
ಕಿರುತೆರೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ‘ಬಿಗ್ ಬಾಸ್’ (Bigg Boss) ಶೋ ಹಲವು ಭಾಷೆಯಲ್ಲಿ ಜನಪ್ರಿಯವಾಗಿದೆ. ಹಿಂದಿಯಲ್ಲಿ 18 ಸೀಸನ್ಗಳು ಯಶಸ್ವಿಯಾಗಿ ಮುಗಿದಿದ್ದು, 19ನೇ ಸೀಸನ್ ನೋಡಲು ಪ್ರೇಕ್ಷಕರು ಕಾದಿದ್ದಾರೆ. ಈ ಬಾರಿ ಕೂಡ ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡಲಿದ್ದಾರೆ. ಕೆಲವೇ ದಿನಗಳ ಹಿಂದೆ ಹೊಸ ಲೋಗೋ ಬಿಡುಗಡೆ ಮಾಡಲಾಗಿತ್ತು. ಈಗ ಪ್ರೋಮೋ ರಿಲೀಸ್ ಆಗಿದೆ. ಅಲ್ಲದೇ, ‘ಬಿಗ್ ಬಾಸ್ 19’ (Bigg Boss 19) ಪ್ರೀಮಿಯರ್ ದಿನಾಂಕವನ್ನೂ ತಿಳಿಸಲಾಗಿದೆ. ಆಗಸ್ಟ್ 24ರಂದು ಅದ್ದೂರಿಯಾಗಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಶುರು ಆಗಲಿದೆ.
ಈ ಬಾರಿ ಬಿಗ್ ಬಾಸ್ ಕೊಂಚ ಡಿಫರೆಂಟ್ ಆಗಿರಲಿದೆ. ಪ್ರತಿ ಬಾರಿಯಂತೆ ಈ ಸಲ ಕೂಡ ಕೆಲವು ಪ್ರಯೋಗಳನ್ನು ಮಾಡಲು ತೀರ್ಮಾನಿಸಲಾಗಿದೆಯಂತೆ. ವರದಿಗಳ ಪ್ರಕಾರ, ಬಿಗ್ ಬಾಸ್ 19ನೇ ಸೀಸನ್ ಬರೋಬ್ಬರಿ ಐದೂವರೆ ತಿಂಗಳು ನಡೆಯಲಿದೆ. ಇಷ್ಟು ವರ್ಷ ಕೇವಲ ಮೂರು ಅಥವಾ ಮೂರುವರೆ ತಿಂಗಳು ನಡೆಯುತ್ತಿತ್ತು. ಈ ಬಾರಿ ವೀಕ್ಷಕರಿಗೆ ಹೆಚ್ಚುವರಿ ಮನರಂಜನೆ ಸಿಗುವ ಸಾಧ್ಯತೆ ಇದೆ.
ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿಗೆ ಬಿಗ್ ಬಾಸ್ ಆಫರ್ ನೀಡಲಾಗಿದೆ. ಆ ಪೈಕಿ ಯಾರಿಗೆ ದೊಡ್ಮನೆ ಪ್ರವೇಶಿಸುವ ಚಾನ್ಸ್ ಸಿಗಲಿ ಎಂಬುದನ್ನು ತಿಳಿಯಲು ವೀಕ್ಷಕರಿಗೆ ಸಖತ್ ಕುತೂಹಲ ಇದೆ. ಬಿಗ್ ಬಾಸ್ 19ನೇ ಸೀಸನ್ ಆರಂಭಕ್ಕೆ ಒಂದು ತಿಂಗಳು ಕೂಡ ಬಾಕಿ ಇಲ್ಲ. ಸಲ್ಮಾನ್ ಖಾನ್ ಅವರು ಕಾಣಿಸಿಕೊಂಡಿರುವ ಪ್ರೋಮೋ ನೋಡಿದ ಮೇಲೆ ಫ್ಯಾನ್ಸ್ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ.
ಸಲ್ಮಾನ್ ಖಾನ್ ಅವರು ಸಿನಿಮಾ ಮತ್ತು ಬಿಗ್ ಬಾಸ್ ಎರಡನ್ನೂ ನಿಭಾಯಿಸಬೇಕಿದೆ. 5 ತಿಂಗಳು ಬಿಗ್ ಬಾಸ್ ನಡೆದರೆ ಎಲ್ಲ ವಾರ ಅವರೇ ನಿರೂಪಣೆ ಮಾಡುವುದು ಕಷ್ಟ. ಸಿನಿಮಾ ಶೂಟಿಂಗ್ ಇದ್ದಾಗ ಬೇರೆ ನಟರು ಬಿಗ್ ಬಾಸ್ ನಡೆಸಿಕೊಡಬೇಕಾಗಬಹುದು. ಆ ಜವಾಬ್ದಾರಿ ನಿಭಾಯಿಸಲು ಕೆಲವು ಸೆಲೆಬ್ರಿಟಿಗಳ ಜೊತೆ ಮಾತುಕಥೆ ನಡೆಯುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡೋದು ಒಬ್ಬರಲ್ಲ, ಮೂವರು ಸೆಲೆಬ್ರಿಟಿಗಳು
ಹೊಸ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅವರು ರಾಜಕಾರಣಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಬಾರಿ ಮನೆಯವರ ಸರ್ಕಾರ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಹೊಸ ಸೀಸನ್ನ ಥೀಮ್ ಏನು ಎಂಬುದರ ಸುಳಿವನ್ನು ಅವರು ನೀಡಿದ್ದಾರೆ. ‘ಜಿಯೋ ಹಾಟ್ ಸ್ಟಾರ್’ ಮತ್ತು ‘ಕಲರ್ಸ್’ ವಾಹಿನಿಯಲ್ಲಿ ಬಿಗ್ ಬಾಸ್ 19ನೇ ಸೀಸನ್ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.