ಕ್ಯಾಪ್ಟನ್ ಭವ್ಯಾ ಗೌಡ ನಿರ್ಧಾರಗಳಿಗೆ ಹೊತ್ತಿ ಉರಿದ ಮನೆ; ಆಪ್ತೆ ಮೇಲೆ ತ್ರಿವಿಕ್ರಂಗೆ ಮೂಡಿದೆ ಹೊಟ್ಟೆಕಿಚ್ಚು?
ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಅವರು ಎರಡನೇ ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಆದರೆ, ಅವರ ನಿರ್ಧಾರಗಳಿಂದ ಮನೆಯಲ್ಲಿ ವೈಮನಸ್ಸು ಉಂಟಾಗಿದೆ. ಭವ್ಯಾ ಮತ್ತು ತ್ರಿವಿಕ್ರಂ ನಡುವಿನ ಆಪ್ತತೆ ಈಗ ಜಗಳಕ್ಕೆ ತಿರುಗಿದೆ. ತ್ರಿವಿಕ್ರಂ ಅವರು ಭವ್ಯಾ ಅವರ ಕ್ಯಾಪ್ಟನ್‌ಶಿಪ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ನಿರ್ಧಾರಗಳನ್ನು ವಿರೋಧಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಷ್ಟೇ ಆಪ್ತತೆ ಇದ್ದರೂ ವೈಮನಸ್ಸು ಮೂಡಲು ಎಷ್ಟು ಹೊತ್ತು ಕೂಡ ಬೇಕಾಗುವುದಿಲ್ಲ. ಯಾವಾಗ ಯಾರು ಯಾರ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಹೇಳೋಕೆ ಸಾಧ್ಯವೇ ಇಲ್ಲ. ಈಗಲೂ ದೊಡ್ಮನೆಯಲ್ಲಿ ಹಾಗೆಯೇ ಆಗಿದೆ. ಭವ್ಯಾ ಗೌಡ ಅವರು ದೊಡ್ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಕಿಚ್ಚನ ಚಪ್ಪಾಳೆಯೂ ಸಿಕ್ಕಿದೆ. ಇದೆಲ್ಲ ವಿಚಾರ ಮನೆಯವರ ತಲೆಕೆಡಿಸಿದಂತೆ ಇದೆ. ಈ ಕಾರಣಕ್ಕೆ ಭವ್ಯಾ ಗೌಡ ಅವರು ತೆಗೆದುಕೊಂಡ ನಿರ್ಧಾರಗಳಿಂದ ಇಡೀ ಮನೆ ಹೊತ್ತಿ ಉರಿದಿದೆ.
ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ತುಂಬಾನೇ ಆಪ್ತತೆ ಇದೆ. ಶೋ ಆರಂಭ ಆದಾಗಿನಿಂದಲೂ ಇವರು ಒಟ್ಟಿಗೆ ಕಾಣಿಸಿಕೊಳ್ಳುತ್ತಾ ಇದ್ದಾರೆ. ಒಬ್ಬರ ನಿರ್ಧಾರಕ್ಕೆ ಒಬ್ಬರು ಬೆಂಬಲ ಕೊಡುತ್ತಾ ಸಾಗುತ್ತಿದ್ದಾರೆ. ಆದರೆ, ಈಗ ಎಲ್ಲವೂ ಬದಲಾಗಿದೆ. ಯಾವಾಗ ಭವ್ಯಾ ಅವರು ಎರಡನೇ ಬಾರಿ ಕ್ಯಾಪ್ಟನ್ ಆದರೋ ಅವರ ನಿರ್ಧಾರಗಳನ್ನು ತ್ರಿವಿಕ್ರಂ ತಿರಸ್ಕರಿಸುತ್ತಿದ್ದಾರೆ.
