Bigg Boss Kannada 8 Updates, Day 1: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಶುರುವಾಯ್ತು ಪ್ರೇಮ್ ಕಹಾನಿ!
Bigg Boss Kannada Season 8, Day 1: ಹಾಸ್ಯನಟ ಮಂಜು ಪಾವಗಡ ಹಾಗೂ ಮಾಡೆಲಿಂಗ್ ಕ್ಷೇತ್ರದ ಬೆಡಗಿ ದಿವ್ಯಾ ಸುರೇಶ್ ನಡುವಿನ ಸಣ್ಣ ಸಂವಾದದ ತುಣುಕಿನಲ್ಲಿ ಅವರಿಬ್ಬರು ಏನೋ ಏನೋ ಆಗಿದೆ ಎಂಬಂತೆ ನಡೆದುಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ನಿನ್ನೆ (ಫೆಬ್ರವರಿ 28) ಚಾಲನೆ ದೊರಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಿರೂಪಣೆಯ ಬಹುಜನಪ್ರಿಯ ರಿಯಾಲಿಟಿ ಶೋ ಆರಂಭವಾಗಿದೆ. ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗಬಹುದು ಎಂದು ಈ ಮೊದಲು ಜನರು ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ಅವರು ದಿನನಿತ್ಯ ಏನೇನು ಮಾಡುತ್ತಾರೆ ಎಂಬ ಬಗ್ಗೆ ಜನರು ಕಾತುರರಾಗಿದ್ದಾರೆ. ಈ ಬಾರಿಯ ಬಿಗ್ ಬಾಸ್ನಲ್ಲಿ ವಿವಿಧ ಕ್ಷೇತ್ರದ ಒಟ್ಟು 17 ಕಂಟೆಸ್ಟೆಂಟ್ಗಳಿದ್ದಾರೆ. ಸಿನಿಮಾ, ನಾಟಕ, ಹಾಸ್ಯ, ಮಾಡೆಲಿಂಗ್, ಸಾಮಾಜಿಕ ಜಾಲತಾಣ ಸ್ಟಾರ್ಗಳು, ಸಾಧಕರು, ಕ್ರೀಡಾಳುಗಳು, ಯುವಕ, ಯುವತಿ, ಹಿರಿಯರು.. ಹೀಗೆ ಎಲ್ಲಾ ರೀತಿಯ ಅಭ್ಯರ್ಥಿಗಳು ಬಾಸ್ ಮನೆ ಹೊಕ್ಕಿದ್ದಾರೆ. ಈ ನಡುವೆ ಇಂದು ಬೆಳಗ್ಗೆ ವಾಹಿನಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಬಿಗ್ ಬಾಸ್ ಮನೆಯ ಹೊಸ ವಿಚಾರ ಹೊರಬಿದ್ದಿದೆ.
ಹಾಸ್ಯನಟ ಮಂಜು ಪಾವಗಡ ಹಾಗೂ ಮಾಡೆಲಿಂಗ್ ಕ್ಷೇತ್ರದ ಬೆಡಗಿ ದಿವ್ಯಾ ಸುರೇಶ್ ನಡುವಿನ ಸಣ್ಣ ಸಂವಾದದ ತುಣುಕಿನಲ್ಲಿ ಅವರಿಬ್ಬರು ಏನೋ ಏನೋ ಆಗಿದೆ ಎಂಬಂತೆ ನಡೆದುಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ಮೊದಲ ದಿನದ ಪ್ರೋಮೊ ಬಿಡುಗಡೆಯಾಗಿದೆ. ದಿವ್ಯಾ ಮಾತಿಗೆ ಮಜಾಭಾರತ ಮಂಜು ಪಾವಗಡ ಫಿದಾ ಆಗಿದ್ದಾರೆ.
ನಿಮಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ! ಬಿಗ್ ಬಾಸ್ ಮನೆ ಪ್ರವೇಶಿಸಿದ ಸ್ಪರ್ಧಿಗಳು ತಮ್ಮ ಲಗೇಜ್ ಜೋಡಿಸಿಕೊಳ್ಳುತ್ತಿದ್ದರು. ಈ ವೇಳೆ, ದಿವ್ಯಾ ಸುರೇಶ್ ಬಳಿ ಬಂದ ಮಂಜು ಪಾವಗಡ, ‘ನಿಮಗೆ ಏನು ಬೇಕು ಕೇಳಿ, ನಿಮಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ’ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ದಿವ್ಯಾ ಸುರೇಶ್ ‘ನಿಮ್ಮ ಕೈಯಲ್ಲಿ ಕೆಲಸ ಮಾಡಿಸಲ್ಲ. ನಿಮ್ಮ ಕೈಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ’ ಎಂದು ತಿಳಿಸಿದ್ದಾರೆ.
