Bigg Boss Kannada 8: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನ ಏನೇನಾಯ್ತು? 17 ಸ್ಪರ್ಧಿಗಳ ವಿವರ ಇಲ್ಲಿದೆ

Bigg Boss Kannada 8 First Day Highlights: ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗಿದ್ದಾರೆ ಎಂಬ ಕುತೂಹಲವಿದ್ದರೆ ಅವರೆಲ್ಲರ ಪಟ್ಟಿಯನ್ನು ಒಟ್ಟಾಗಿ ಟಿವಿ9 ಕನ್ನಡ ಡಿಜಿಟಲ್ ನಿಮ್ಮ ಮುಂದಿಟ್ಟಿದೆ.

  • TV9 Web Team
  • Published On - 12:14 PM, 1 Mar 2021
Bigg Boss Kannada 8: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನ ಏನೇನಾಯ್ತು? 17 ಸ್ಪರ್ಧಿಗಳ ವಿವರ ಇಲ್ಲಿದೆ
ಬಿಗ್ ಬಾಸ್ ಕನ್ನಡ ಸೀಸನ್​ 8

ಕನ್ನಡ ಕಿರುತೆರೆ ವಾಹಿನಿಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಗೆ ನಿನ್ನೆ (ಫೆ.28) ಸಂಜೆ 6 ಗಂಟೆಗೆ ಚಾಲನೆ ದೊರೆತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಬಿಗ್ ಬಾಸ್ ಮನೆಗೆ ತೆರಳಿ, ದೇವರಿಗೆ ನಮಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ಬಾರಿ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಬಹುದು, ಏನೆಲ್ಲಾ ಸ್ಪರ್ಧೆಗಳು, ಮಾತುಕತೆ, ಗಾಸಿಪ್​ಗಳು ಹರಿದಾಡಬಹುದು ಎಂದು ಕಿರುತೆರೆ ಶೋ ಅಭಿಮಾನಿಗಳು ತಮ್ಮತಮ್ಮಲ್ಲೇ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದರು. ಇದೀಗ ಮನೆಗೆ ಪ್ರವೇಶ ಪಡೆದ 17 ಅಭ್ಯರ್ಥಿಗಳ ಪಟ್ಟಿ ಕಣ್ಣ ಮುಂದಿದೆ. ಅವರೇನು ಮಾಡುತ್ತಾರೆ ಎಂಬ ಕಾತರಕ್ಕೆ ದಿನವೂ ಉತ್ತರ ಸಿಗಲಿದೆ.

ಭಾರತದಲ್ಲೇ ಬಹುಜನಪ್ರಿಯ ಮನರಂಜನಾ ಶೋ ಬಿಗ್ ಬಾಸ್. ಬಿಗ್ ಬಾಸ್ ಕನ್ನಡದಲ್ಲಿ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಹೆಸರಾಂತ ಕಾರ್ಯಕ್ರಮವಾಗಿದೆ. ಕನ್ನಡದಲ್ಲಿ ಈವರೆಗೆ ಒಟ್ಟು 7 ಸೀಸನ್​ಗಳಾಗಿದ್ದು. ನಿನ್ನೆ ಕನ್ನಡದ 8ನೇ ಸೀಸನ್ ಬಿಗ್ ಬಾಸ್ ಆರಂಭವಾಗಿದೆ.

ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗಿದ್ದಾರೆ ಎಂಬ ಕುತೂಹಲವಿದ್ದರೆ ಅವರೆಲ್ಲರ ಪಟ್ಟಿಯನ್ನು ಒಟ್ಟಾಗಿ ಟಿವಿ9 ಕನ್ನಡ ಡಿಜಿಟಲ್ ನಿಮ್ಮ ಮುಂದಿಟ್ಟಿದೆ. ಅವರೆಲ್ಲರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಈ ಲಿಂಕ್ ಹಿಂಬಾಲಿಸಬಹುದು.  ಬಿಗ್ ಬಾಸ್ ಕನ್ನಡ ಸೀಸನ್ 8ರ ಎಲ್ಲಾ ಅಭ್ಯರ್ಥಿಗಳ ವಿವರಗಳು

