‘ಹೋಗೆಲೇ..’, ‘ನೀನ್ ಹೋಗೆಲೇ’; ಅಶ್ವಿನಿ-ಕಾವ್ಯಾ ಮಧ್ಯೆ ತಾರಕಕ್ಕೇರಿದ ಕಿತ್ತಾಟ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಗೌಡ ನಡುವೆ ನಾಮಿನೇಷನ್ ವೇಳೆ ತೀವ್ರ ವಾಕ್ಸಮರ ನಡೆದಿದೆ. ಕಾವ್ಯಾ ಅಶ್ವಿನಿಯವರ ವ್ಯಕ್ತಿತ್ವವನ್ನು ಪ್ರಶ್ನಿಸಿದರೆ, ಅಶ್ವಿನಿ ಕಾವ್ಯಾ ಅವರ ಆಟವನ್ನು ಟೀಕಿಸಿದರು. 'ನೀನು ಫ್ರೀ ಪ್ರಾಡಕ್ಟ್' ಎಂದು ಅಶ್ವಿನಿ ಹೇಳಿದ್ದು, 'ಹೋಗೇಲೇ' ಎಂಬ ತಿರುಗೇಟುಗಳೊಂದಿಗೆ ಜಗಳ ಏಕವಚನಕ್ಕೆ ತಿರುಗಿತು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಅಶ್ವಿನಿ ಗೌಡ ಅವರಿಗೆ ಹುಟ್ಟಿಕೊಂಡ ವೈರಿಗಳು ಒಬ್ಬಿಬ್ಬರಲ್ಲ. ಅವರು ಆಡುವ ಮಾತುಗಳು ಕೂಡ ಇದಕ್ಕೆ ಕಾರಣ. ಈಗ ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ವಾಕ್ಸಮರ ನಡೆದಿದೆ. ಒಬ್ಬರಿಗೊಬ್ಬರು ಏಕವಚನದಲ್ಲಿ ಕರೆದುಕೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಈ ಕಿತ್ತಾಟ ನಡೆದಿದೆ. 100 ದಿನಗಳ ಆಟದಲ್ಲಿ ಮಾಡಿದ ತಪ್ಪನ್ನು ಹೇಳಿದ್ದಕ್ಕೆ ಪರಸ್ಪರ ಇಬ್ಬರೂ ಕೋಪಗೊಂಡರು. ಆ ಬಗ್ಗೆ ಇಲ್ಲಿದೆ ವಿವರ.
ನಾಮಿನೇಷನ್ ವೇಳೆ ಮೊದಲು ಕಾವ್ಯಾ ಅವರು ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಸೀಸನ್ ಆರಂಭದಿಂದ ಇಲ್ಲಿಯವರೆಗೆ ಅಶ್ವಿನಿ ಗೌಡ ಮಾಡಿದ ಕೆಟ್ಟ ಕೆಲಸಗಳ ಪಟ್ಟಿಯನ್ನು ಕಾವ್ಯಾ ತೆಗೆದಿಟ್ಟರು. ‘ಬಿಗ್ ಬಾಸ್ ಒಂದು ವ್ಯಕ್ತಿತ್ವದ ಆಟ. ಈ ರೀತಿಯ ವ್ಯಕ್ತಿತ್ವ ಗೆಲ್ಲೋದು ನಂಗೆ ಇಷ್ಟ ಇಲ್ಲ. ಅಶ್ವಿನಿ ಹೊರಗೆ ಹೆಣ್ಣಿನ ಪರ ಹೋರಾಡಿರಬಹುದು. ಆದರೆ, ಇಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅಶ್ವಿನಿ ಗೌಡ 2.O ವರ್ಷನ್ ನಾಟಕ’ ಎಂದು ಕಾವ್ಯಾ ಗೌಡ ಆರೋಪಿಸಿದರು.
ಇದಕ್ಕೆ ಅಶ್ವಿನಿ ಗೌಡ ಕೌಂಟರ್ ಕೊಟ್ಟರು. ‘ಕಾವ್ಯಾ ಇಲ್ಲಿಯವರೆಗೆ ಹೇಗೆ ಬಂದಿದ್ದಾರೆ ಎಂಬುದನ್ನು ಇಡೀ ಕರ್ನಾಟಕ ನೋಡಿದೆ’ ಎಂದರು. ಗಿಲ್ಲಿ ಸಹಾಯದಿಂದ ಕಾವ್ಯಾ ಇಲ್ಲಿಯವರೆಗೆ ಬಂದರು ಎಂಬುದು ಈ ವಾಕ್ಯದ ಒಳಾರ್ಥ. ಆದರೆ, ಇದನ್ನು ಕಾವ್ಯಾ ಒಪ್ಪಿಕೊಳ್ಳಲಿಲ್ಲ.
ಇದನ್ನೂ ಓದಿ: ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ ಆ ಬಳಿಕ ಅಶ್ವಿನಿ ಅವರು ತಮ್ಮ ಸರದಿಯಲ್ಲಿ ಕಾವ್ಯಾ ಅವರನ್ನು ನಾಮಿನೇಟ್ ಮಾಡಿದರು. ಈ ವೇಳೆ ಅಶ್ವಿನಿ ಗೌಡ ಅವರು ಕಾವ್ಯಾ ಬಗ್ಗೆ ಒಂದಷ್ಟು ಆರೋಪಗಳನ್ನು ಮಾಡಿದರು. ಇಬ್ಬರ ಮಧ್ಯೆ ವಾಕ್ಸಮರ ತಾರಕಕ್ಕೆ ಏರಿತು. ನಂತರ ಮಾತು ಏಕವಚನದ ಕಡೆ ತಿರುಗಿತು. ಪರಸ್ಪರ ಅಗೌರವ ನೀಡಿ ಇಬ್ಬರೂ ಮಾತನಾಡಲು ಆರಂಭಿಸಿದರು. ‘ನೀನು ಫ್ರೀ ಪ್ರಾಡಕ್ಟ್’ ಎಂದು ಅಶ್ವಿನಿ ಅವರು ಕಾವ್ಯಾಗೆ ಹೇಳಿದರು. ಆಗ ಕಾವ್ಯಾ ‘ಹೋಗೇಲೆ’ ಎಂದು ಅಶ್ವಿನಿಗೆ ಹೇಳಿದರು. ನೀನು ಹೋಗೆಲೇ ಎಂದು ಅಶ್ವಿನಿ ತಿರುಗೇಟು ಕೊಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




