‘ಅಪ್ರತಿಮ ಮನರಂಜನೆ ನೀಡಿರುವ ಧ್ರುವಂತ್’: ಮತ್ತೆ ಈ ಸ್ಪರ್ಧಿಗೆ ಪಟ್ಟ ಕಟ್ಟಿದ ಬಿಗ್ ಬಾಸ್
ಈ ಮೊದಲು ಧ್ರುವಂತ್ ಅವರಿಗೆ ಇಡೀ ಸೀಸನ್ನ ಕಿಚ್ಚನ ಚಪ್ಪಾಳೆ ನೀಡಲಾಗಿತ್ತು. ಈಗ ‘ಅಪ್ರತಿಮ ಮನರಂಜನೆ ನೀಡಿದ ಸ್ಪರ್ಧಿ‘ ಎನ್ನಲಾಗಿದೆ. ಅಭಿಮಾನಿಗಳು ಬಿಗ್ ಬಾಸ್ ಮನೆಗೆ ಬಂದು ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಧ್ರುವಂತ್ ಅವರನ್ನು ಹೊಗಳಲಾಗಿದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಕೊನೆಯ ಹಂತವನ್ನು ತಲುಪಿದೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.

‘ಬಿಗ್ ಬಾಸ್ ಕನ್ನಡ ಸೀನಸ್ 12’ (BBK 12) ಶೋನಲ್ಲಿ ಅತಿ ಹೆಚ್ಚು ಮನರಂಜನೆ ನೀಡಿದ್ದು ಯಾರು ಎಂಬ ಪ್ರಶ್ನೆಗೆ ಬಹುತೇಕರು ಗಿಲ್ಲಿ ನಟ ಅವರ ಹೆಸರನ್ನು ಹೇಳುತ್ತಾರೆ. ಅವರ ಜೊತೆ ಇನ್ನುಳಿದ ಸ್ಪರ್ಧಿಗಳು ಕೂಡ ಫಿನಾಲೆ ವಾರದ ತನಕ ಪೈಪೋಟಿ ನೀಡಿಕೊಂಡು ಬಂದಿದ್ದಾರೆ. ಧ್ರುವಂತ್ (Dhruvanth) ಅವರಿಗೆ ಇಡೀ ಸೀಸನ್ನಿನ ಚಪ್ಪಾಳೆ ನೀಡಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಯಿತು. ಈಗ ಬಿಗ್ ಬಾಸ್ ಮನೆಯಲ್ಲಿ ಫ್ಯಾನ್ಸ್ ಮೀಟ್ ನಡೆಯುತ್ತಿದೆ. ಈ ವೇಳೆ ಫಿನಾಲೆ (Bigg Boss Kannada Finale) ವಾರದ ಎಲ್ಲ ಸ್ಪರ್ಧಿಗಳ ಬಗ್ಗೆ ಬಿಗ್ ಬಾಸ್ ವಿವರಣೆ ನೀಡಿದ್ದಾರೆ. ಈ ವೇಳೆ ಧ್ರುವಂತ್ ಅವರನ್ನು ‘ಅಪ್ರತಿಮ ಮನರಂಜನೆ ನೀಡಿದ ಸ್ಪರ್ಧಿ’ ಎಂದು ಹೇಳಲಾಗಿದೆ.
ಇತ್ತೀಚಿನ ಸಂಚಿಕೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕೆಲವು ವೀಕ್ಷಕರು ದೊಡ್ಮನೆಯೊಳಗೆ ಎಂಟ್ರಿ ಪಡೆದರು. ಪ್ರತಿ ಸ್ಪರ್ಧಿ ಬಂದಾಗ ಅವರ ವ್ಯಕ್ತಿತ್ವನ್ನು ಸ್ವತಃ ಬಿಗ್ ಬಾಸ್ ವಿವರಿಸಿದರು. ಧ್ರುವಂತ್ ಬಗ್ಗೆ ಈ ರೀತಿ ಹೇಳಲಾಯಿತು. ‘ಬಿಗ್ ಬಾಸ್ ಮನೆಯನ್ನು ಬಿಗ್ ಬಾಸ್ ಮನೆ ಎನ್ನದೇ ತನ್ನ ಮನೆಯೇ ಎಂದು ಭಾವಿಸಿದ, ಪೂಜಿಸಿದ, ಸಂಭ್ರಮಿಸಿದ ಹಾಗೂ ಜೀವಿಸಿದ ಏಕೈಕ ಸ್ಪರ್ಧಿ ಧ್ರುವಂತ್. ಪ್ರಯಾಣಿಕರು ತಮ್ಮ ದಿಕ್ಕು ದೆಸೆಗಾಗಿ ಆಗಸದಲ್ಲಿ ತಲೆ ಎತ್ತಿ ನೋಡುವ ತಾರೆ, ಧ್ರುವ ತಾರೆ. ಆ ಹೆಸರನ್ನೇ ತನ್ನದಾಗಿಸಿಕೊಂಡಿರುವ ಧ್ರುವಂತ್. ದೂರದಿಂದ ಮಿನುಗುವ ತಾರೆಯೂ ಹೌದು, ಹತ್ತಿರದಿಂದ ಕಂಡಾಗ ಉರಿಯುವ ಜ್ವಾಲೆಯೂ ಹೌದು’ ಎಂದರು ಬಿಗ್ ಬಾಸ್.