ಬಿಗ್ ಬಾಸ್ ಸೀಸನ್ 8ರ ಮೊದಲ ದಿನ ಏನೇನಾಯ್ತು?
ಬಿಗ್ ಬಾಸ್ ಸೀಸನ್ 8ರ 1ನೇ ಅಭ್ಯರ್ಥಿಯಾಗಿ ಮನೆ ಪ್ರವೇಶಿಸಿದವರು ಟಿಕ್​ಟಾಕ್ ಸ್ಟಾರ್ ಧನುಶ್ರೀ. ಬಿಗ್ ಬಾಸ್ ಮನೆಯ ಮೊದಲನೇ ಅಭ್ಯರ್ಥಿ ಧನುಶ್ರೀಯನ್ನು ನಿವೇದಿತಾ ಗೌಡ ನೃತ್ಯ ಮಾಡಿ ಸ್ವಾಗತಿಸಿದ್ದಾರೆ. ಅವರ ಶ್ವಾನ ಪ್ರೀತಿ, ಪುಸ್ತಕ ಪ್ರೇಮವನ್ನು ಪ್ರೋಮೊನಲ್ಲಿ ತೋರಿಸಾಗಿದೆ. ಯಾರಾದ್ರೂ ಶೋ ಆಫ್ ಮಾಡಿದ್ರೆ ಇಷ್ಟ ಆಗಲ್ಲ. ಗೌರವಯುತವಾಗಿ ಮಾತನಾಡಿಸಿದರೆ ಇಷ್ಟ ಆಗುತ್ತೆ. ಸಿಟ್ಟು ಸ್ವಲ್ಪ ಬೇಗ ಬರುತ್ತೆ. ಟಿಕ್​ಟಾಕ್ ಮುಗಿದಾಗ ಎಲ್ಲಾ ಮುಗೀತು ಅಂತ ಟೀಸ್ ಮಾಡಿದ್ರು ಎಂದು ಧನುಶ್ರೀ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 8ರ 2ನೇ ಅಭ್ಯರ್ಥಿಯಾಗಿ ಮನೆಗೆ ಹೋದವರು ಶುಭಾ ಪೂಂಜಾ. ಕಳೆದ ಏಳು ಸೀಸನ್​ನಲ್ಲೂ ನಿಮಗೆ ಬುಲಾವ್ ಬರುತ್ತಿತ್ತು. ಆದರೆ, ಈ ಬಾರಿಯೇ ಯಾಕೆ ಬಿಗ್ ಬಾಸ್​ಗೆ ಆಗಮಿಸಿದಿರಿ ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದರು. ಶೀಘ್ರದಲ್ಲೇ ಮದುವೆ ಆಗಲಿದ್ದೇನೆ. ಈಗ ಬಿಗ್ ಬಾಸ್ ಮನೆಗೆ ಹೋಗದಿದ್ದರೆ ಇನ್ನೆಂದೂ ಹೋಗಲು ಆಗುವುದಿಲ್ಲ ಎಂದು ಯೋಚಿಸಿ ಈಗ ಬರುತ್ತಿದ್ದೇನೆ. ಬಿಗ್ ಬಾಸ್ ಮನೆಗೆ ಆಗಮಿಸಲು ಇದು ಸರಿಯಾದ ಸಮಯ ಎಂದು ಶುಭಾ ಪೂಂಜ ಹೇಳಿದ್ದಾರೆ. ನನ್ನ ಎಲ್ಲಾ ಕೆಲಸಗಳಲ್ಲೂ ಅಮ್ಮ ತುಂಬಾ ಪ್ರೋತ್ಸಾಹ ನೀಡುತ್ತಾರೆ ಎಂದು ಶುಭಾ ತಿಳಿಸಿದ್ದಾರೆ.

