
ಬಿಗ್ಬಾಸ್ ಶೋನಲ್ಲಿ ಎರಡನೇ ವಾರ ಸಾಕಷ್ಟು ಡ್ರಾಮಾ ನಡೆದಿದೆ. ವಾರದ ಅಂತ್ಯಕ್ಕೆ ಬರುವ ಮುನ್ನವೇ ಮನೆಯಲ್ಲಿ ಸಾಕಷ್ಟು ಜಗಳ, ಬೈಗುಳ, ಕಿತ್ತಾಟ, ಪರಸ್ಪರ ನಿಂದನೆ, ದೂರು-ಪ್ರತಿದೂರು, ಕಣ್ಣೀರು ಎಲ್ಲವೂ ನಡೆದಿದೆ. ಅದರಲ್ಲೂ ಸಾಮಾನ್ಯರ ಖೋಟಾದಿಂದ ಒಳಗೆ ಹೋಗಿರುವವರು ಮನೆಯ ಇತರ ಸದಸ್ಯರ ನೆಮ್ಮದಿ ಹಾಳುಮಾಡಿದ್ದಾರೆ. ವಿಶೇಷವಾಗಿ ಮಂಜ ಮತ್ತು ಶಾಸ್ತ್ರಿ ಬಿಗ್ಬಾಸ್ ನಿಯಮಗಳನ್ನು ಗಾಳಿಗೆ ತೂರುತ್ತಾ, ವಿತಂಡ ವಾದ ಮಾಡುತ್ತಾ, ನಿಂದನೆ, ಟೀಕೆಗಳನ್ನು ಮಾಡುತ್ತಾ ಇತರ ಸ್ಪರ್ಧಿಗಳಿಗೆ ಕಿರಿ-ಕಿರಿ ಉಂಟು ಮಾಡುತ್ತಿದ್ದಾರೆ.
ಗುರುವಾರದ ಎಪಿಸೋಡ್ನಲ್ಲಿ ಕಿಚನ್ ವಿಷಯದಲ್ಲಿ ಮಹಾಕವಿ ಮಂಜ ಮತ್ತು ಅವಿನಾಶ್ ಅವರ ನಡುವೆ ಜಗಳ ಆಗಿತ್ತು. ಬೇರೆಯವರಿಗೆ ಸೇರಿದ ಕೆಲ ವಸ್ತುಗಳನ್ನು ಮಂಜ, ಲಿಖಿತ್ ಇನ್ನೂ ಕೆಲವರು ತಿಂದಿದ್ದರು. ಇದು ಜಗಳಕ್ಕೆ ಕಾರಣವಾಯ್ತು. ಈ ವೇಳೆ ಮಂಜ ಮತ್ತು ಅವಿನಾಶ್ ನಡುವೆ ಜಗಳ ದೊಡ್ಡದಾಗಿಯೇ ನಡೆಯಿತು. ಯಾವ ಮಟ್ಟಿಗೆಂದರೆ ಅವಿನಾಶ್ ಅವರು ತಾಳ್ಮೆ ಕಳೆದುಕೊಂಡು ಮಂಜನಿಗೆ ಹೊಡೆಯುವುದಾಗಿ ನೇರವಾಗಿ ಹೇಳಿದರು. ಮಂಜನೂ ಸಹ ಅದಕ್ಕೆ ರೌಡಿ ರೀತಿಯ ಪ್ರತಿಕ್ರಿಯೆಯನ್ನೇ ನೀಡಿದ.
