ಮಾಡಿದ್ದಾಳೆ. ಈ ಕ್ರಮದಿಂದ, ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವುಗಳನ್ನು ವೀಕ್ಷಕರು ನಿರೀಕ್ಷಿಸಬಹುದಾಗಿದೆ.
ಗೌತಮ್ ಹಾಗೂ ಭೂಮಿಕಾ ದಂಪತಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, ಒಂದು ಮಗುವನ್ನು ಶಕುಂತಲ ಹಾಗೂ ಆಕೆಯ ಮಗ ಜಯದೇವ್ ಅಪಹರಣ ಮಾಡಿಸಿದರು. ಆ ಮಗು ಕಾಣೆ ಆಗಿದೆ ಮತ್ತು ಈವರೆಗೆ ಅದು ಸಿಕ್ಕೇ ಇಲ್ಲ. ಈ ವಿಚಾರವನ್ನು ಭೂಮಿಕಾಳಿಂದ ಗೌತಮ್ ಮುಚ್ಚಿಟ್ಟಿದ್ದಾನೆ. ತನಗೆ ಜನಿಸಿದ್ದು ಒಂದೇ ಮಗು ಎಂದು ಭೂಮಿಕಾ ಭಾವಿಸಿದ್ದಾಳೆ. ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾಳೆ. ಮಗು ಇಲ್ಲದಂತೆ ಮಾಡಬೇಕು ಎಂಬುದು ಶಕುಂತಲ ಪ್ಲ್ಯಾನ್.
ಹೀಗಿರುವಾಗಲೇ ಗೌತಮ್ ನಿಜವಾದ ತಾಯಿಯು ಶಕುಂತಲಾಳ ನಿಜವಾದ ಮುಖವನ್ನು ಕಳಚಿಟ್ಟಿದ್ದಾಳೆ. ಭೂಮಿಕಾಳು ಗೌತಮ್ ತಾಯಿ ಜೊತೆ ತನ್ನ ತವರು ಮನೆಗೆ ಹೋಗಿದ್ದಳು. ಆಕೆಗೆ ಮಾತು ಬರದ ಕಾರಣ ಕೈ ಮೂಲಕ ಬರೆಸಿ ನಿಜವಾದ ಕಳ್ಳಿ ಯಾರು ಎಂಬುದನ್ನು ಪತ್ತೆ ಹಚ್ಚಿದ್ದಾಳೆ. ‘ಶಕುಂತಲಾ ಮಗುಗೆ ತೊಂದರೆ ಕೊಡೋಕೆ ಬರುತ್ತಿದ್ದಾಳೆ’ ಎಂದು ಗೌತಮ್ ತಾಯಿಯು ಭೂಮಿಕಾಗೆ ಹೇಳಿದಳು.
ಇದನ್ನೂ ಓದಿ: ಅಮೃತಧಾರೆ: ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?
ಆ ಬಳಿಕ ಭೂಮಿಕಾ ನೇರವಾಗಿ ಮನೆಗೆ ಬಂದು, ಶಕುಂತಲಾ ಬಳಿ ಈ ವಿಚಾರವಾಗಿ ಮಾತನಾಡಿದ್ದಾಳೆ. ‘ನೀವು ಅಮೃತದ ಲೇಬಲ್ ಹಾಕಿರೋ ವಿಷ’ ಎಂದು ಭೂಮಿಕಾ ಹೇಳುತ್ತಿದ್ದಂತೆ, ‘ಸ್ವಲ್ಪ ನೋಡ್ಕೊಂಡು ಮಾತನಾಡು’ ಎಂದು ಶಕುಂತಲ ಎಚ್ಚರಿಸಿದಳು. ಆದರೆ, ಇದನ್ನು ಭೂಮಿಕಾ ಕೇಳಲೇ ಇಲ್ಲ. ‘ನಿನಗೆ ಏನು ಗೊತ್ತಾಗಿದೆಯೋ ಅದುವೇ ಸತ್ಯ. ನೀನು ಯುದ್ಧ ಘೋಷಣೆ ಮಾಡಿದ್ದೀಯಾ. ನಾನು ಅದನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುತ್ತೇನೆ’ ಎಂದು ಶಕುಂತಲಾ ಹೇಳಿದಳು. ಆಗ ಭೂಮಿಕಾ, ‘ಅದಕ್ಕೆ ಈ ಭೂಮಿಕಾ ಅವಕಾಶ ನೀಡಲ್ಲ. ಆಟ ಈಗ ಶುರು’ ಎಂದು ಅವಾಜ್ ಹಾಕಿದಳು. ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವು ನಿರೀಕ್ಷಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:59 am, Wed, 6 August 25