ಬಿಗ್ ಬಾಸ್ 3ನೇ ಅಭ್ಯರ್ಥಿಯಾಗಿ ಮನೆ ಪ್ರವೇಶ ಮಾಡಿದವರು ಚಾಮಯ್ಯ ಮೇಷ್ಟ್ರು ಅಶ್ವಥ್ ಮಗ ಶಂಕರ್ ಅಶ್ವಥ್. ಶಂಕರ್ ಅಶ್ವಥ್ ಬಿಗ್ ಬಾಸ್ ವೇದಿಕೆಗೆ ಆಗಮಿಸಿ ಮಾತನಾಡಿದ್ದಾರೆ. ತಂದೆ ಕೆ.ಎಸ್. ಅಶ್ವಥ್​ ಆಸ್ಪತ್ರೆಯಲ್ಲಿದ್ದಾಗ ಯಾವುದೇ ಸಹಾಯ ಬೇಕಿದ್ದರೂ ಕೇಳಿ ಎಂದು ಸುದೀಪ್ ಹೇಳಿದ್ದ ಮಾತುಗಳನ್ನು ಸ್ಮರಿಸಿಕೊಂಡಿದ್ದಾರೆ. ಕಷ್ಟ ಕಾಲದಲ್ಲಿ, 60 ವರ್ಷ ದಾಟಿದ್ಧಾಗ ಏನೂ ಮಾಡದೆ ಕುಳಿತುಕೊಳ್ಳುವ ಬದಲು ಏನಾದರೂ ಕೆಲಸ ಮಾಡುವುದು ಒಳ್ಳೆಯದು ಎಂದು ತಿಳಿದೆ. ಕ್ಯಾಬ್ ಓಡಿಸಲು ಆರಂಭಿಸಿದೆ ಎಂದು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯ 4ನೇ ಅಭ್ಯರ್ಥಿ ಹಾಡುಗಾರ ವಿಶ್ವ. ಮತ್ತು 5ನೇ ಅಭ್ಯರ್ಥಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಮನೆ ಪ್ರವೇಶಿಸಿದ್ದಾರೆ. ನಾನು ಬಿಗ್ ಬಾಸ್ ಮನೆಗೆ ಹೋಗಲು ಅಷ್ಟಾಗಿ ಆಸಕ್ತಿ ವಹಿಸಿರಲಿಲ್ಲ. ಆದರೆ, ಈ ಬಾರಿ ಬರುವಂತಾಯಿತು. ಬಿಗ್ ಬಾಸ್ ಮನೆಯಲ್ಲಿ ಖುಷಿಖುಷಿಯಾಗೇ ಇರುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವೈಷ್ಣವಿ ತಂದೆ, ತಾಯಿ ವೇದಿಕೆಯಲ್ಲಿ ಹಾಜರಿದ್ದರು. ನಿಮ್ಮ ಮಗಳಾಗಿ ಇರುತ್ತೇನೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್​ನ 6ನೇ ಅಭ್ಯರ್ಥಿ ಅರವಿಂದ ಕೆ.ಪಿ. ಮಲಯಾಳಂನ ಬೆಂಗಳೂರ್ ಡೇಸ್ ಚಲನಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿತ್ತು. ಕ್ಯಾಮರಾ ಮುಂದೆ ಬಂದರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಆಗ ತಿಳಿಯಿತು. ಬೈಕ್ ರೇಸಿಂಗ್ ವೇಳೆ ಬಹಳಷ್ಟು ಬಾರಿ ಅಪಘಾತ ಆಗಿರುವುದನ್ನು ಹೇಳಿಕೊಂಡರು. ಬಹಳ ಎಕ್ಸೈಟ್ ಆಗಿದೆ. ಮಾತೇ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.

ಬಿಗ್ ಬಾಸ್ 7ನೇ ಅಭ್ಯರ್ಥಿ ಖ್ಯಾತ ನಟಿ ನಿಧಿ ಸುಬ್ಬಯ್ಯ. ನಾನು ಬಹಳಷ್ಟು ಖುಷಿಯಾಗಿದ್ದೇನೆ. ಜತೆಗೆ, ನರ್ವಸ್ ಕೂಡ ಆಗಿದ್ದೇನೆ. ನನಗೆ ಸಿಟ್ಟು ಜಾಸ್ತಿ. ಆದರೆ ಅಷ್ಟೇ ಬೇಗ ಕಡಿಮೆ ಆಗುತ್ತೆ ಎಂದು ನಿಧಿ ಸುಬ್ಬಯ್ಯ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಿರುವುದಕ್ಕೆ ಖುಷಿ ಮತ್ತು ನರ್ವಸ್ ಆಗಿದೆ. ಸುಮಾರಾಗಿ ಅಡುಗೆ ಮಾಡಲು ಬರುತ್ತೆ. ಬಿಗ್ ಬಾಸ್ ಮನೆಯೊಳಗೆ ಜಗಳಗಳಾದರೆ ಹೊಂದಿಕೊಂಡು ಹೋಗಬೇಕಾಗುತ್ತೆ ಎಂದು ಹೇಳಿದ್ದಾರೆ. ಅವಳು ಬಹುಬೇಗ ಇತರರನ್ನು ನಂಬುತ್ತಾಳೆ. ಅದೇ ಕಷ್ಟ ಆಗಬಹುದು ಎಂದು ನಿಧಿ ತಾಯಿ ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಯ 8ನೇ ಅಭ್ಯರ್ಥಿಯಾಗಿ ಜತೆಯಾದವರು ಶಮಂತ್ ಗೌಡ ಅಂದರೆ ಬ್ರೋ ಗೌಡ. ಶಮಂತ್ ಗೌಡ ಬ್ರೋ ಗೌಡ ಯಾಕಾದರು ಎಂದು ಅವರೇ ಹೇಳಿಕೊಂಡಿದ್ದಾರೆ. ತಾವು ವೆಬ್​ ಸೀರೀಸ್ ಒಂದರಲ್ಲಿ ನಟಿಸಿದ್ದರು. ಅದರಲ್ಲಿ ತಮ್ಮ ಪಾತ್ರದ ಹೆಸರು ಬ್ರೋ ಗೌಡ ಎಂಬುದಾಗಿತ್ತು. ಆ ಬಳಿಕ ತಮ್ಮ ಹೆಸರು ಬ್ರೋ ಗೌಡ ಎಂದೇ ಜನಪ್ರಿಯವಾಯಿತು ಎಂದು ಹೇಳಿದ್ದಾರೆ.