ಡಿಸೆಂಬರ್ 23ರ ಎಪಿಸೋಡ್ನಲ್ಲಿ ಭವ್ಯಾ ಗೌಡ ಅವರ ಬಗ್ಗೆ ತ್ರಿವಿಕ್ರಂ ಕಮೆಂಟ್ ಒಂದನ್ನು ಮಾಡಿದ್ದರು. ‘ಭವ್ಯಾ ಚಿಕ್ಕ ಮಗು. ಈ ಕಾರಣಕ್ಕೆ ಅವರಿಗೆ ಖುಷಿ ಆಗಲಿ ಎಂದು ಕ್ಯಾಪ್ಟನ್ ಮಾಡಿದ್ದಾರೆ. ಅವರನ್ನು ಮುಂದಕ್ಕೆ ಮುಂದಕ್ಕೆ ಕಳುಹಿಸಲಾಗುತ್ತಿದೆ’ ಎಂದರು. ಈ ವಿಚಾರ ಭವ್ಯಾ ಸಿಟ್ಟಿಗೆ ಕಾರಣ ಆಗಿದೆ. ಭವ್ಯಾ ಗೌಡ ಅವರು ಈ ಬಾರಿ ತಮ್ಮದೇ ಶ್ರಮದಿಂದ ಕ್ಯಾಪ್ಟನ್ ಆದವರು. ಹೀಗಾಗಿ, ಮಾತಿನ ಮೇಲೆ ನಿಗಾ ಇರಲಿ ಎಂದು ಭವ್ಯಾ ಗೌಡ ಅವರು ತ್ರಿವಿಕ್ರಂಗೆ ಎಚ್ಚರಿಕೆ ನೀಡಿದ್ದಾರೆ.
ಈಗ ಡಿಸೆಂಬರ್ 24ರ ಎಪಿಸೋಡ್ನಲ್ಲಿ ಭವ್ಯಾ ಅವರು ತೆಗೆದುಕೊಂಡ ನಿರ್ಧಾರಕ್ಕೆ ಇಡೀ ಮನೆ ಹೊತ್ತಿ ಉರಿದಿದೆ. ಅನೇಕರು ಭವ್ಯಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭವ್ಯಾ ಗೌಡ ಅವರು ತ್ರಿವಿಕ್ರಂ ಹಾಗೂ ಹನುಮಂತಗೆ ಕಿಚನ್ ಡಿಪಾರ್ಟ್ಮೆಂಟ್ ವಹಿಸಿಕೊಟ್ಟರು. ಆದರೆ, ಈ ವಿಚಾರ ತ್ರಿವಿಕ್ರಂಗೆ ಖುಷಿ ನೀಡಲಿಲ್ಲ. ಈ ಕಾರಣಕ್ಕೆ ಭವ್ಯಾ ಜೊತೆ ತ್ರಿವಿಕ್ರಂ ಮಾತಿಗೆ ಇಳಿದರು.
‘ನನಗೆ ಅಡುಗೆ ಮನೆ ಸೆಟ್ ಆಗಲ್ಲ. ದಯವಿಟ್ಟು ನನಗೆ ಅದನ್ನು ಬಿಟ್ಟು ಬೇರೆ ಏನಾದರೂ ಕೊಡಿ. ನಾನು ಅದನ್ನು ಮಾಡಲ್ಲ. ನನಗೆ ಇಷ್ಟ ಇಲ್ಲದೆ ಇರುವುದನ್ನು ಕೊಟ್ಟರೆ ನಾನು ಅತ್ತ ಸುಳಿಯುವುದೂ ಇಲ್ಲ’ ಎಂಬ ಎಚ್ಚರಿಕೆ ನೀಡಿದರು. ‘ನಾನು ಕ್ಯಾಪ್ಟನ್. ನನಗೆ ಇಷ್ಟ ಬಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಅಡುಗೆ ಮನೆ ಹೊಸದಾಗಿದ್ದರೆ ಅದನ್ನು ಕಲಿಯುವ ಪ್ರಯತ್ನ ಮಾಡಿ’ ಎಂದು ಭವ್ಯಾ ಹೇಳಿದರು.
ಇದನ್ನೂ ಓದಿ: ತ್ರಿವಿಕ್ರಂ ಹೊರ ಹೋಗಿದ್ದಕ್ಕೆ ಕಣ್ಣೀರು ಹಾಕಿದ ಭವ್ಯಾ ಗೌಡ
‘ನನಗೆ ಅಡುಗೆ ಮನೆ ಕೆಲಸಗಳು ಬರುತ್ತವೆ. ಆದರೆ, ಅದನ್ನು ಮಾಡೋಕೆ ಕಷ್ಟ. ಬೇರೆ ಕೆಲಸ ಕೊಡಿ’ ಎಂದು ತ್ರಿವಿಕ್ರಂ ಹೇಳಿದರು. ಹನುಮಂತ ಕೂಡ ತ್ರಿವಿಕ್ರಂ ಜೊತೆ ಧ್ವನಿ ಸೇರಿಸಿದರು. ತ್ರಿವಿಕ್ರಂ ಅವರು ಮಾತು ಮಾತಿಗೆ ಭವ್ಯಾ ಜೊತೆ ಜಗಳ ಆಡುತ್ತಿದ್ದಾರೆ. ಅವರಿಗೆ ಹೊಟ್ಟೆ ಕಿಚ್ಚು ಮೂಡಿದೆಯೇ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.