‘ಬೆಂಗಳೂರಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಬೇಕಾ, ಹಿಂದಿ ಬರುತ್ತೆ ಸಾಕು’ ಎಂದ ಖ್ಯಾತ ಡ್ಯಾನ್ಸರ್​ಗೆ ಜನರಿಂದ ಛಾಟಿ

Salman Yusuff Khan: ಸಲ್ಮಾನ್ ಯೂಸುಫ್ ಖಾನ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಆದರೂ ಅವರಿಗೆ ಕನ್ನಡ ಮಾತನಾಡೋಕೆ ಬರುವುದಿಲ್ಲವಂತೆ. ಈಗ ಅವರು ಕನ್ನಡದ ಬಗ್ಗೆ ಆಡಿದ ಮಾತುಗಳು ನೆಟ್ಟಿಗರಿಗೆ ಕೋಪ ತರಿಸಿದೆ.

‘ಬೆಂಗಳೂರಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಬೇಕಾ, ಹಿಂದಿ ಬರುತ್ತೆ ಸಾಕು’ ಎಂದ ಖ್ಯಾತ ಡ್ಯಾನ್ಸರ್​ಗೆ ಜನರಿಂದ ಛಾಟಿ
ಸಲ್ಮಾನ್ ಯೂಸುಫ್ ಖಾನ್
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Mar 16, 2023 | 12:48 PM

ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಅವರು ತಮ್ಮ ಡ್ಯಾನ್ಸ್ ಮೂಲಕ ಅನೇಕರಿಗೆ ಇಷ್ಟವಾಗುತ್ತಾರೆ. ಅವರು ಡ್ಯಾನ್ಸ್ ರಿಯಾಲಿಟಿ ಶೋ ಗೆದ್ದಿದ್ದಾರೆ. ನೃತ್ಯಕ್ಕೆ ಸಂಬಂಧಿಸಿದ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಆದರೂ ಅವರಿಗೆ ಕನ್ನಡ ಮಾತನಾಡೋಕೆ ಬರುವುದಿಲ್ಲವಂತೆ. ಈಗ ಅವರು ಕನ್ನಡದ ಬಗ್ಗೆ ಆಡಿದ ಮಾತುಗಳು ನೆಟ್ಟಿಗರಿಗೆ ಕೋಪ ತರಿಸಿದೆ. ಅವರು ಹಂಚಿಕೊಂಡಿರುವ ವಿಡಿಯೋಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಇತ್ತೀಚೆಗೆ ಸಲ್ಮಾನ್ ಯೂಸುಫ್ ಖಾನ್ ಅವರು ದುಬೈಗೆ ಹೊರಟಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ಆಗಿದೆ ಎಂದು ಅವರು ಲೈವ್​ ಬಂದು ಹೇಳಿಕೊಂಡಿದ್ದಾರೆ. ಸಲ್ಮಾನ್ ಯೂಸುಫ್​ ಖಾನ್​ಗೆ ಕನ್ನಡ ಬರುವುದಿಲ್ಲ ಎಂಬ ಕಾರಣಕ್ಕೆ ವಿಮಾನ ನಿಲ್ದಾಣದ ಅಧಿಕಾರಿ ಅವರನ್ನು ಪ್ರಶ್ನೆ ಮಾಡಿದರಂತೆ. ಈ ಕೋಪದಲ್ಲಿ ಮಾತನಾಡುತ್ತಾ ‘ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಮಾತನಾಡುವುದು ಕಡ್ಡಾಯವೇ’ ಎನ್ನುವ ಪ್ರಶ್ನೆಯನ್ನು ಸಲ್ಮಾನ್ ಯೂಸುಫ್ ಖಾನ್ ​ ಕೇಳಿದ್ದಾರೆ. ಇದಕ್ಕೆ ಅನೇಕರು ಕೆಂಡಕಾರಿದ್ದಾರೆ.

‘ನಾನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದೇನೆ. ಇಮಿಗ್ರೇಷನ್ ಪ್ರಕ್ರಿಯೆ ಮುಗಿಸಿದೆ. ಇಮಿಗ್ರೇಷನ್ ಅಧಿಕಾರಿ ಎಲ್ಲಿಗೆ ಹೊರಟಿದ್ದೀರಿ ಎಂದು ಕೇಳಿದರು. ನಾನು ದುಬೈ ಅಂದೆ. ಅವರು ಕನ್ನಡದಲ್ಲಿ ಮಾತನಾಡೋಕೆ ಶುರು ಮಾಡಿದರು. ನನಗೆ ಕನ್ನಡ ಬರಲ್ಲ ಎಂದೆ. ಇದಕ್ಕೆ ಆ ಅಧಿಕಾರಿ ನೀವು, ನಿಮ್ಮ ತಂದೆ ಬೆಂಗಳೂರಿನಲ್ಲೇ ಹುಟ್ಟಿರೋದು. ಹಾಗಿದ್ರೂ ಕನ್ನಡ ಬರಲ್ಲ ಅಂತೀರಲ್ಲ ಎಂದು ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿ ಇದ್ದುಕೊಂಡು ಕನ್ನಡ ಬರಲ್ಲ ಎಂದರೆ ಅನುಮಾನ ವ್ಯಕ್ತಪಡಿಸಬಹುದು ಎಂದರು. ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರೋದು ಕಡ್ಡಾಯವೇ? ಬೆಂಗಳೂರಲ್ಲಿ ಹುಟ್ಟಿ ನಾವು ವಿಶ್ವದ ಯಾವ ಮೂಲೆಗೆ ಬೇಕಿದ್ದರೂ ಪ್ರಯಾಣ ಮಾಡಬಹುದು. ನಾನು ಶಿಕ್ಷಣ ಕಲಿತಿದ್ದು ಸೌದಿಯಲ್ಲಿ. ಹಿಂದಿ ಬಂದ್ರೆ ಸಾಕಾಗಲ್ವಾ? ಪ್ರಧಾನಿ ನರೇಂದ್ರ ಮೋದಿಗೆ ಕನ್ನಡ ಬರುತ್ತದೆಯೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗನಾಗಿ ಕನ್ನಡ ಗೊತ್ತಿಲ್ವ ಎಂದ ಅಧಿಕಾರಿಯನ್ನು ನಿಂದಿಸಿದ ನಟ

‘ಕನ್ನಡ ಕಲಿಯೋಕೆ ಯೋಗ್ಯತೆ ಬೇಕು. ಅದು ನಿಮಿಗಿಲ್ಲ ಬಿಡಿ. ಕನ್ನಡದಲ್ಲೇ ಮಾತನಾಡಿದ ಅಧಿಕಾರಿಗೆ ನನ್ನ ಸಲಾಂ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಕನ್ನಡ ಬರಲ್ಲ ಅಂದ್ರೆ ಇಲ್ಲೇಕೆ ಬಂದ್ರಿ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಆ ಅಧಿಕಾರಿಯ ಹೆಸರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 2017ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ‘ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್​​’ಗೆ ಅವರು ಜಡ್ಜ್ ಆಗಿದ್ದರು. ಇದಲ್ಲದೆ, ಹಲವು ಹಿಂದಿ ರಿಯಾಲಿಟಿ ಶೋನಲ್ಲಿ ಅವರು ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Thu, 16 March 23