‘ಆರಂಭದಿಂದ ಈವರೆಗೂ ಒಂಟಿಯಾಗಿಯೇ ಬಂದು, ಒಂಟಿಯಾಗಿಯೇ ಆಡಿ, ಒಂಟಿಯಾಗಿಯೇ ಹೋರಾಡಿ, ಒಂಟಿಯಾಗಿ ಜೀವಿಸಿ, ಅಪ್ರತಿಮ ಮನರಂಜನೆ ಹಾಗೂ ಅದ್ವಿತೀಯ ಉದಾಹರಣೆಯನ್ನು ನೀಡಿದ ಬಿಗ್ ಬಾಸ್ ಸ್ಪರ್ಧಿ ಈ ಧ್ರುವಂತ್. ಈ ಸೀಸನ್ನಲ್ಲಿ ವಿಲನ್ ಆರ್ಭಟದ ನಡುವೆ ಕಣ್ಮರೆ ಆಗಿದ್ದ ಬಿಗ್ ಬಾಸ್ ಅನ್ನು ತಾನು ಹುಡುಕಿ ಕರೆತರುವುದಾಗಿ ಪಣತೊಟ್ಟು ನಿಂತವ, ತನ್ನನ್ನು ತಾನು ಕಂಡುಕೊಂಡು ಈ ಮನೆಯಲ್ಲಿ ಆತ್ಮಾಣ್ವೇಷಣೆಯ ವ್ಯಾಖ್ಯಾನವನ್ನೇ ಬದಲಿಸಿದ ನಿಸ್ಸೀಮ ಈ ಧ್ರುವಂತ್’ ಎಂದು ಬಿಗ್ ಬಾಸ್ ಹೊಗಳಿದರು.
ಈ ಮಾತುಗಳನ್ನು ಕೇಳಿ ಧ್ರುವಂತ್ ಹಾಗೂ ಅವರ ಅಭಿಮಾನಿಗಳಿಗೆ ಖುಷಿ ಆಯಿತು. ಧ್ರುವಂತ್ ಅವರು ಎಮೋಷನಲ್ ಆಗಿ ಕಣ್ಣೀರು ಹಾಕಿದರು. ಆ ಬಳಿಕ ತಮ್ಮ ಬಗ್ಗೆ ಮಾತನಾಡಿದರು. ‘ಇಷ್ಟು ಪ್ರೀತಿ ಕೊಟ್ಟಿದ್ದಕ್ಕೆ, ನನ್ನ 30 ವರ್ಷಗಳ ಕನಸನ್ನು ನನಸು ಮಾಡಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು. ಮಲ್ಲಮ್ಮ ನನ್ನನ್ನು ಬಿಟ್ಟು ಹೋದ ಬಳಿಕ ನನ್ನ ಜೊತೆ ಇದ್ದಿದ್ದು ದೇವರು ಮತ್ತು ನೀವು (ಅಭಿಮಾನಿಗಳು) ಮಾತ್ರ’ ಎಂದು ಧ್ರುವಂತ್ ಹೇಳಿದರು.
ಇದನ್ನೂ ಓದಿ: ಧ್ರುವಂತ್ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್
‘ಈ ಮನೆಯಲ್ಲಿ ಎಲ್ಲರೂ ನನ್ನನ್ನು ತಳ್ಳೋದಕ್ಕೆ ಕಾಯುತ್ತಿದ್ದರು. ಆದರೆ ವಾರಾಂತ್ಯ ಬಂದಾಗ ನೀವು ಹಾಗೆಯೇ ನನ್ನನ್ನು ಮನೆ ಒಳಗೆ ವಾಪಸ್ ಕಳಿಸುತ್ತಿದ್ರಿ. ನಾನು ರಾಜಿ ಆಗಿಲ್ಲ. ನಾನು ಒಬ್ಬನೇ ಎಲ್ಲರನ್ನೂ ಅಟ್ಟಾಡಿಸಿದ್ದೇನೆ. ಜೊತೆಗೆ ಇದ್ದವರನ್ನು ಕೂಡ ಬೆಂಬಲಿಸಿದ್ದೇನೆ. ಯಾರೇ ಮಾಡಿದರೇ ತಪ್ಪನ್ನು ಖಂಡಿಸಿದ್ದೇನೆ. ನನಗೆ ಇಡೀ ಸೀಸನ್ನ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇದು ಒನ್ ಮ್ಯಾನ್ ಶೋ’ ಎಂದು ಧ್ರುವಂತ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