ಬಳಿಕ ಅವಿನಾಶ್ ಅವರು ತಾಳ್ಮೆ ಕಳೆದುಕೊಂಡು ಬಾಟೆಲ್ ಒಡೆದು ಹಾಕಿದರು. ಬಳಿಕ ಇಂಥಹವರ ಜೊತೆ ನಾನಿರುವುದಿಲ್ಲ ಎಂದು ಹೇಳಿ ಸೂಟ್ಕೇಸ್ ಪ್ಯಾಕ್ ಮಾಡಿ ಹೊರಡಲು ರೆಡಿಯಾದರು. ಸೀಕ್ರೆಟ್ ರೂಂಗೆ ಹೋಗಿ, ತಮ್ಮನ್ನು ಹೊರಗೆ ಕಳಿಸುವಂತೆ ಬಿಗ್ಬಾಸ್ ಬಳಿ ಕೇಳಿ ಕೊಂಡರು. ‘ನೀವು ನನ್ನನ್ನು ವಾಪಸ್ ಮನೆಯ ಒಳಗೆ ಕಳಿಸಿದರೆ ನಾನು ಖಂಡಿತ ಮಂಜನನ್ನು ಹೊಡೆದು ಹೊರಗೆ ಹೋಗುತ್ತೇನೆ’ ಎಂದರು. ಬಹಳ ಬೇಸರದಲ್ಲಿದ್ದ ಅವಿನಾಶ್, ‘ಇವರಂಥ ಹೀನಾಯ ಮನಸ್ಸಿನ ವ್ಯಕ್ತಿಗಳ ಜೊತೆಗೆ ನನಗೆ ಇರಲು ಆಗುವುದಿಲ್ಲ. ನನ್ನೊಬ್ಬನೊಟ್ಟಿಗೆ ಹೀಗೆ ಆದರೆ ನಾನು ತಡೆದುಕೊಳ್ಳುತ್ತೇನೆ, ಆದರೆ ಬೇರೆವರಿಗೆ ಹೀಗಳೆದರೆ ನನ್ನಿಂದ ತಡೆಯಲು ಆಗುವುದಿಲ್ಲ. ಅವರು ಮನುಷ್ಯರೇ ಅಲ್ಲ’ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ:ಮಂಜ vs ಸೌಂದರ್ಯ: ಕೈ-ಕೈ ಮಿಲಾಯಿಸಿದರು ಬಿಟ್ಟಿದ್ದೇಕೆ ಬಿಗ್ಬಾಸ್
ಅವಿನಾಶ್ ಅವರು ಬಹಳ ಸಮಯ ಸೀಕ್ರೆಟ್ ರೂಂನಲ್ಲಿಯೇ ಇದ್ದರು. ಬಳಿಕ ಮಾತನಾಡಿದ ಬಿಗ್ಬಾಸ್, ‘ಇಲ್ಲಿಗೆ ಬರಲು ಸಾಕಷ್ಟು ನಿಯಮಗಳು ಇರುತ್ತವೆ. ಅರ್ಧಕ್ಕೆ ನಿಲ್ಲಿಸಿ ಹೋದರೆ ಸಹ ಅದಕ್ಕೆ ಕೆಲವು ಪರಿಣಾಮಗಳು ಇರುತ್ತವೆ. ಆ ಬಗ್ಗೆ ನಾವು ನಿಮ್ಮ ಪತ್ನಿಯೊಟ್ಟಿಗೆ ಮಾತನಾಡಿದ್ದೇವೆ. ಅವರು ಈಗ ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದರು. ಬಳಿಕ ಅವಿನಾಶ್ ಪತ್ನಿ ಅವರು ಫೋನಿನ ಮೂಲಕ ಮಾತನಾಡಿದರು. ‘ನೀವು ಬಿಟ್ಟುಕೊಡಬೇಡಿ, ಬಿಟ್ಟುಕೊಡುವ ವ್ಯಕ್ತಿತ್ವ ನಿಮ್ಮದಲ್ಲ. ಅದೆಲ್ಲ ಆಗುತ್ತಲೇ ಇರುತ್ತದೆ. ‘ಜೈ ಶ್ರೀರಾಮ್’, ಶ್ರೀರಾಮನನ್ನು ನೆನಪು ಮಾಡಿಕೊಳ್ಳಿ, ಧೈರ್ಯ ತೆಗೆದುಕೊಂಡು ಮುಂದೆ ಹೋಗಿ’ ಎಂದು ಸ್ಪೂರ್ತಿ ತುಂಬಿದರು.
ಪತ್ನಿಯೊಟ್ಟಿಗೆ ಮಾತನಾಡಿದ ಕೂಡಲೇ ಅವಿನಾಶ್ ಅವರು ಮತ್ತೆ ಸ್ಟೆಡಿ ಆದರು. ಶಕ್ತಿ ಮೀರಿ ಆಟ ಆಡ್ತೀನಿ, ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದರು. ಬಳಿಕ ಹೊರಗೆ ಬಂದ ಮೇಲೆ ಸಹ ಮಂಜನೊಟ್ಟಿಗೆ ಹೆಚ್ಚು ಮಾತನಾಡಲು ಸಹ ಹೋಗಲಿಲ್ಲ. ಮಂಜ ಅವಿನಾಶ್ ಅನ್ನು ರೇಗಿಸಿದರೂ ಸಹ ನಗುತ್ತಲೇ ಸುಮ್ಮನಿದ್ದರು. ಆ ಮೂಲಕ ಮಂಜನನ್ನು ಭಿನ್ನವಾಗಿ ಎದುರಿಸಲು ರೆಡಿಯಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