ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ಗೆ ಮದುವೆ; ಹುಡುಗಿ ಹಿನ್ನೆಲೆ ಏನು?
ಶಶಿಕುಮಾರ್ ಅವರನ್ನು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಸ್ವಾತಿ. ಇದು ಲವ್ ಮ್ಯಾರೇಜ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹೇಳಿದ್ದರು. ಇದಕ್ಕೆ ಶಶಿಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 6’ನ (BBK 6) ವಿನ್ನರ್ ಆಗಿ ಹೊರ ಹೊಮ್ಮಿದವರು ಶಶಿಕುಮಾರ್ (Shashi Kumar). ವಿಭಿನ್ನ ವ್ಯಕ್ತಿತ್ವದ ಮೂಲಕ ಅವರು ಗಮನ ಸೆಳೆದರು. ಬಿಗ್ ಬಾಸ್ ಗೆದ್ದ ಬಳಿಕ ಶಶಿಕುಮಾರ್ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಕೆಲವು ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಈಗ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಆಗುತ್ತಿದೆ. ಶೀಘ್ರವೇ ಶಶಿಕುಮಾರ್ ಅವರ ಮದುವೆ ನೆರವೇರಲಿದೆ. ಆಗಸ್ಟ್ 6 ಹಾಗೂ 7ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಲಿದೆ.
ಶಶಿಕುಮಾರ್ ಮದುವೆ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ವರದಿ ಬಿತ್ತರ ಮಾಡಿದೆ. ಶಶಿಕುಮಾರ್ ಅವರನ್ನು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಸ್ವಾತಿ. ಇತ್ತೀಚೆಗೆ ಇವರ ನಿಶ್ಚಿತಾರ್ಥ ನೆರವೇರಿತ್ತು. ಇದು ಲವ್ ಮ್ಯಾರೇಜ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹೇಳಿದ್ದರು. ಇದಕ್ಕೆ ಶಶಿಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
‘ಇದು ಅರೇಂಜ್ ಮ್ಯಾರೇಜ್. ಎರಡೂ ಕುಟುಂಬದವರು ಒಪ್ಪಿ ಈ ಮದುವೆ ಮಾಡುತ್ತಿದ್ದಾರೆ. ಮದುವೆ ಅದ್ದೂರಿಯಾಗಿ ನಡೆಯಲಿದೆ. ಮದುವೆಗೂ ಮೊದಲು ರಿಸೆಪ್ಶನ್ ಇರುತ್ತದೆ. ಕುಟುಂಬದವರು ಹಾಗೂ ಆಪ್ತರು ಇದರಲ್ಲಿ ಭಾಗಿಯಾಗಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ ಶಶಿಕುಮಾರ್.
ಸೆಲೆಬ್ರಿಟಿಗಳು ತಮ್ಮದೇ ಕ್ಷೇತ್ರದವರನ್ನು ಮದುವೆ ಆಗಲು ಇಷ್ಟಪಡುತ್ತಾರೆ. ಈ ರೀತಿ ವಿವಾಹ ಆದ ಸಾಕಷ್ಟು ಉದಾಹರಣೆ ಇದೆ. ಆದರೆ, ಶಶಿಕುಮಾರ್ ಅವರು ಬೇರೆ ಕ್ಷೇತ್ರದವರನ್ನು ಕೈ ಹಿಡಿಯುತ್ತಿದ್ದಾರೆ. ಸ್ವಾತಿ ಇಂಜಿನಿಯರಿಂಗ್ ಪದವೀಧರೆ. ಅವರ ಕುಟುಂಬದವರು ಅಗ್ರಿ ಬಿಸ್ನೆಸ್ನಲ್ಲಿದ್ದಾರೆ ಅನ್ನೋದು ವಿಶೇಷ.
‘ಸ್ವಾತಿ ಕುಟುಂಬದವರು ದೊಡ್ಡಬಳ್ಳಾಪುರದಲ್ಲಿದ್ದಾರೆ. ಅವರದ್ದು ಕೃಷಿಗೆ ಸಂಬಂಧಿಸಿದ ಉದ್ಯಮ ಇದೆ. ನಾನು ಕೂಡ ನನ್ನ ಕೃಷಿ ಉದ್ಯಮವನ್ನು ವಿಸ್ತಾರ ಮಾಡುವ ಆಲೋಚನೆಯಲ್ಲಿ ಇದ್ದೇನೆ. ಸ್ವಾತಿ ಕೂಡ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹಾಗೂ ಜ್ಞಾನ ಹೊಂದಿದ್ದಾರೆ’ ಎಂದು ಶಶಿ ಹೇಳಿದ್ದಾರೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಹೊಸ ಫೋಟೋ ನೋಡಿ ಕಣ್ಣರಳಿಸಿದ ಪಡ್ಡೆಗಳು
ಶಶಿ ಅವರು ‘ಶುಗರ್ ಫ್ಯಾಕ್ಟರಿ’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಉದ್ಯಮದ ಜತೆ ನಟನೆಯನ್ನೂ ಮುಂದುವರಿಸುವ ಆಲೋಚನೆ ಇದೆ. ‘ನಿರ್ದೇಶಕರು, ನಿರ್ಮಾಪಕರು ನನ್ನನ್ನು ಭೇಟಿ ಮಾಡಲು ಬಂದಾಗ ನಾನು ಉದ್ಯಮದಲ್ಲಿ ಬ್ಯುಸಿ ಆಗಿರುತ್ತಿದ್ದೆ. ನಟನಾಗಿ ನಾನು ಮುಂದುವರಿಯಬೇಕಿದೆ. ಭವಿಷ್ಯದಲ್ಲಿ ಸ್ವಾತಿ ಕೂಡ ಉದ್ಯಮವನ್ನು ನೋಡಿಕೊಳ್ಳುತ್ತಾರೆ’ ಎಂದಿದ್ದಾರೆ ಅವರು.