ನಿಮ್ಮ ಕೈಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ ಎಂದು ದಿವ್ಯಾ ಹೇಳಿದ ಮಾತು ಮಂಜು ಪಾವಗಡ ಹೃದಯ ಸ್ಪರ್ಶಿಸಿದೆ. ಇದೇ ವೇಳೆ ಹಿನ್ನೆಲೆಯಲ್ಲಿ ಏನೋ ಏನೋ ಆಗಿದೆ ಎಂಬ ಹಾಡು ಹಾಕಿದ್ದಾರೆ. ಪ್ರೋಮೊದಲ್ಲಿ ಇಷ್ಟನ್ನು ತೋರಿಸಿರುವ ಬಿಗ್ ಬಾಸ್ ಉಳಿದ ಮಾಹಿತಿಗಾಗಿ ಇಂದು ರಾತ್ರಿಯ ಸಂಚಿಕೆ ನೋಡುವಂತೆ ಕುತೂಹಲ ಹೆಚ್ಚಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಮನೋರಂಜನಾ ಕಾರ್ಯಕ್ರಮ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಹೆಚ್ಚಾಗಿ ಲಾಗ್ ಮಂಜು ಎಂದೇ ಪ್ರಸಿದ್ಧಿ ಪಡೆದಿರುವ ಮಂಜು, ತಮ್ಮ ವಿಭಿನ್ನ ಡೈಲಾಗ್ಗಳಿಂದ ಜನರಲ್ಲಿ ಹೆಚ್ಚು ಮನೆಮಾತಾಗಿದ್ದಾರೆ. ಮಜಾ ಭಾರತ ಕಾರ್ಯಕ್ರಮದಲ್ಲಿ ಮಿಂಚುತ್ತಿರುವ ಮಂಜು ಪಾವಗಡ ಸ್ಯಾಂಡಲ್ವುಡ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವುದಲ್ಲದೆ ಕೆಲವು ಚಿತ್ರಗಳಲ್ಲಿ ತಮ್ಮ ಕಾಮಿಡಿ ಮೂಲಕ ಜನರ ಹೃದಯ ಗೆಲ್ಲುವ ಯತ್ನದಲ್ಲಿದ್ದಾರೆ. ಬಿಗ್ ಬಾಸ್ ಮನೆಯ 10ನೇ ಕಂಟೆಸ್ಟೆಂಟ್ ಆಗಿ ಪ್ರವೇಶ ಪಡೆದಿದ್ದಾರೆ.
ರೂಪದರ್ಶಿ, ಸಿನಿಮಾ ನಟಿ ಆಗಿರುವ ದಿವ್ಯಾ ಸುರೇಶ್, 2017ರಲ್ಲಿ ‘ಸೌತ್ ಇಂಡಿಯಾ ಮಿಸ್’ ಪಟ್ಟ ಗೆದ್ದಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ ‘ಹಿಲ್ಟನ್ ಹೌಸ್’ ಮೂಲಕ ದಿವ್ಯ ಸುರೇಶ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ನರೇಂದ್ರ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. 2019ರಲ್ಲಿ ತೆರೆಕಂಡ ‘ಡಿಗ್ರಿ ಕಾಲೇಜ್’ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲೂ ಮಿಂಚಿದ್ದರು.
ಇದನ್ನೂ ಓದಿ: Bigg Boss Kannada 8: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನ ಏನೇನಾಯ್ತು? 17 ಸ್ಪರ್ಧಿಗಳ ವಿವರ ಇಲ್ಲಿದೆ
Manju Pavagada Profile: ಬಿಗ್ ಬಾಸ್ ಮನೆಯಲ್ಲಿ 10ನೇ ಅಭ್ಯರ್ಥಿಯಾಗಿ ಮಂಜು ಪಾವಗಡ
Published On - 4:23 pm, Mon, 1 March 21