Sanya Iyer: ‘ನಾನು ಮದ್ಯಪಾನ ಮಾಡಿರಲಿಲ್ಲ’: ಕಂಬಳ ಗಲಾಟೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಐಯ್ಯರ್ ಸ್ಪಷ್ಟನೆ
Sanya Iyer | Kambala Controversy: ಕಂಬಳಕ್ಕೆ ಬರುವಾಗ ಸಾನ್ಯಾ ಐಯ್ಯರ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿದ್ದರು ಎಂಬ ಆರೋಪ ಎದುರಾಗಿದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಕಿರುತೆರೆ ನಟಿ ಸಾನ್ಯಾ ಐಯ್ಯರ್ ಅವರು ವಿವಾದದಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಕಂಬಳ (Kambala) ವೀಕ್ಷಿಸಲು ಅವರು ತೆರಳಿದ್ದಾಗ ಯುವಕನೊಬ್ಬನ ಜೊತೆ ಜಗಳ ಆಗಿದೆ. ಆ ಗಲಾಟೆ ಕುರಿತು ಹಲವಾರು ಸುದ್ದಿಗಳು ಹಬ್ಬಿವೆ. ಅವುಗಳ ಕುರಿತು ಸ್ಪಷ್ಟನೆ ನೀಡಲು ಸಾನ್ಯಾ ಐಯ್ಯರ್ ಅವರು ಇಂದು (ಜ.31) ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ನಾವು ಕಂಬಳ ನೋಡಲು ಪುತ್ತೂರಿಗೆ ಹೋಗಿದ್ವಿ. ನನ್ನನ್ನು ಅತಿಥಿಯಾಗಿ ಕರೆದಿದ್ದರು. ಆ ಸಾಂಸ್ಕೃತಿಕ ಕ್ರೀಡೆಯನ್ನು ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ. ಮತ್ತೆ ಸ್ನೇಹಿತೆಯರ ಜೊತೆ ಕಂಬಳ ನೋಡಲು ಬಂದೆ. ಆಗ ನಶೆಯಲ್ಲಿ ಇದ್ದ ಓರ್ವ ಯುವಕ ಕಿರುಕುಳ ನೀಡಲು ಪ್ರಯತ್ನಿಸಿದ. ಆಗ ನಾವು ಜೋರಾಗಿ ಕಿರುಚಿಕೊಂಡೆವು’ ಎಂದು ಸಾನ್ಯಾ ಅಯ್ಯರ್ (Sanya Iyer) ಹೇಳಿದ್ದಾರೆ.
‘ಆ ಹುಡುಗ ಯಾರು? ಅವರ ಹೆಸರು ಏನು ಎಂಬುದು ಕೂಡ ನಮಗೆ ತಿಳಿದಿಲ್ಲ. ಬಂದು ಮೈಮೇಲೆ ಬಿದ್ದ. ನಾವು ಕಿರುಚಿದ್ದಕ್ಕೆ ಜನರು ಸೇರಿದರು. ಆಗ ಅವನು ಎಸ್ಕೇಪ್ ಆದ. ನಮ್ಮ ಕೈಗೆ ಸಿಗಲಿಲ್ಲ. ನಾವು ಬರುತ್ತೇವೆ ಎಂಬುದನ್ನು ಮುಖ್ಯ ಆಯೋಜಕರಿಗೆ ನಾವು ತಿಳಿಸಿರಲಿಲ್ಲ. ಒಂದು ವೇಳೆ ತಿಳಿಸಿದ್ದರೆ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದರು. ಈ ಘಟನೆ ಆದ ಬಳಿಕ ಅವರಿಗೆ ವಿಷಯ ತಿಳಿಯಿತು. ಆಮೇಲೆ ಅವರು ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವೇದಿಕೆ ಮೇಲೆ ಕೂರಿಸಿದರು’ ಎಂದು ಸಾನ್ಯಾ ಐಯ್ಯರ್ ಹೇಳಿದ್ದಾರೆ.
ಇದನ್ನೂ ಓದಿ: Sanya Iyer ‘ಹೆಣ್ಮಕ್ಳ ಮುಟ್ಟಿದ್ರೆ ಸರಿ ಇರಲ್ಲ’; ಕಪಾಳ ಮೋಕ್ಷದ ಬಳಿಕ ಸಾನ್ಯಾ ಐಯ್ಯರ್ ತರಾಟೆ
ಕಂಬಳಕ್ಕೆ ಬರುವಾಗ ಸಾನ್ಯಾ ಐಯ್ಯರ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿದ್ದರು ಎಂಬ ಆರೋಪ ಎದುರಾಗಿದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿಲ್ಲ. ಬಾಂಬೆಯಲ್ಲಿ ನನ್ನ ಶೂಟಿಂಗ್ ಇದೆ. ಅದಕ್ಕಾಗಿ ನಾನು ಜೀರೋ ಶುಗರ್ ಡಯೆಟ್ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ನಾನು ರುದ್ರಾಕ್ಷಿ ಧರಿಸಿದ್ದೇನೆ. ಹಾಗಾಗಿ ಮದ್ಯಪಾನ, ಧೂಮಪಾನ ಮಾಡಲ್ಲ. ನಾವು ಹೋಗಿದ್ದು ಪವಿತ್ರವಾದ ಸ್ಥಳಕ್ಕೆ. ಅಲ್ಲಿ ದೇವಸ್ಥಾನಗಳು ಇವೆ. ಅಲ್ಲಿ ಎಂಜಾಯ್ ಮಾಡೋಕೆ ನಾವು ಹೋಗಿರಲಿಲ್ಲ’ ಎಂದು ಸಾನ್ಯಾ ಐಯ್ಯರ್ ಹೇಳಿದ್ದಾರೆ.
ಕಿರುತೆರೆಯ ಧಾರಾವಾಹಿಗಳ ಮೂಲಕ ಸಾನ್ಯಾ ಐಯ್ಯರ್ ಅವರು ಮನೆಮಾತಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Tue, 31 January 23