ಬಿಗ್ ಬಾಸ್​ನ 9ನೇ ಅಭ್ಯರ್ಥಿಯಾಗಿ ಮನೆಗೆ ಬಂದವರು ಗೀತಾ ಭಾರತಿ ಭಟ್. ಗೀತಾ ಭಾರತಿ ಭಟ್ ಅಂದರೆ ಗೊತ್ತಾಗುತ್ತೋ ಇಲ್ವೋ, ಬ್ರಹ್ಮಗಂಟು ಗುಂಡಮ್ಮ ಅಂದ್ರೆ ಯಾರು ಎಂದು ಗೊತ್ತಲ್ವಾ? ಅವರೇ ಬಿಗ್ ಬಾಸ್ ಮನೆಯ 9ನೇ ಅಭ್ಯರ್ಥಿ. ಬಿಗ್ ಬಾಸ್ ಮನೆಯ 10ನೇ ಕಂಟೆಸ್ಟೆಂಟ್ ಮಜಾ ಭಾರತ ಖ್ಯಾತಿಯ ಹಾಸ್ಯ ನಟ ಮಂಜು ಪಾವಗಡ. ಬಿಗ್ ಬಾಸ್ ಮನೆಯಲ್ಲೂ ಮಜಾ ಮಾಡಲು ಮಂಜು ಕಾತುರದಿಂದಿದ್ದಾರೆ.

ಬಿಗ್ ಬಾಸ್ ಸೀಸನ್ 8ರ 11ನೇ ಕಂಟೆಸ್ಟೆಂಟ್ ದಿವ್ಯಾ ಸುರೇಶ್. ಪುಟ್ಟಗೌರಿ ಮದುವೆಯ ಅಜ್ಜಮ್ಮ, ಚಂದ್ರಕಲಾ ಮೋಹನ್ ಬಿಗ್ ಬಾಸ್ ಮನೆಯ 12ನೇ ಅಭ್ಯರ್ಥಿ. ತಮ್ಮ ನಾಟಕ, ನಟನೆಯ ಜೀವನ, ಸುಖ ದುಃಖಗಳನ್ನು ಅಜ್ಜಮ್ಮ ಹಂಚಿಕೊಂಡಿದ್ದಾರೆ. ಬಿಗ್ ಬಾಸ್​ನ 13ನೇ ಅಭ್ಯರ್ಥಿಯಾಗಿ ರಘು ವೈನ್ ಸ್ಟೋರ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಸರುವಾಸಿಯಾದ ರಘು ಗೌಡ ಬಂದಿದ್ದಾರೆ.

ಬಿಗ್ ಬಾಸ್ ಮನೆಯ 14ನೇ ಅಭ್ಯರ್ಥಿಯಾಗಿ ಸದಾ ವಿವಾದಗಳ ಬೆನ್ನತ್ತುವ ಪ್ರಶಾಂತ್ ಸಂಬರಗಿ, 15ನೇ ವ್ಯಕ್ತಿಯಾಗಿ ನಟಿ ದಿವ್ಯಾ ಉರುಡುಗ, 16 ಮತ್ತು 17ನೇ ಅಭ್ಯರ್ಥಿಯಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ರಾಜೀವ್ ಗೌಡ ಮತ್ತು ನಟಿ, ಡಬ್ಬಿಂಗ್ ಕಲಾವಿದೆ ನಿರ್ಮಲಾ ಚೆನ್ನಪ್ಪ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Bigg Boss Kannada 8: ಕನ್ನಡ ಬಿಗ್​ ಬಾಸ್​​ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!

Shankar Ashwath Profile: ಚಾಮಯ್ಯ ಮೇಸ್ಟ್ರ ಮಗ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಯ ಹಿರಿಯ ಅಭ್ಯರ್ಥಿ